ಮಾಗೋಡು ಅಭಿವೃದ್ಧಿಗೆ ನಿಷ್ಕಾಳಜಿ

| ಶೋಭಾ ಅನಂತಯ್ಯ

ಶೃಂಗೇರಿ: ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿಗಳ ಮಕ್ಕಳು ಶಾಲೆಗೆ ಹೊಗುವುದಿರಲಿ ಹೊರಬರುವುದೂ ಕಷ್ಟ. ರಸ್ತೆಯ ಸ್ಥಿತಿ ಅಧೋಗತಿ. ವಿದ್ಯುತ್ ಯಾವಾಗಾದರೂ ಒಮ್ಮೆ ಬರುವ ಅತಿಥಿ. ಇನ್ನು ಸಂಚಾರಕ್ಕೆ ಕಾಲುಗಳೇ ಗತಿ.

ಶೃಂಗೇರಿಯಿಂದ 10 ಕಿಮೀ ದೂರದ ಮರ್ಕಲ್ ಗ್ರಾಪಂನ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮಾಗೋಡಿನ ಹಸಲರ ಕುಟುಂಬಗಳು ಪ್ರತಿ ವರ್ಷ ಎದುರಿಸುತ್ತಿರುವ ಸಮಸ್ಯೆಗಳಿವು.

ಮಾಗೋಡಲ್ಲಿ 30ಕ್ಕೂ ಹೆಚ್ಚು ಹಸಲರ ಕುಟುಂಬಗಳು ವಾಸವಾಗಿವೆ. ಇಲ್ಲಿಗೆ ತೆರಳುವ ರಸ್ತೆ ಕೆಸರು, ಹೊಂಡ ಗುಂಡಿಯಿಂದ ಕೂಡಿದೆ. ಇಲ್ಲಿರುವ ಸಣ್ಣ ಹಳ್ಳ ಮಳೆ ಬಂದರೆ ತುಂಬುತುಳುಕುತ್ತದೆ. ಶಾಲೆಗೆ ತೆರಳುವ ಮಕ್ಕಳನ್ನು ದಾಟಿಸಲು ಹಾಗೂ ವಾಪಸ್ ಬರುವಾಗ ಪಾಲಕರು ದಿನಕ್ಕೆ ಎರಡು ಬಾರಿ ಹಳ್ಳದ ಬುಡಕ್ಕೆ ಹೋಗಬೇಕು.

ಯಾವುದೆ ವಸ್ತು ಬೇಕಾದಾರೂ 5 ಕಿಮೀ ದೂರವಿರುವ ಕಿಗ್ಗಾಕ್ಕೆ ಬರಬೇಕು. ಇಲ್ಲವೆ ಮಳೆಗಾಲಕ್ಕೂ ಮುನ್ನ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮಾಗೋಡಿನ ನಾಗಪ್ಪ ಅವರ ಮನೆ ಸಮೀಪವಿರುವ ಹಳ್ಳಕ್ಕೆ ಕಿರುಸೇತುವೆ ಮಾಡಿಕೊಡಿ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ಬಳಿ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ.

ಅನಾರೋಗ್ಯ ಉಂಟಾದರೆ ಪ್ರಾಥಮಿಕ ಚಿಕಿತ್ಸೆಗೆ ಗ್ರಾಮಸ್ಥರು ಕಿಗ್ಗಾಕ್ಕೆ ಬರಬೇಕು. ಆದರೆ ಹಳ್ಳ ಮತ್ತು ಕೆಸರಿನಿಂದ ಕೂಡಿರುವ ರಸ್ತೆಗೆ ಆಟೋ ಚಾಲಕರು ಬರಲು ಹಿಂದೇಟು ಹಾಕುತ್ತಾರೆ. ದುಬಾರಿ ಹಣ ನೀಡಿ ಬೇರೆ ವಾಹನ ಮಾಡುವುದು ಗ್ರಾಮಸ್ಥರಿಗೆ ಆರ್ಥಿಕ ಹೊರೆ.

