More

    ದಿಕ್ಕೆಟ್ಟ ಸಂಸಾರ: ಪತ್ನಿಯ ಆರೈಕೆಗೆ ಬಂದಿದ್ದ ಶುಶ್ರೂಷಕಿಯತ್ತ ಆಕರ್ಷಣೆಗೊಂಡ ಪತಿ!

    ದಿಕ್ಕೆಟ್ಟ ಸಂಸಾರ: ಪತ್ನಿಯ ಆರೈಕೆಗೆ ಬಂದಿದ್ದ ಶುಶ್ರೂಷಕಿಯತ್ತ ಆಕರ್ಷಣೆಗೊಂಡ ಪತಿ!ಐವತ್ತು ವರ್ಷದ ಕ್ರಿಸ್ಟೊಫರ್ ತಮಿಳುನಾಡಿನ ಕಾರ್ಖಾನೆಯೊಂದರಲ್ಲಿ ಸೂಪರ್​ವೈಸರ್ ಆಗಿದ್ದ. ಅಲ್ಲಿನ ಕಾರ್ವಿುಕ ಯೂನಿಯನ್ ಮುಖಂಡನೂ ಆಗಿದ್ದ. ಊರಿನಲ್ಲಿ 5 ಎಕರೆ ಜಮೀನನ್ನು ಹೊಂದಿದ್ದು ಆರ್ಥಿಕವಾಗಿ ಸ್ಥಿತಿವಂತನಾಗಿದ್ದ. 40 ವರ್ಷದ ಪತ್ನಿ ಎಲಿಜಬೆತ್, 10 ವರ್ಷದ ಮಗ ಮತ್ತು 8 ವರ್ಷದ ಮಗಳ ಜತೆಗೆ ಫ್ಯಾಕ್ಟರಿಯ ಕಾಲನಿಯಲ್ಲಿದ್ದ ಮನೆಯಲ್ಲಿ ಆತ ವಾಸಿಸುತ್ತಿದ್ದ. ಎರಡು ವರ್ಷಗಳ ಹಿಂದೆ ಎಲಿಜಬೆತ್​ಗೆ ತೀವ್ರ ಹೊಟ್ಟೆನೋವುಂಟಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿದರು. ಆತ ಅವಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ. ಎಲಿಜಬೆತ್ ಒಂದು ವಾರ ಆಸ್ಪತ್ರೆಯಲ್ಲಿ ಇದ್ದಳು. ಆ ಸಮಯದಲ್ಲಿ ಕ್ರಿಸ್ಟೊಫರ್ ರಜೆ ಹಾಕಿ ಎಲಿಜಬೆತ್ ಜತೆಯಲ್ಲಿಯೇ ಇದ್ದು ಅವಳನ್ನು ನೋಡಿಕೊಂಡ.

    ಎಲಿಜಬೆತ್​ಗೆ ಶುಶ್ರೂಷೆ ಮಾಡಲು ಪದ್ಮಾ ಎನ್ನುವ ನರ್ಸ್ ಕಾಯಮ್ಮಾಗಿ ಬರುತ್ತಿದ್ದಳು. ತನ್ನ ಪತ್ನಿಗೆ ಆಕೆ ಮಾಡುತ್ತಿದ್ದ ಸೇವೆಯನ್ನು ಕಂಡು ಮೆಚ್ಚಿದ ಕ್ರಿಸ್ಟೊಫರ್ ಅವಳನ್ನು ಪರಿಚಯ ಮಾಡಿಕೊಂಡ. ಪದ್ಮಾ ಅನಾಥೆಯಾಗಿದ್ದು ದೂರದೂರಿನಿಂದ ಬಂದಿದ್ದು ಅದೇ ಪಟ್ಟಣದಲ್ಲಿದ್ದ ಸಂಬಂಧಿಕರೊಬ್ಬರ ಮನೆಯಲ್ಲಿ ಬೆಳೆದಿದ್ದಾಗಿ ತಿಳಿಯಿತು. 28 ವರ್ಷ ವಯಸ್ಸಿನ ಆಕೆ ಲಗ್ನ ಮಾಡಿಕೊಳ್ಳಲು ಇಚ್ಛಿಸದೇ ತನ್ನ ನೌಕರಿಯನ್ನು ಶ್ರದ್ಧೆಯಿಂದ ಮಾಡಬೇಕೆಂದು ತೀರ್ವನಿಸಿದ್ದಳು. ಅವಳ ಪೂರ್ವಾಪರ ಮತ್ತವಳ ಕರ್ತವ್ಯನಿಷ್ಠೆಯನ್ನು ಅರಿತ ಕ್ರಿಸ್ಟೊಫರ್ ಆ ಯುವತಿಯತ್ತ ಆಕರ್ಷಣೆಗೊಂಡ.

    ಎಲಿಜಬೆತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದನಂತರ ಕ್ರಿಸ್ಟೊಫರ್ ಪದ್ಮಾಳನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿ ಸತ್ಕರಿಸಿದ. ತನಗೆ ಬಿಡುವಾದಾಗಲೆಲ್ಲ ಅವಳೊಡನೆ ಸಂಭಾಷಿಸತೊಡಗಿದ. ಕ್ರಿಸ್ಟೊಫರ್​ನ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಆತನಿಗೆ ಕೊಡುತ್ತಿದ್ದ ಮರ್ಯಾದೆಯನ್ನು ನೋಡಿದ ಪದ್ಮಾ ಸಹ ಅವನತ್ತ ಅನುರಕ್ತಳಾದಳು. ಇಬ್ಬರೂ ಪರಸ್ಪರ ಭೇಟಿ ಮಾಡತೊಡಗಿದರು. ಕಾಲಕ್ರಮೇಣ ಅವರಿಬ್ಬರ ನಡುವೆ ದೈಹಿಕ ಸಂಪರ್ಕವೂ ಏರ್ಪಟ್ಟಿತು. ತತ್ಪಲವಾಗಿ ಪದ್ಮಾ ಗರ್ಭಿಣಿಯಾದಳು. ಗರ್ಭಪಾತ ಮಾಡಿಸಿಕೊಳ್ಳಲು ಕ್ರಿಸ್ಟೊಫರ್ ಸೂಚಿಸಿದ. ಆಕೆ ಒಪ್ಪಲಿಲ್ಲ.

    ತಾನು ಗರ್ಭಿಣಿಯಾದ ವಿಷಯ ಸಂಬಂಧಿಕರಿಗೆ ತಿಳಿಯಬಾರದೆಂದು ತನಗಾಗಿ ಒಂದು ಸಣ್ಣ ಮನೆಯನ್ನು ಗೊತ್ತು ಮಾಡಲು ಪದ್ಮಾ ಕ್ರಿಸ್ಟೊಫರ್​ನನ್ನು ಕೋರಿದಳು. ಆತ ತನ್ನ ಕಾರ್ಖಾನೆಯ ಬಳಿಯೇ ಅವಳಿಗಾಗಿ ಒಂದು ಮನೆಯನ್ನು ಬಾಡಿಗೆಗೆ ಪಡೆದ. ಗರ್ಭಿಣಿಯಾದ ಆರು ತಿಂಗಳ ನಂತರ ಪದ್ಮಾ ಕೆಲಸಕ್ಕೆ ರಾಜೀನಾಮೆಯಿತ್ತಳು. ಆಗ ಅವಳನ್ನು ಸಲಹುವ ಜವಾಬ್ದಾರಿಯೂ ಕ್ರಿಸ್ಟೊಫರ್​ನ ಮೇಲೆ ಬಿದ್ದಿತು. ಆರ್ಥಿಕವಾಗಿ ಇದು ಹೊರೆಯಾದರೂ ಪದ್ಮಾಳ ಮೇಲಿನ ಪ್ರೀತಿಯಿಂದ ಕ್ರಿಸ್ಟೊಫರ್ ಅದನ್ನು ತಾಳಿಕೊಂಡ.

