ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಗುಣಮಟ್ಟದ ಪುಷ್ಪ, ದಸರಾ ನಂಬಿಕೊಂಡಿದ್ದ ಬೆಳೆಗಾರರಿಗೆ ನಷ್ಟ
ಕೋಲಾರ:ಕಳೆದ ಒಂದು ತಿಂಗಳಿನಿಂದ ಸೇವಂತಿಗೆ ಮತ್ತು ಚೆಂಡು ಹೂವಿನ ಬೆಲೆ ಕುಸಿದಿದ್ದು, ಪಿತೃ ಪಕ್ಷಗಳು ಮುಗಿದ ನಂತರ ಸ್ವಲ್ಪ ಮಟ್ಟಿಗೆ ಹೂವಿನ ಬೆಲೆಯಲ್ಲಿ ಸುಧಾರಣೆ ಕಂಡಿತು. ಇನ್ನೇನು ದಸರಾ ಸಮೀಪಿಸುತ್ತಿರುವಾಗಲೇ ಹೂವಿಗೆ ಬೆಲೆ ಬರುತ್ತದೆಂದು ಬೆಳೆಗಾರರು ಅಂದುಕೊಳ್ಳುವಷ್ಟರಲ್ಲೇ ಮಳೆ ಬೀಳುತ್ತಿರುವುದರಿಂದ ಗುಣಮಟ್ಟದ ಹೂವು ಮಾರುಕಟ್ಟೆಯಲ್ಲಿ ಇಲ್ಲದ ಕಾರಣ ಮತ್ತೆ ಬೆಲೆ ಕುಸಿಯತೊಡಗಿದೆ.
ಕಳೆದ ಒಂದು ವಾರದಿಂದ ಸೇವಂತಿಗೆ 150 ರೂ.ಗಳ ತನಕ ಮಾರಾಟವಾಯಿತು. ಚೆಂಡು ಹೂವು 40 ರಿಂದ 50 ರೂ.ಗಳ ತನಕ ಮಾರಾಟವಾಗುತ್ತಿತ್ತು. ಕಳೆದ 3-4 ದಿವಸಗಳಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಬೀಳುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಗುಣಮಟ್ಟದ ಹೂವು ಸಿಗದೇ ಇರುವುದರಿಂದ ಮತ್ತೆ ಸೇವಂತಿಗೆ ಹೂವಿನ ಬೆಲೆ 60 ರಿಂದ 50 ರೂ.ಗೆ ಕುಸಿದಿದ್ದು, ಚೆಂಡು ಹೂವು 10 ರಿಂದ 15 ರೂ.ಗಳಿಗೆ ಮಾರಾಟವಾಗುತ್ತಿದೆ.
ರೈತರಿಗೆ ಮಳೆ ಇಲ್ಲದಿದ್ದರೂ ಕಷ್ಟ, ಮಳೆ ಬಂದರೂ ಕಷ್ಟ ಎನ್ನುವಂತಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಒಂದಲ್ಲಾ ಒಂದು ರೀತಿಯಲ್ಲಿ ನಷ್ಟವಾಗತೊಡಗಿದೆ. ಕಳೆದ 3 ದಿನಗಳಿಂದ ಬೀಳುತ್ತಿರುವ ಸ್ವಲ್ಪ ಮಳೆಯಿಂದ ಸ್ವಲ್ಪ ಮಟ್ಟಿಗೆ ಬೆಳೆಗಳು ಚೇತರಿಸಿಕೊಂಡಿವೆ. ಶ್ರಾವಣ, ಗೌರಿ-ಗಣೇಶ ಮತ್ತು ದಸರಾ ಹಬ್ಬವನ್ನು ನಂಬಿ ಸೇವಂತಿಗೆ ಮತ್ತು ಚೆಂಡು ಹೂವನ್ನು ಬೆಳೆದಿದ್ದ ಹೂ ಬೆಳೆಗಾರರಿಗೆ ಗೌರಿ-ಗಣೇಶ ಹಬ್ಬದ ನಂತರ ಬೆಲೆ ಕುಸಿದ ಕಾರಣ ರೈತರು ಕಂಗಾಲಾಗಿ ಹೋಗಿದ್ದರು. ದಸರಾಗೆ ಉತ್ತಮ ಬೆಲೆ ಬರುತ್ತದೆಂದು ನಂಬಿದ್ದರು. ಕಳೆದ ಒಂದು ವಾರದಿಂದ ಸ್ವಲ್ಪ ಮಟ್ಟಿಗೆ ಬೆಲೆಯಲ್ಲಿ ಸುಧಾರಣೆ ಕಂಡಿತ್ತಾದರೂ ಮಳೆಯಿಂದಾಗಿ ಮತ್ತೆ ಬೆಲೆ ಕುಸಿಯುವಂತಾಗಿದೆ. ರೈತರು ಒಂದು ದಿವಸ ಮುಂಚಿತವಾಗಿ ಹೂವನ್ನು ಕಟಾವು ಮಾಡಿ, ಆರಿಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಅದು ಬಾಡಿದಂತೆ ಕಾಣಿಸುತ್ತಿರುವುದರಿಂದ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ದಸರಾ ಹಬ್ಬಕ್ಕಾದರೂ ಹೂವಿನ ಬೆಲೆ ರೈತರ ಕೈ ಹಿಡಿಯುತ್ತದೆ ಅಂದುಕೊಂಡಿದ್ದೆವು. ಮಳೆ ಅವಶ್ಯಕತೆ ಇತ್ತು. ಆದರೆ ಹೂವಿನ ಬೆಳೆಗೆ ಅವಶ್ಯಕತೆ ಇರಲಿಲ್ಲ. ನಾಲ್ಕೆ$ದು ದಿವಸ ಮಳೆ ಹಿಂದಕ್ಕೆ ಹೋಗಿದ್ದರೆ ಹೂವು ಬೆಳೆಗಾರರು ಸಂಕಷ್ಟದಿಂದ ಪಾರಾಗುತ್ತಿದ್ದರು.
-ಅಮರೇಂದ್ರ ಮೌನಿ ರೈತ, ಬೇತಮಂಗಲ