ಮುಂಗಡ ಟೆಂಡರ್ ಕರೆದು ಲೂಟಿ

ಚಿಕ್ಕಮಗಳೂರು: ಮೋದಿ ಗೆಲ್ಲಿಸಲು ಬಿಜೆಪಿಗೆ ಮತ ಹಾಕುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮನವೊಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಸಖರಾಯಪಟ್ಟಣದಲ್ಲಿ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ರೋಡ್​ಶೋ ನಡೆಸಿ, ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಭಿನ್ನಾಭಿಪ್ರಾಯ ಮರೆತು ಬಿಜೆಪಿಗೆ ಮತ ಹಾಕಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಒಪ್ಪಿಸಬೇಕು ಎಂದು ಹೇಳಿದರು.

ಪ್ರತಿ ಬೂತ್​ನಲ್ಲೂ ಶೇ. 90ರಷ್ಟು ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಇನ್ನೊಂದು ವಾರ ಸಂಪೂರ್ಣ ಸಮಯ ಮೀಸಲಿಡಬೇಕು ಎಂದು ಕೋರಿದರು.

ದೇಶಾದ್ಯಂತ ನರೇಂದ್ರ ಮೋದಿ ಪರ ಗಾಳಿ ಬೀಸುತ್ತಿದ್ದು, 300ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ಪರ 2014ರ ಚುನಾವಣೆಯಲ್ಲಿ ಕಂಡು ಬಂದಿದ್ದಕ್ಕಿಂತ ಉತ್ತಮ ವಾತಾವರಣ ಈ ಚುನಾವಣೆ ವೇಳೆ ಕಂಡು ಬಂದಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಜಿಲ್ಲೆಯ ಬಯಲುಸೀಮೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಅಯ್ಯನಕೆರೆ ಹಾಗೂ ಮದಗದಕೆರೆಗೆ ನೀರು ಹರಿಸುವ ಹಾಗೂ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದರು.

ದೇಶದ ಪ್ರತಿಯೊಬ್ಬ ರೈತನಿಗೆ ವರ್ಷಕ್ಕೆ 6 ಸಾವಿರ ರೂಪಾಯಿಯನ್ನು ಆತ ಬದುಕಿರುವವರೆಗೆ ನೀಡುವ ಹಾಗೂ ರೈತರಿಗೆ ಒಂದು ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ. 60 ವರ್ಷ ಮೀರಿದ ರೈತನಿಗೆ ಪಿಂಚಣಿ, ಗುಡಿಸಲು ಮುಕ್ತಗೊಳಿಸಿ ಪ್ರತಿಯೊಬ್ಬರಿಗೂ ಪಕ್ಕಾ ವಸತಿ ಸೌಲಭ್ಯ ನೀಡುವ ವಾಗ್ದಾನ ಮಾಡಲಾಗಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಶೇ. 33ರಷ್ಟು ಸ್ಥಾನ ಮೀಸಲಿಡಲು ಚಿಂತನೆ ನಡೆಸಲಾಗಿದೆ. ಪ್ರತಿ ಮನೆಗೆ ಶುದ್ಧ ನೀರು, ಉತ್ತಮ ಗ್ರಾಮೀಣ ರಸ್ತೆ, 60 ಸಾವಿರ ಕಿಮೀ ಹೆದ್ದಾರಿ ಅಭಿವೃದ್ಧಿ, ಜಮ್ಮು ಕಾಶ್ಮೀರಕ್ಕೆ ನೀಡಿರುವ 370ನೇ ವಿಧಿ ರದ್ದು ಮಾಡುವ ಭರವಸೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಹಾಸನದಲ್ಲಿ 1,470 ಕೋಟಿ ರೂ. ಮುಂಗಡ ಟೆಂಡರ್ ಕರೆದು ಲೂಟಿ ಮಾಡಲು ಮುಂದಾಗಿದ್ದಾರೆ. ರಾಜಕೀಯಕ್ಕೆ ಮಕ್ಕಳನ್ನು ತಂದಾಯಿತು, ಸೊಸೆಯಂದಿರು ಬಂದರು, ಈಗ ಮೊಮ್ಮಕ್ಕಳನ್ನು ತರುವ ಪ್ರಯತ್ನ ನಡೆದಿದೆ. ಇದೆಲ್ಲದಕ್ಕೂ ರಾಜ್ಯದ ಜನ ತಿಲಾಂಜಲಿ ಇಡಲು ತೀರ್ವನಿಸಿದ್ದಾರೆ ಎಂದು ಹೇಳಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಈ ಚುನಾವಣೆ ದೇಶ ಉಳಿಸುವ ಚುನಾವಣೆ. ಅದಕ್ಕಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರನ್ನು ಹೆಚ್ಚಿನ ಮತಗಳಿಂದ ಆರಿಸಬೇಕು. ಇದು ಚೋರರು ಮತ್ತು ಚೌಕಿದಾರರ ನಡುವೆ, ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವಿನ ಚುನಾವಣೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ 26 ಸಾವಿರ ಮತಗಳಿಂದ ಹೆಚ್ಚು ಅಂತರದ ಮುನ್ನಡೆ ಕೊಟ್ಟಿದ್ದೀರಿ. ಈ ಬಾರಿ ಈ ಕ್ಷೇತ್ರದಲ್ಲಿ 40 ಸಾವಿರ ಮುನ್ನಡೆಯನ್ನು ಶೋಭಾ ಅವರಿಗೆ ನೀಡಬೇಕು ಎಂದು ಮನವಿ ಮಾಡಿದರು.

ಈ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಈ ಭಾಗದ ಪ್ರಮುಖ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆ ಕುರಿತು ಯಡಿಯೂರಪ್ಪ ಅವರ ಜತೆ ಮಾತನಾಡಿದ್ದು ಅವರು ಅದಕ್ಕೆ ಮೊದಲ ಆದ್ಯತೆ ನೀಡಲಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಚಿಹ್ನೆ ಇಲ್ಲ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ನಮ್ಮ ಕಾರ್ಯಕರ್ತರು ಈ ಎರಡೂ ಪಕ್ಷದವರನ್ನು ಭೇಟಿ ಮಾಡಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಬೇಕು ಎಂದು ಸಲಹೆ ನೀಡಿದರು.

ಶಾಸಕ ಬೆಳ್ಳಿ ಪ್ರಕಾಶ್, ಜಿಪಂ ಸದಸ್ಯರಾದ ಬಿ.ಜೆ.ಸೋಮಶೇಖರಪ್ಪ, ವಿಜಯಕುಮಾರ್, ರವೀಂದ್ರ ಬೆಳವಾಡಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಚಿಕ್ಕದೇವನೂರು ರವಿ, ಚಿದಾನಂದ್, ಚಂದ್ರಣ್ಣ, ದಿನೇಶ್, ನಾಯಕ್ ಕೃಷ್ಣಸ್ವಾಮಿ, ಶ್ರೀನಿವಾಸಗೌಡ ಭಾಗವಹಿಸಿದ್ದರು.

ಈ ಬಾರಿ ಸರ್ಕಾರ ತಾನಾಗೇ ಬೀಳುತ್ತೆ

ಈ ಬಾರಿ ರಾಜ್ಯಸರ್ಕಾರ ಉರುಳಲು ನಾವೇನೂ ಮುಹೂರ್ತ ಇಡಬೇಕಾಗಿಲ್ಲ. ತಾನಾಗಿಯೇ ಬೀಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸುತ್ತದೆ. ದೇಶದಲ್ಲಿ ನಾವು 300 ಸ್ಥಾನ ಗೆಲ್ಲುವುದು ಖಚಿತ. ಹಾಗಾಗಿ ಚುನಾವಣಾ ಫಲಿತಾಂಶ ಬಂದಾಕ್ಷಣ ಕಾಂಗ್ರೆಸ್-ಜೆಡಿಎಸ್ ನಡುವೆ ಭಿನ್ನಮತ ಉಲ್ಬಣಗೊಂಡು ರಾಜಕೀಯ ಏರುಪೇರು ಉಂಟಾಗಿ ಸರ್ಕಾರ ತಾನಾಗಿಯೆ ಬೀಳುತ್ತದೆ ಎಂದು ಹೇಳಿದರು.