ಪಾಕ್​ನ ಎಫ್​-16 ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​

ನವದೆಹಲಿ: ಭಾರತದ ಗಡಿಯೊಳಗೆ ಫೆ.27ರಂದು ನುಗ್ಗಲು ಯತ್ನಿಸಿದ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಿದ್ದಲ್ಲದೆ ಅದರ ಒಂದು ಎಫ್​-19 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ಸಾಹಸದ ಸ್ಮರಣಾರ್ಥ ಮಿಗ್​-21 ಬೈಸನ್​ ಯುದ್ಧವಿಮಾನದ ಸ್ಕ್ವಾಡ್ರನ್​ಗೆ ಹೊಸ ಬ್ಯಾಡ್ಜ್​ ನೀಡಿ ಭಾರತೀಯ ವಾಯುಪಡೆ ಸನ್ಮಾನಿಸಿದೆ.

ಸೇನಾಪಡೆ ಯೋಧರು ಸಾಮಾನ್ಯವಾಗಿ ಹೆಗಲು ಮತ್ತು ಎದೆಮೇಲೆ ತಾವು ಪ್ರತಿನಿಧಿಸುವ ಸೇನೆಯ ಕೋರ್​ನ ಲಾಂಛನದ ಜತೆಗೆ ರ‍್ಯಾಂಕಿಂಗ್​ ಸೂಚಕವಾದ ಸ್ಟಾರ್​ಗಳನ್ನು ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. ಅದರಂತೆ ವಿಂಗ್​ ಕಮಾಂಡರ್​ ಅಭಿನಂದನ್​ ಅವರ ಸಾಹಸದ ಸ್ಮರಣಾರ್ಥ ವಾಯುಪಡೆ Falcon Slayers (ಫಾಲ್ಕನ್​ ಯುದ್ಧವಿಮಾನವನ್ನು ಹೊಡೆದುರುಳಿಸಿದವರು) ಮತ್ತು AMRAAM Dodgers ಎಂದು ಎಂಬೋಸ್​ ಮಾಡಲಾದ ಹೊಸ ಬ್ಯಾಡ್ಜ್​ ಅನ್ನು ಮಿಗ್​-21 ಬೈಸನ್​ ಸ್ಕ್ವಾಡ್ರನ್​ನ ಯೋಧರಿಗೆ ಕೊಟ್ಟಿದೆ.

ಯಾವುದೇ ಸ್ಕ್ವಾಡ್ರನ್​ನ ಯೋಧರ ವೈಮಾನಿಕ ಸಾಹಸವನ್ನು ಮೆಚ್ಚಿಕೊಂಡು ಇಂತಹ ಬ್ಯಾಡ್ಜ್​ಗಳನ್ನು ನೀಡಲಾಗುತ್ತದೆ. ಆದರೆ, ಈ ಬ್ಯಾಡ್ಜ್​ಗಳು ಅವರ ಅಧಿಕೃತ ಸಮವಸ್ತ್ರದ ಭಾಗವಾಗಿರುವುದಿಲ್ಲ. ಇದು ಕೇವಲ ಅವರ ಸಾಹಸದ ಧ್ಯೋತಕವಾಗಿ ನೀಡುವ ಸ್ಮರಣಿಕೆಗಳು ಇದ್ದಂತೆ ಎಂದು ಹೇಳಲಾಗಿದೆ.
ಸಾಬ್ರೆ ಸ್ಲೇಯರ್ಸ್​ ಎಂಬ ಬ್ಯಾಡ್ಜ್​ ಹಿಂದೆ ಕೊಡಲಾಗಿತ್ತು

1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ವಾಯುಪಡೆಯ 22ನೇ ಸ್ಕ್ವಾಡ್ರನ್​ನ ಯೋಧರು ಪಾಕಿಸ್ತಾನದ ಸಾಬ್ರೆ ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದರು. ಅವರ ಈ ಸಾಹಸದ ಸ್ಮರಣಾರ್ಥ ಸಾಬ್ರೆ ಸ್ಲೇಯರ್ಸ್​ (Sabre Slayers) ಎಂಬ ಬ್ಯಾಡ್ಜ್​ ಅನ್ನು ವಾಯುಪಡೆ ಕೊಟ್ಟಿತ್ತು. (ಏಜೆನ್ಸೀಸ್​)