ಕೊಟ್ಟಿಗೆಯಲ್ಲಿ ವಾಸಿಸುತ್ತಿದೆ ಕುಟುಂಬ

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ಪೆಜಮಗೂರು ಗ್ರಾಮದ ಉಜಿರೆಗೋಳಿ ನಿವಾಸಿ ಪೊಮ್ಮ ಶೇರುಗಾರ‌್ತಿ ಅವರ ಮನೆ ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಧರಾಶಾಯಿಯಾಗಿದೆ. ಆಸರೆ ಕಳೆದುಕೊಂಡ ಕುಟುಂಬ ಹಸುವಿನ ಕೊಟ್ಟಿಗೆಯಲ್ಲಿ ದಿನದೂಡುತ್ತಿದೆ.

ಆ.8ರಂದು ಸುರಿದ ಭಾರಿ ಮಳೆಗೆ ಮನೆಯ ಹಿಂಬದಿಯ ಮಣ್ಣಿನ ಗೋಡೆ ಕುಸಿದು ಮನೆಯವರೆಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಮಳೆ ಕಡಿಮೆಯಾದ ಬಳಿಕ ಬಿದ್ದ ಮಣ್ಣಿನ ಗೋಡೆ ಮೇಲೆ ಮಡಲುಗಳನ್ನು ಕಟ್ಟಿ ವಾಸಮಾಡುತ್ತಿದ್ದರು. ಆದರೆ ಶುಕ್ರವಾರ ಸುರಿದ ಮಳೆಗೆ ಮನೆಯ ಮಣ್ಣಿನ ಗೋಡೆ ಸಂಪೂರ್ಣ ಕುಸಿದಿದೆ.

ಪೊಮ್ಮ ಶೇರಿಗಾರ‌್ತಿ ಅವರಿಗೆ ಇಬ್ಬರು ಪುತ್ರಿಯರು ಹಾಗೂ ನಾಲ್ವರು ಮೊಮ್ಮಕ್ಕಳಿದ್ದು, ಎಲ್ಲ ಏಳು ಮಂದಿ ಜತೆಗೆ ಬಿದ್ದ ಮನೆಯಲ್ಲಿ ವಾಸಿಸುತ್ತಿದ್ದರು. ಮಕ್ಕಳು ಶಾಲೆಗೆ ಹೋಗುತ್ತಿದ್ದು, ದೊಡ್ಡವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಗೋಡೆ ಕುಸಿದ ನಂತರ ಎಲ್ಲರೂ ಚಿಕ್ಕ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೊಟ್ಟಿಗೆಗೆ ಗೋಡೆ, ಸರಿಯಾದ ಛಾವಣಿ,ಬಾಗಿಲು ಯಾವ ವ್ಯವಸ್ಥೆ ಇಲ್ಲ. ಸದ್ಯ ಈ ಕುಟುಂಬ ಜೀವ ಕೈಯಲ್ಲಿ ಹಿಡಿದು ದಿನಕಳೆಯುವಂತಾಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಹಾಗೂ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು. ಸಂಬಂಧಪಟ್ಟ ಗ್ರಾಪಂ, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಇವರ ಸಮಸ್ಯೆಗೆ ಸ್ಪಂದಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ಸಹಾಯಹಸ್ತ ನೀಡುವವರು ಪೊಮ್ಮ ಶೇರಿಗಾರ‌್ತಿ ಇವರ ಖಾತೆ ಸಂಖ್ಯೆ 01522200052440 ಐಎಫ್‌ಎಸ್‌ಸಿ ಕೋಡ್ ಸಂಖ್ಯೆ ಎಸ್‌ವೈಎನ್‌ಬಿ 0000152, ಸಿಂಡಿಕೇಟ್ ಬ್ಯಾಂಕ್ ಕೊಕ್ಕರ್ಣೆ ಇಲ್ಲಿಗೆ ಪಾವತಿಸಬಹುದು.
ನೆರವಿಗೆ ಪ್ರಸ್ತಾವನೆ: ಕುಟುಂಬಕ್ಕೆ 5 ಲಕ್ಷ ರೂ. ಗಳ ನೆರವು ಮತ್ತು ಮನೆ ಕಟ್ಟುವ ತನಕ ಬಾಡಿಗೆ ಮನೆಯಲ್ಲಿ ವಾಸಿಸಿದರೆ ಅದರ ಮಾಸಿಕ ಬಾಡಿಗೆಯನ್ನು ಕೂಡ ಕೊಡುವಂತೆ ಸರ್ಕಾರಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಸರ್ಕಾರಕ್ಕೆ ಮನವಿ ನೀಡಿದ್ದಾರೆ.

ನಷ್ಟ ಹೊಂದಿದ್ದಕ್ಕೆ ತಾತ್ಕಾಲಿಕ ನೆರವು ನೀಡುವಂತೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶೀಘ್ರದಲ್ಲಿ ನೆರವು ನೀಡಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಮೂಲಕ ಸರ್ಕಾರಕ್ಕೆ ಶಿಫಾರಸು ನೀಡಲಾಗುವುದು ಎಂದು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ ಭಟ್, ಗ್ರಾಮಲೆಕ್ಕಿಗ ಚಂದ್ರ ನಾಯ್ಕ, ತಾಪಂ ಉಪಾಧ್ಯಕ್ಷ ಕಾಡೂರು ಭುಜಂಗ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಆಶಾಲತಾ, ಪಿಡಿಒ ಪ್ರದೀಪ್, ಗ್ರಾಪಂ ಸದಸ್ಯರು,ಉದ್ಯಮಿ ಹರೀಶ್ ಶ್ಯಾನುಭಾಗ್, ಪೊಮ್ಮ ಶೇರಿಗಾರ‌್ತಿ ಮತ್ತು ಕುಟುಂಬಸ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಬಡವರಾದ ನಾವು ಮನೆ ನಿರ್ಮಾಣ ಮಾಡುವಷ್ಟು ಶಕ್ತರಾಗಿಲ್ಲ. ಜೀವನ ಸಾಗಿಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಸಂಪೂರ್ಣ ಮನೆ ಕುಸಿದಿರುವುದರಿಂದ ಆತಂಕಿತರಾಗಿದ್ದೇವೆ. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತಿಳಿಸಿದ್ದು, ಸಾಧ್ಯವಾದಷ್ಟು ಶೀಘ್ರದಲ್ಲಿ ಸಹಾಯವನ್ನು ಮಾಡುವಿರೆಂದು ಭಾವಿಸಿದ್ದೇವೆ. ಸರ್ಕಾರ ಕೂಡ ನೆರವು ನೀಡಬೇಕು.
ಪೊಮ್ಮ ಶೇರಿಗಾರ‌್ತಿ ಸೂರಾಲು

Leave a Reply

Your email address will not be published. Required fields are marked *