ಮೊಬೈಲ್, ದೂರವಾಣಿ ಸೌಲಭ್ಯ ಇಲ್ಲದೆ ಪ್ರತಿ ದಿನವೂ ಹಳ್ಳಿಗೆ ಹೋದ ನಂತರ ಸಂಪರ್ಕ ಕಡಿದುಕೊಳ್ಳುವ ಸ್ಥಿತಿ ಇಲ್ಲಿನ ಗ್ರಾಮಸ್ಥರದ್ದು. ಮೊಬೈಲ್ ನೆಟ್​ವರ್ಕ್​ಗಾಗಿ ಟವರ್ ನಿರ್ವಿುಸಲು ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಗ್ರಾಮೀಣ ಪ್ರದೇಶವಾದ್ದರಿಂದ ಮರಗಳು ಬಿದ್ದು ಆಗಾಗ ವಿದ್ಯುತ್ ಕಡಿತ ಉಂಟಾಗುತ್ತದೆ. ದುರಸ್ತಿ ನಡೆಯುವುದು ನಿಧಾನವಾಗುತ್ತದೆ. ಮಳೆಗಾಲದಲ್ಲಿ ಬೀಸುವ ಗಾಳಿಗೆ ಮರ ಬಿದ್ದು ನಾಲ್ಕಾರು ದಿನ ವಿದ್ಯುತ್ ಕಡಿತವಾಗುವುದು ಮಾಮೂಲು. ಹಾಗಾಗಿ ಗ್ರಾಪಂನಿಂದ ಸೋಲಾರ್ ದೀಪ ಅಳವಡಿಸಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹ.

ಜೀವನ ನಿರ್ವಹಣೆಗೆ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಸವಲತ್ತು ಪಡೆಯಲು ಕಿಗ್ಗಾ ಅಥವಾ ಪಟ್ಟಣಕ್ಕೆ ಬರಬೇಕು. ಕಾಲ್ನಡಿಗೆಯಲ್ಲಿ 5 ಕಿಮೀ ನಡೆದು ಕಿಗ್ಗಾದಿಂದ ಶೃಂಗೇರಿಗೆ ಬರಬೇಕು. ಕಚೇರಿಗೆ ಬಂದಾಗ ಕೆಲವೊಮ್ಮೆ ಅಧಿಕಾರಿಗಳೇ ಇರುವುದಿಲ್ಲ.

ಸುಗಮ ಸಂಚಾರಕ್ಕೆ ತೊಂದರೆ ಆಗಿರುವುದರಿಂದ ಮಾಗೋಡು ಹಳ್ಳಕ್ಕೆ ಸೇತುವೆ ನಿರ್ವಿುಸಬೇಕು. ಗಿರಿಜನರಿಗಾಗಿ ಸರ್ಕಾರ ಹಲವು ಸವಲತ್ತು ನೀಡುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿರುವ ನಮಗೆ ಸೌಲಭ್ಯ ಬಂದಿರುವ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಮೊಬೈಲ್ ಟವರ್ ನಿರ್ಮಾಣ ಮಾಡಿದರೆ ಸಂಪರ್ಕಕ್ಕೆ ಸಹಾಯವಾಗಲಿದೆ ಎಂಬುದು ಗ್ರಾಮಸ್ಥ ಅಭಿಪ್ರಾಯ.

ಸರ್ಕಾರ ಎಷ್ಟೇ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲು ಗ್ರಾಪಂ, ತಾಪಂ ಹಾಗೂ ಜಿಪಂ ವಿಫಲವಾಗುತ್ತಿದೆ. ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಮೊದಲ ಆದ್ಯತೆ ನೀಡಬೇಕು.

 |ಕೂಳೂರು ನಾರಾಯಣ, ಆದಿವಾಸಿ ಹಸಲರ ಸಂಘದ ಜಿಲ್ಲಾ ಸಂಚಾಲಕ

ಮಾಗೋಡು ಗ್ರಾಮಸ್ಥರಿಗೆ ಸೇತುವೆ ನಿರ್ವಿುಸಲು ಕ್ರಮ ಕೈಗೊಳ್ಳಲಾಗುವುದು. ಡಿ.ವಿ.ಸದಾನಂದ ಗೌಡ ಅವರು ಸಿಎಂ ಆಗಿದ್ದಾಗ ಒಳನಾಡು ಪ್ರದೇಶಗಳಿಗೆ 500 ಕೋಟಿ ರೂ. ಅನುದಾನ ನೀಡಿದ್ದರು. ಆಗ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹಾಗೂ ಸೇತುವೆ ನಿರ್ವಣಗೊಂಡಿವೆ. ಬಳಿಕ ಬಂದ ಸರ್ಕಾರ ಸಾಕಷ್ಟು ಅನುದಾನ ನೀಡದಿದ್ದರಿಂದ ಸಮಸ್ಯೆಗಳು ಜೀವಂತವಾಗಿವೆ.

| ಬಿ.ಶಿವಶಂಕರ್, ಜಿಪಂ ಸದಸ್ಯ