    ಪುತ್ರ ಜನಿಸಿದ ಮೂರು ತಿಂಗಳ ಬಳಿಕ ಪದ್ಮಾ ತನ್ನನ್ನು ಮದುವೆಯಾಗೆಂದು ಕ್ರಿಸ್ಟೊಫರ್​ನನ್ನು ಒತ್ತಾಯಿಸತೊಡಗಿದಳು. ‘ನೀನು ನನ್ನನ್ನು ಮದುವೆಯಾಗದಿದ್ದರೆ ಸಮಾಜದಲ್ಲಿ ನನಗೆ ವೇಶ್ಯೆಯೆಂದು ಹೆಸರಾಗುತ್ತದೆ. ನನ್ನ ಮಗನಿಗೆ ವ್ಯಭಿಚಾರಿಣಿಯ ಮಗನೆಂದು ಹಣೆಪಟ್ಟಿ ಬರುತ್ತದೆ. ಇದಾಗುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ’ ಎಂದಳು. ಕ್ರಿಸ್ಟೊಫರ್ ಈ ಬಗ್ಗೆ ತಲೆಕೆಡಿಸಿಕೊಳ್ಳದಿದ್ದಾಗ ಪದ್ಮಾ ಅವನನ್ನು ಪ್ರತಿದಿನವೂ ಪೀಡಿಸತೊಡಗಿದಳು. ಮೊದಲ ಪತ್ನಿ ಜೀವಂತವಿರುವಾಗಲೇ ಎರಡನೆಯ ಲಗ್ನವಾಗುವುದು ಅಪರಾಧವೆಂದು ಕ್ರಿಸ್ಟೊಫರ್​ಗೆ ತಿಳಿದಿತ್ತು. ತಾನು ಎರಡನೆಯ ಮದುವೆಯಾಗಿರುವುದಾಗಿ ಒಂದು ವೇಳೆ ಎಲಿಜಬೆತ್ ದೂರನ್ನು ಕೊಟ್ಟರೆ ತನ್ನ ಮೇಲೆ ಕ್ರಿಮಿನಲ್ ಕೇಸು ದಾಖಲಾಗುವುದಲ್ಲದೆ, ನೌಕರಿಯೂ ಹೋಗುತ್ತದೆ ಎಂದು ಅವನಿಗೆ ಖಾತ್ರಿಯಿತ್ತು. ಹೀಗಾಗಿ, ಕೆಲದಿನಗಳ ನಂತರ ಎಲಿಜಬೆತ್​ಗೆ ಡಿವೋರ್ಸ್ ಕೊಟ್ಟು ಆನಂತರ ಪದ್ಮಾಳನ್ನು ಲಗ್ನವಾಗುವುದೆಂದು ಆತ ಲೆಕ್ಕಾಚಾರ ಹಾಕಿದ. ಇದನ್ನೇ ಪದ್ಮಾಳಿಗೆ ಹೇಳಿ ಅವಳನ್ನು ಸಮಾಧಾನಗೊಳಿಸಿದ.

    ಒಂದು ವರ್ಷವಾದರೂ ಪರಿಸ್ಥಿತಿ ಬದಲಾಗದಿದ್ದಾಗ ಎಲಿಜಬೆತ್​ಳನ್ನು ಕೂಡಲೇ ತೊರೆದು ತನ್ನ ಮನೆಯಲ್ಲಿಯೇ ಬಂದು ವಾಸಿಸಬೇಕೆಂದು ಪದ್ಮಾ ಕ್ರಿಸ್ಟೊಫರ್​ನ ಮೇಲೆ ಒತ್ತಡ ಹೇರತೊಡಗಿದಳು. ಆತ ಈ ಬಗ್ಗೆ ತಲೆಕೆಡಿಸಿಕೊಳ್ಳದಿದ್ದಾಗ ಆತನ ಕಚೇರಿಗೇ ತನ್ನ ಮಗನೊಂದಿಗೆ ಹೋಗಿ ಎಲ್ಲರೆದುರಿಗೆ ರಂಪಾಟ ಮಾಡಿದಳು. ಅವಳನ್ನು ಸಮಾಧಾನಪಡಿಸಿದ ಕ್ರಿಸ್ಟೋಪರ್ ಮೂರು ತಿಂಗಳೊಳಗೆ ಮದುವೆಯಾಗುವುದಾಗಿ ತನ್ನ ಕೆಲವು ಸಹೋದ್ಯೋಗಿಗಳೆದುರಿಗೆ ಆಶ್ವಾಸನೆ ಕೊಟ್ಟ. ಅದರ ಮೇರೆಗೆ ಮರುವಾರವೇ ಅವರಿಬ್ಬರೂ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ತಮ್ಮ ಉದ್ದೇಶಿತ ವಿವಾಹದ ಬಗ್ಗೆ ನೋಟೀಸನ್ನು ಕೊಟ್ಟರು.

