More

    30ರಿಂದ ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿ

    ಗೋಣಿಕೊಪ್ಪ: ಬಿಟ್ಟಂಗಾಲ ಸಮೀಪದ ವಿ.ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ನ.30ರಿಂದ ಡಿ.3ರವರೆಗೆ ದಕ್ಷಿಣ ಕೊಡಗಿನ 3 ನಾಡು ವ್ಯಾಪ್ತಿಯ ತಂಡಗಳಿಗಾಗಿ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೈ ಪ್ಲೈಯರ್ಸ್ ತಂಡದ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ತಿಳಿಸಿದ್ದಾರೆ.

    ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ಆಯೋಜಿಸಲಾಗಿರುವ ಈ ಹಾಕಿ ಪಂದ್ಯಾವಳಿಯು ವಿ.ಬಾಡಗ ಗ್ರಾಮದಲ್ಲಿ 2ನೇ ಬಾರಿ ನಡೆಯುತ್ತಿದೆ. ವಿ.ಬಾಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 4 ದಿನಗಳವರೆಗೆ ನಡೆಯುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕುಟುಂಬ ತಂಡಗಳಲ್ಲಿ ಗರಿಷ್ಠ 4 ಅತಿಥಿ ಆಟಗಾರರು ಭಾಗವಹಿಸಬಹುದಾಗಿದೆ. ಆದರೆ ಅತಿಥಿ ಆಟಗಾರರು ಕಡ್ಡಾಯವಾಗಿ ಕೊಡವ ಆಟಗಾರರಾಗಿರಬೇಕು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಕೊಡವ ಸಾಂಪ್ರದಾಯಿಕ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವುದು. ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಕಳೆದ ಬಾರಿ ನಡೆದ ಪಂದ್ಯಾವಳಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿಯೂ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಪಂದ್ಯ ಜರುಗಲಿದ್ದು, ಗ್ರಾಮಸ್ಥರು ಮತ್ತು ಪ್ರಾಯೋಜಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಹಾಕಿ ಪಂದ್ಯಾವಳಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಈ ಕಾರಣಕ್ಕಾಗಿ ಹೈ ಫ್ಲೈಯರ್ಸ್ ಎಂಬ ಕ್ರೀಡಾ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಹಾಕಿ ಕೂರ್ಗ್ ಸಂಸ್ಥೆಯ ಅಧೀನದಲ್ಲಿ ನಡೆಯಲಿರುವ ಈ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್‌ಔಟ್ ಮಾದರಿಯಲ್ಲಿ ಆಯೋಜಿಸಲಾಗುತ್ತದೆ. ಕುಟುಂಬ ತಂಡಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಲು ನ. 20 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ 9731729118/ 9481883738 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

    ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರಿಂದ ಹಾಕಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಂತಾಗುತ್ತದೆ. ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಂತಾಗುತ್ತದೆ. ಕಳೆದ ಬಾರಿ ಆಯೋಜಿಸಿದ್ದ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ 3 ನಾಡಿನ ಒಟ್ಟು 19 ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿ 25 ತಂಡಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

    ಸಂಸ್ಥೆಯ ಸಲಹಾ ಸಮಿತಿ ನಿರ್ದೇಶಕ ಕೊಂಗಂಡ ಕಾಶಿ ಕಾರ್ಯಪ್ಪ, ಉಪಾಧ್ಯಕ್ಷರಾದ ಕಂಜಿತಂಡ ವಿಕ್ರಾಂತ್ ಮತ್ತು ಸ್ವಾಗತ ಸಮಿತಿ ಸಂಚಾಲಕ ಚೇಮಿರ ಪ್ರಭು ಪೂವಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts