More

    ಕ್ರೖೆಸ್ಟ್ ವಿವಿಯಲ್ಲಿ 26ರಂದು ಫ್ಯಾಮಿಲಿ ಡೇ ಆಯೋಜನೆ; 3 ಸಾವಿರ ಹಳೇ ವಿದ್ಯಾರ್ಥಿಗಳ ಆಗಮನ 

    ಬೆಂಗಳೂರು:  ಹೊಸೂರು ರಸ್ತೆಯಲ್ಲಿರುವ ಕ್ರೖೆಸ್ಟ್ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ (ಜ.26) ಬೆಳಗ್ಗೆ 11 ಗಂಟೆಗೆ ಹಳೇ ವಿದ್ಯಾರ್ಥಿಗಳ 50ನೇ ಕುಟುಂಬ ದಿನ ಕಾರ್ಯಕ್ರಮ ನಡೆಯಲಿದೆ ಎಂದು ಕ್ರೖೆಸ್ಟ್ ವಿವಿ ಕುಲಪತಿ ಡಾ. ವಿ.ಎಂ. ಅಬ್ರಹಾಂ ತಿಳಿಸಿದ್ದಾರೆ.

    ಕ್ರೖೆಸ್ಟ್ ವಿವಿ ಕುಲಾಧಿಪತಿ ಡಾ. ಜಾರ್ಜ್ ಎಡೆಯಾಡಿಯಿಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ಬಾರಿ ನಮ್ಮ ಸಂಸ್ಥೆಯಲ್ಲಿ ಓದಿ ರಕ್ಷಣಾ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ 23 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಮಾರಂಭಕ್ಕೆ 3 ಸಾವಿರ ಹಳೆಯ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    1969ರಲ್ಲಿ ಮೊದಲ ಬ್ಯಾಚ್ ಆರಂಭವಾಗಿತು. ಈವರೆಗೆ ವಿಶ್ವವಿದ್ಯಾಲಯದಲ್ಲಿ 75 ಸಾವಿರ ವಿದ್ಯಾರ್ಥಿಗಳು ಪದವಿ ಪೂರೈಸಿ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿನ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹುದ್ದೆ ಹಾಗೂ ರಾಜಕೀಯ ನಾಯಕರಾಗಿ ಸಮಾಜಸೇವೆ ಸಲ್ಲಿಸುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳು ತಮ್ಮ ಸಹಪಾಠಿ ಮತ್ತು ಪ್ರಾಧ್ಯಾಪಕರೊಡಗೂಡಿ ವಿದ್ಯಾರ್ಥಿ ಜೀವನದ ಮಧುರ ಕ್ಷಣಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

    ಎರಡು ಕ್ಯಾಂಪಸ್ ಆರಂಭ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿರುವ ನಮ್ಮ ವಿಶ್ವವಿದ್ಯಾಲಯ ವತಿಯಿಂದ ಪುಣೆ ಮತ್ತು ದೆಹಲಿಯಲ್ಲಿ ಹೊಸ ಕ್ಯಾಂಪಸ್ ಆರಂಭಿಸಲಾಗುವುದು. ಒಂದು ವರ್ಷದೊಳಗೆ ಸಂಶೋಧನೆ ಕೇಂದ್ರವೂ ಆರಂಭವಾಗಲಿದೆ ಎಂದು ಅಬ್ರಹಾಂ ಹೇಳಿದರು.

    23 ಮಂದಿಗೆ ಸನ್ಮಾನ

    ಗ್ರೂಪ್ ಕ್ಯಾಪ್ಟನ್ ಮೋಹನಚಂದ್ರನ್ ಪಣಿಕರ್, ಕರ್ನಲ್ ಕೋಡಾಂಡ ಪೊನ್ನಪ್ಪ ಮೇದಪ್ಪ, ಬ್ರಿಗೇಡಿಯರ್ ಬಿ.ಜಿ. ಜಗದೀಶ್, ಕರ್ನಲ್ ಟಿ. ರಮೇಶ್, ಕರ್ನಲ್ ಪಿ.ಎಲ್. ಜೈರಾಮ್ ಕರ್ನಲ್ ರಂಜೀವ್ ಕೆ. ಬಾಬು, ಲೆಫ್ಟಿನೆಂಟ್ ಕರ್ನಲ್​ಗಳಾದ ಅನುಪಮಾ ನಾಯರ್, ದಿನೇಶ್ ಪಟ್ಟಾಭಿ, ವಿಂಗ್ ಕಮಾಂಡರ್​ಗಳಾದ ಪಿ.ಎನ್. ಕೃಷ್ಣಕುಮಾರ್, ಬಿ. ರವೀಂದ್ರನಾಥ್, ಮೇಜರ್​ಗಳಾದ ಅಲೆಕ್ಸ್ ಸೆಬಾಸ್ಟಿಯನ್, ಬಿನ್ನಿ ಜಾಕೋಬ್, ಥಾಮಸ್, ಸಂದೀಪ್ ಹೆಗ್ಡೆ, ಸುಬಿನ್ ಮ್ಯಾಥ್ಯೂಸ್, ಕೆ. ಕಾರ್ತಿಕ್, ಅಜರ್ ಕೌಶಿಕ್, ಆರ್. ಮೋಹನ್, ರಾಕೇಶ್ ನಾಯರ್, ಎಸ್.ಬಿ. ಸೂರಜ್, ಕ್ಯಾಪ್ಟನ್ ಮನೋಜ್ ಸುಂದರಮೂರ್ತಿ, ಲೆಫ್ಟಿನೆಂಟ್ ಕಮಾಂಡರ್ ಸೈನೊ ವಿಲ್ಸನ್ ಅವರನ್ನು ಸನ್ಮಾನಿಸಲಾಗುತ್ತದೆ.

    ಪ್ರತಿವರ್ಷವೂ ಸಮ್ಮಿಲನ ಆಯೋಜನೆ

    1969ರಲ್ಲಿ ಬೆಂಗಳೂರು ವಿವಿ ಅಧೀನದಲ್ಲಿದ್ದ ಈ ಕಾಲೇಜಿನ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಮೊದಲ ಬಾರಿ 350 ವಿದ್ಯಾರ್ಥಿಗಳು ಪದವಿ ಪೂರೈಸಿದ್ದರು. ಆ ವಿದ್ಯಾರ್ಥಿಗಳ ಪೈಕಿ ನಾನು ಕೂಡ ಒಬ್ಬ. ಹಂತಹಂತವಾಗಿ ವಿವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಅಲ್ಲದೆ, ಸ್ವಂತ ವಿವಿ ರಚನೆಯಾಯಿತು. ಈವರೆಗೆ 75 ಸಾವಿರ ವಿದ್ಯಾರ್ಥಿಗಳು ವಿವಿಧ ಕೋರ್ಸ್​ಗಳನ್ನು ಪೂರೈಸಿದ್ದಾರೆ. ಹಳೇ ವಿದ್ಯಾರ್ಥಿಗಳ ಸಮ್ಮಿಲನಕ್ಕಾಗಿ ಪ್ರತಿ ವರ್ಷ ಸಮಾವೇಶ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷ ಜುಗ್ನು ಊಬೆರೈ ಹೇಳಿದರು.

    ಕ್ರೖೆಸ್ಟ್ ವಿವಿಯಲ್ಲಿ ಪ್ರತಿವರ್ಷವೂ ವಿವಿಧ ಸಾಂಸ್ಕೃತಿಕ ಉತ್ಸವಗಳನ್ನು ನಡೆಸಲಾಗುತ್ತದೆ. ದೇಶ- ವಿದೇಶಗಳಿಂದ ಬಂದ ಸಾಕಷ್ಟು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾಕಷ್ಟು ಸ್ಥಳೀಯ ವಿದ್ಯಾರ್ಥಿಗಳು ಕೂಡ ಇದ್ದಾರೆ. ಎಲ್ಲರಿಗೂ ಪಠ್ಯ- ಪಠ್ಯೇತರ ಚಟುವಟಿಕೆಗಳಿಗೆ ಸದಾ ಪೋತ್ಸಾಹ ನೀಡಲಾಗುತ್ತಿದೆ. ಲಕ್ಷಾಂತರ ರೂ.ಗಳ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

    | ಡಾ.ವಿ.ಎಂ. ಅಬ್ರಹಾಂ ಕ್ರೖೆಸ್ಟ್ ವಿವಿ ಕುಲಪತಿ

    ಪ್ರತಿವರ್ಷ ನಡೆಯುವ ಅಲುಮ್ನಿ ಡೇಯಲ್ಲಿ ಆಯಾ ಕ್ಷೇತ್ರದ ವಿದ್ಯಾರ್ಥಿಗಳನ್ನು ಸನ್ಮಾನಿಸಿಕೊಂಡು ಬರಲಾಗುತ್ತಿದೆ. ಇದು ಪ್ರಸ್ತುತ ವ್ಯಾಸಂಗನಿರತರಿಗೆ ಸ್ಪೂರ್ತಿ ನೀಡುತ್ತದೆ. ಈ ಬಾರಿ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ.

    | ಡಾ.ಅನಿಲ್ ಜೋಸೆಫ್ ಪಿಂಟೊ ಕ್ರೖೆಸ್ಟ್ ಡೀಮ್ಡ್​ ವಿವಿ ರಿಜಿಸ್ಟ್ರಾರ್ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts