ಫೊನಿ ಚಂಡಮಾರುತ ಮೇ 3ರಂದು ಒಡಿಶಾದ ಗೋಪಾಲ್​ಪುರ್​ ಮತ್ತು ಚಾಂದ್​ಬಲಿಯಲ್ಲಿ ಅಪ್ಪಳಿಸುವ ಸಾಧ್ಯತೆ

ನವದೆಹಲಿ: ಭಾರಿ ಚಂಡಮಾರುತವಾಗಿ ರೂಪಾಂತರಗೊಂಡಿರುವ ಫೊನಿ ಚಂಡಮಾರುತ ಮೇ 3ರಂದು ಒಡಿಶಾದ ಪುರಿ ಸಮುದ್ರ ತಟದ ದಕ್ಷಿಣ ಭಾಗದಲ್ಲಿರುವ ಗೋಪಾಲ್​ಪುರ್​ ಮತ್ತು ಚಾಂದ್​ಬಲಿಯಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಹೇಳಿದೆ.
ಈ ಸಂದರ್ಭದಲ್ಲಿ ಗಾಳಿಯು ಗಂಟೆಗೆ 175-185 ಕಿ.ಮೀ. ವೇಗದಲ್ಲಿ ರಭಸವಾಗಿ ಬೀಸಲಿದೆ. ಗಾಳಿಯು ಗಂಟೆಗೆ 205 ಕಿ.ಮೀ. ವೇಗ ಪಡೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ತಿಳಿಸಿದೆ.

ನೆರವಿಗೆ ಧಾವಿಸಲು ಪೂರ್ವ ನೌಕಾಪಡೆ ಸಿದ್ಧತೆ
ಫೊನಿ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ತೊಂದರೆಗೀಡಾಗುವ ಪ್ರದೇಶದ ಜನತೆಯ ನೆರವಿಗೆ ಧಾವಿಸಲು ಪೂರ್ವ ನೌಕಾಪಡೆ ಕಮಾಂಡ್​ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ನೌಕಾಪಡೆ ಅಧಿಕಾರಿಗಳು ಒಡಿಶಾ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ.

ವಿಶಾಖಪಟ್ಟಣ ಮತ್ತು ಚೆನ್ನೈನಲ್ಲಿರುವ ನೌಕಾಪಡೆ ನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ರಕ್ಷಣಾ ಪರಿಕರಗಳು, ಔಷಧ ಮತ್ತಿತರ ವಸ್ತುಗಳನ್ನು ಈ ನೌಕೆಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ನೌಕಾಪಡೆಯ ಪೂರ್ವ ಕಮಾಂಡ್​ನ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)