    ಈ ಮಾಹಿತಿ ಅದು ಹೇಗೋ ಎಲಿಜಬೆತ್​ಗೆ ತಿಳಿಯಿತು. ಆಕೆ ಗಾಬರಿಯಾಗಿ ವಕೀಲರನ್ನು ಸಂರ್ಪಸಿದಳು. ಅವರ ಮುಖಾಂತರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ತನ್ನ ಮದುವೆಯ ದಾಖಲೆಗಳನ್ನು ತೋರಿಸಿ ತಕರಾರು ಅರ್ಜಿ ಸಲ್ಲಿಸಿದಳು. ಆಗ ಆ ಅಧಿಕಾರಿ ಕ್ರಿಸ್ಟೋಫರ್ ಮತ್ತು ಪದ್ಮಾಳ ವಿವಾಹವನ್ನು ನೋಂದಾಯಿಸಲು ಸಾಧ್ಯವಿಲ್ಲವೆಂದು ಅವರಿಗೆ ತಿಳಿಸಿದರು. ಮುಂದೇನು ಮಾಡುವುದೆಂದು ಕ್ರಿಸ್ಟೊಫರ್​ಗೆ ತೋಚಲಿಲ್ಲ. ಆಗ ಆತ ಬೇರೊಬ್ಬ ವಕೀಲರ ಸಲಹೆ ಪಡೆದು ಎಲಿಜಬೆತ್​ಳಿಂದ ವಿವಾಹ ವಿಚ್ಛೇದನ ಪಡೆಯುವುದೆಂದು ನಿರ್ಧರಿಸಿದ. ಅದರಂತೆ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಸಿದ.

    ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ನ್ಯಾಯಾಧೀಶರು ಸಮಾಲೋಚಕರ ಮುಂದೆ ಮಾತುಕತೆ ನಡೆಸಲು ಇಬ್ಬರಿಗೂ ಸೂಚಿಸಿದರು. ಅದರಂತೆ ನಡೆದ ಮಾತುಕತೆಯಲ್ಲಿ ಎಲಿಜಬೆತ್ ಡಿವೋರ್ಸ್​ಗೆ ಒಪ್ಪಿದಳಾದರೂ ತನ್ನ ಹಾಗೂ ಮಕ್ಕಳ ಭವಿಷ್ಯಕ್ಕಾಗಿ 15 ಲಕ್ಷ ರೂಗಳನ್ನು ನೀಡಬೇಕಲ್ಲದೆ, ಕ್ರಿಸ್ಟೊಫರ್ ತನ್ನ ಸಂಬಳದ ಅರ್ಧ ಭಾಗವನ್ನು ಮಾಸಾಶನವನ್ನಾಗಿ ನೀಡಬೇಕೆಂಬ ಷರತ್ತನ್ನು ಹಾಕಿದಳು. ಕ್ರಿಸ್ಟೊಫರ್ ಇದಕ್ಕೆ ಒಪ್ಪಲಿಲ್ಲ. ನ್ಯಾಯಾಲಯದ ವಿಚಾರಣೆ ಮುಂದುವರಿಯಿತು.

