ಉಗ್ರ ಸ್ವರೂಪದತ್ತ ಫೊನಿ ಚಂಡಮಾರುತ: ಭಾರೀ ಮಳೆ ಸಾಧ್ಯತೆ, ಮೂರು ರಾಜ್ಯಗಳಲ್ಲಿ ಹೈ ಅಲರ್ಟ್‌!

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ‘ಫೊನಿ’ ತೀವ್ರ ವೇಗ ಪಡೆದುಕೊಳ್ಳುತ್ತಿದ್ದು, ಗಂಟೆಗೆ 200 ಕಿ.ಮೀ ವೇಗದಲ್ಲಿ ಬೀಸುವ ಮೂಲಕ “ಅತ್ಯಂತ ತೀವ್ರ ಸ್ವರೂಪ’ದ ಚಂಡಮಾರುತವಾಗಿ ಮಾರ್ಪಡಲಿದೆ ಎಂದು ಭಾರತೀಯ ನೌಕಾಪಡೆಯು ತಿಳಿಸಿದೆ.

ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಗಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಮೇ 3ರಂದು ಒಡಿಶಾದ ಕರಾವಳಿ ಭಾಗಕ್ಕೆ ಅಪ್ಪಳಿಸಲಿರುವ ಫೊನಿ ಚಂಡಮಾರುತವು ಗಂಟೆಗೆ 175 – 185 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಎಚ್‌ ಆರ್‌ ಬಿಸ್ವಾಸ್‌ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತನ್ನ ಅಧಿಕಾರಿಗಳಿಗೆ ಮತ್ತು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಗೆ ಫೊನಿ ಚಂಡಮಾರುತ ಪ್ರಭಾವ ಬೀರುವ ರಾಜ್ಯಗಳ ಜತೆ ಸಂಪರ್ಕದಲ್ಲಿದ್ದು, ಸೈಕ್ಲೋನ್ ಫೊನಿಯಿಂದಾಗುವ ಅಪಾಯವನ್ನು ಎದುರಿಸುವಂತೆ ಸೂಚಿಸಿದ್ದಾರೆ.

ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿರುವ ಒಡಿಶಾ ಕರಾವಳಿಯ ಹಲವಾರು ಪ್ರದೇಶಗಳಲ್ಲಿ ಹವಾಮಾನ ಇಲಾಖೆಯು “ಹಳದಿ ಎಚ್ಚರಿಕೆ”ಯನ್ನು ಜಾರಿ ಮಾಡಿದೆ. ಒಡಿಶಾದ ಕರಾವಳಿಯಲ್ಲಿನ ಚಂಡಮಾರುತವು ಪಶ್ಚಿಮ ಬಂಗಾಳದ ಕಡೆಗೆ ತೆರಳಲಿದೆ. ಹೀಗಾಗಿ ರೈಲ್ವೆ ಸಂಚಾರವನ್ನು ರದ್ದುಪಡಿಸಬೇಕೆಂದು ಈಗಾಗಲೇ ಸೂಚಿಸಿದ್ದೇವೆ ಮತ್ತು ಜನರು ಮನಯಲ್ಲೇ ಉಳಿಯುವಂತೆ ಸಲಹೆ ನೀಡಿದ್ದೇವೆ ಎಂದು ಬಿಸ್ವಾಸ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಫೊನಿ ಚಂಡಮಾರುತವು ತೀವ್ರಗೊಂಡರೆ ಗಂಟೆಗೆ 195 ರಿಂದ 200 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹಾಗಾಗಿ ಈ ಮೂರು ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಸ್ಟ್‌ ಗಾರ್ಡ್‌, ನೌಕಾದಳದ ಹಡಗು, ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು 41 ಎನ್‌ಡಿಆರ್‌ಎಫ್‌ ಪಡೆಗಳನ್ನು ನೇಮಿಸಲಾಗಿದ್ದು, ಆಂಧ್ರಪ್ರದೇಶದಲ್ಲಿ 8, ಒಡಿಶಾ 28 ಮತ್ತು ಪಶ್ಚಿಮ ಬಂಗಾಳದಲ್ಲಿ 5 ತಂಡಗಳನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್)