    ಕೆಲಕಾಲಾನಂತರ ಮನ ಬದಲಾಯಿಸಿದ ಕ್ರಿಸ್ಟೊಫರ್ ಎಲಿಜಬೆತ್​ಳ ಜತೆಯೇ ಎಂದಿನಂತೆ ಜೀವಿಸುವುದಾಗಿ ತೀರ್ವನಿಸಿದ. ತಾನು ಸಲ್ಲಿಸಿದ್ದ ಡಿವೋರ್ಸ್ ಅರ್ಜಿಯನ್ನು ವಾಪಸ್ ಪಡೆದ. ಪದ್ಮಾಳಿಂದ ದೂರವಾಗಿ ಪತ್ನಿಯ ಜತೆಯೇ ಇರತೊಡಗಿದ. ಕ್ರಿಸ್ಟೊಫರ್ ಕೊಡುತ್ತಿದ್ದ ಹಣದಿಂದಲೇ ಸಂಸಾರ ನಡೆಸುತ್ತಿದ್ದ ಪದ್ಮಾ ಈ ಹೊಸ ಬೆಳವಣಿಗೆಯಿಂದ ತೀವ್ರವಾಗಿ ತೊಂದರೆಗೀಡಾದಳು. ಮೇಲಾಗಿ ಮೊದಲ ಪತ್ನಿಯ ಜತೆ ಆತ ಅನ್ಯೋನ್ಯವಾದದ್ದನ್ನು ಕಂಡು ರೋಸಿಹೋದಳು. ಪದೇಪದೆ ಕ್ರಿಸ್ಟೊಫರ್​ನ ನಿವಾಸಕ್ಕೆ ಬಂದು ಅವನೊಡನೆ ಜಗಳ ಮಾಡತೊಡಗಿದಳು. ಅಕ್ಕಪಕ್ಕದ ಮನೆಯವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಿಸ್ಟೊಫರ್​ಗೆ ಸೂಚಿಸಿದರು. ಈ ಸಮಸ್ಯೆಯನ್ನು ತಾನು ಬೇಗನೇ ಇತ್ಯರ್ಥಪಡಿಸುವುದಾಗಿ ಆತ ತಿಳಿಸಿದ. ನಂತರ ಆತ ಎಲಿಜಬೆತ್​ಗೆ ಎರಡು ತಿಂಗಳವರೆಗೆ ತವರುಮನೆಗೆ ಹೋಗಿ ಬರಲು ಸೂಚಿಸಿದ. ಆಕೆ ಒಪ್ಪಿ ಮಕ್ಕಳೊಡನೆ ತವರಿಗೆ ಹೋದಳು.

    ಈ ಮಾಹಿತಿಯನ್ನರಿತ ಪದ್ಮಾ ತನ್ನ ಮಗನನ್ನು ಗೆಳತಿಯೊಬ್ಬಳ ಮನೆಯಲ್ಲಿ ಬಿಟ್ಟು ಕ್ರಿಸ್ಟೊಫರ್​ನ ಮನೆಗೇ ಬಂದು ವಾಸಿಸತೊಡಗಿದಳು. ‘ನೀನು ನನ್ನನ್ನು ವಿಧಿಯುಕ್ತವಾಗಿ ಮದುವೆಯಾಗುವವರೆವಿಗೂ ನಾನಿಲ್ಲಿಂದ ಕದಲುವುದಿಲ್ಲ’ ಎಂದಳು. ಕ್ರಿಸ್ಟೊಫರ್ ಪ್ರತಿಕ್ರಿಯಿಸದೆ ಸುಮ್ಮನಿದ್ದ. ಆದರೆ ಆಕೆ ಬಿಡಬೇಕಲ್ಲ. ಪ್ರತಿದಿನವೂ ಅವನೊಡನೆ ಜಗಳವಾಡುತ್ತಿದ್ದಳು. ಹೀಗೆಯೇ ಒಂದು ರಾತ್ರಿ ಕ್ರಿಸ್ಟೊಫರ್ ಡ್ಯೂಟಿ ಮುಗಿಸಿ ಮನೆಗೆ ವಾಪಸ್ ಬಂದಾಗ ಪದ್ಮಾ ಮತ್ತೊಮ್ಮೆ ಜಗಳ ತೆಗೆದಳು. ಅಂದು ಅದು ತಾರಕಕ್ಕೇರಿತು. ಅಕ್ಕಪಕ್ಕದ ಮನೆಯವರಿಗೆಲ್ಲ ಅವರ ನಡುವಿನ ಮಾತುಗಳು ಕೇಳಿಬಂದರೂ ಅದು ಪ್ರತಿದಿನದ ಘಟನೆಯಾಗಿದ್ದ ಕಾರಣ ಅವರು ಯಾರೂ ಮಧ್ಯಪ್ರವೇಶಿಸಲಿಲ್ಲ.

    ಆ ರಾತ್ರಿ 10 ಗಂಟೆಗೆ ಊಟ ಮಾಡಿದ ಕ್ರಿಸ್ಟೊಫರ್ ಕುರ್ಚಿಯಲ್ಲಿ ವಿರಮಿಸುತ್ತಿದ್ದ. ಪದ್ಮಾ ಇದ್ದಕ್ಕಿದ್ದಂತೆ ರಾಕ್ಷಸೀ ಅವತಾರ ತಳೆದಳು. ಅಡುಗೆ ಮನೆಯಲ್ಲಿದ್ದ ಹಾರೆಯನ್ನು ತೆಗೆದುಕೊಂಡು ಬಂದು ಹಿಂದಿನಿಂದ ಅವನ ತಲೆಗೆ ಏಕಾಏಕಿ ಹೊಡೆದಳು. ಒಂದೇ ಏಟಿಗೆ ಆತ ಸತ್ತು ಹೋದ. ಮುಂದೇನು ಮಾಡುವುದು ಎಂದು ಪದ್ಮಾ ಗಾಬರಿಯಾಗಲಿಲ್ಲ. ರಕ್ತ ಹತ್ತಿದ್ದ ತನ್ನ ಸೀರೆಯನ್ನು ಕಳಚಿ ಬೇರೆ ಸೀರೆಯನ್ನುಟ್ಟಳು. ಬಿಚ್ಚಿದ ಸೀರೆಯಲ್ಲಿ ರಕ್ತಸಿಕ್ತ ಹಾರೆಯನ್ನು ಅಡಗಿಸಿ ಮನೆಯಿಂದ ಹೊರಬಂದಳು. ಕಾಲನಿಯ ಬಳಿಯೇ ಇದ್ದ ರೈಲ್ವೆ ಹಳಿಗಳ ಪಕ್ಕದ ಪೊದೆಯೊಂದರಲ್ಲಿ ಆ ಗಂಟನ್ನು ಎಸೆದಳು. ಆನಂತರ ಸುಮಾರು ಒಂದು ಗಂಟೆ ಎಲ್ಲಿಗೋ ಹೋದಂತೆ ಮಾಡಿ ಮತ್ತೆ ಕ್ರಿಸ್ಟೊಫರ್​ನ ಮನೆಗೆ ವಾಪಸಾದಳು. ಮನೆಯ ಬಾಗಿಲನ್ನು ನೂಕಿ, ‘ನನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ, ಬನ್ನಿ’ ಎನ್ನುತ್ತಾ ಜೋರಾಗಿ ಅರಚತೊಡಗಿದಳು. ಅಕ್ಕಪಕ್ಕದ ಮನೆಯವರು ಓಡಿಬಂದು ನಡೆದಿದ್ದ ದೃಶ್ಯವನ್ನು ನೋಡಿ ಗಾಬರಿಯಾಗಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಮಿಗೆ ಸುದ್ದಿ ಮುಟ್ಟಿಸಿದರು.

    ಸಂಬಂಧಪಟ್ಟ ಠಾಣಾಧಿಕಾರಿ ಸ್ಥಳಕ್ಕೆ ಬಂದು ಪದ್ಮಾಳನ್ನು ವಿಚಾರಿಸಿದಾಗ ತನ್ನ ಗಂಡನಿಗಾಗದವರು ಅವನ ಕೊಲೆ ಮಾಡಿರುವುದಾಗಿ ಆಕೆ ಹೇಳಿದಳು. ಆದರೆ ಅಲ್ಲೇ ಇದ್ದ ನೆರೆಹೊರೆಯವರು ಅವಳ ಮಾತುಗಳನ್ನು ಅಲ್ಲಗಳೆದು ಕೆಲವೇ ಗಂಟೆಗಳ ಹಿಂದೆ ಪದ್ಮಾ ಕ್ರಿಸ್ಟೊಫರ್​ನೊಡನೆ ಜಗಳವಾಡುತ್ತಿದ್ದನ್ನು ತಾವು ಕೇಳಿಸಿಕೊಂಡಿದ್ದಾಗಿ ಹೇಳಿದರು. ಪದ್ಮಾ ತನ್ನ ಕೈಯಲ್ಲಿ ಬಟ್ಟೆಗಂಟು ಹಿಡಿದುಕೊಂಡು ತಮ್ಮ ಕಾಲನಿಯ ಕಾಂಪೌಂಡಿನ ಬಳಿ ಹೋಗುತ್ತಿದ್ದುದನ್ನು ನೋಡಿದ್ದಾಗಿ ಇನ್ನೊಬ್ಬ ಮಹಿಳೆ ಮಾಹಿತಿಯಿತ್ತಳು.

    ಆಗ ತನಿಖಾಧಿಕಾರಿ ಎಲ್ಲರ ಮುಂದೆಯೂ ಪದ್ಮಾಳನ್ನು ತೀವ್ರವಾಗಿ ವಿಚಾರಿಸಿದರು. ಆಕೆ ನಡೆದ ವಿಷಯವನ್ನು ಒಪ್ಪಿಕೊಂಡಳು. ಅವಳನ್ನು ಬಂಧಿಸಿ ಶೋಧನೆ ಮಾಡಿದಾಗ ಅವಳ ತಾಳಿ ಮತ್ತು ಕುಪ್ಪಸದ ಮೇಲೆ ರಕ್ತದ ಕಲೆಗಳು ಕಂಡವು. ಅವನ್ನು ಜಪ್ತಿ ಮಾಡಲಾಯಿತು. ಆನಂತರ ಅವಳ ಹೇಳಿಕೆಯ ಮೇರೆಗೆ, ಆಕೆ ರೈಲ್ವೆ ಹಳಿಯ ಪಕ್ಕದಲ್ಲೆಸೆದಿದ್ದ ಸೀರೆ ಮತ್ತು ಹಾರೆಯನ್ನು ಜಪ್ತು ಮಾಡಲಾಯಿತು.ತಲೆಗಾದ ಭಾರಿ ಗಾಯದಿಂದಾಗಿ ಕ್ರಿಸ್ಟೊಫರ್ ಸತ್ತನೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿತು. ಜಪ್ತು ಮಾಡಿದ ವಸ್ತುಗಳನ್ನು ವಿಧಿವಿಜ್ಞಾನ ಸಂಗ್ರಹಾಲಯಕ್ಕೆ ಕಳುಹಿಸಿದಾಗ ಅವುಗಳ ಮೇಲಿದ್ದ ರಕ್ತವು ಕ್ರಿಸ್ಟೊಫರ್​ನ ರಕ್ತದ ಜೊತೆ ಹೋಲಿಕೆಯಾಗುತ್ತದೆ ಎಂಬ ವರದಿ ಬಂದಿತು. ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲದೆ, ಅಪರಾಧವನ್ನು ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇಲೆ ಸಾಬೀತು ಮಾಡಬೇಕಾಗಿದೆ. ‘ಏರಿಯ ಮೇಲಣ ಪಂಜು ನೀರೊಳಗೆ ಉರಿವಂತೆ ನಾರಿಯರೊಲುಮೆ ತನಗೆಂಬ ಮೂಢಂಗೆ ಮಾರಿ ಹೊಡೆಯಿತ್ತು ಸರ್ವಜ್ಞ’ ಎನ್ನುವಂತೆ ಇಬ್ಬರು ಹೆಂಡಿರಿಂದಾಗುವ ಪರಿಣಾಮವನ್ನು ಅರಿತೂ ಪದ್ಮಾಳ ಜತೆ ಸಂಬಂಧವಿಟ್ಟುಕೊಂಡ ಕ್ರಿಸ್ಟೊಫರ್​ನ ಸಾವಿಗೆ ಅವನ ಮೂರ್ಖತನವೇ ಕಾರಣವಲ್ಲವೇ?

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts