ಕೆಂಪು ಕಾಲಿನ ಚಾಣ

| ಸುನೀಲ್ ಬಾರ್ಕರು

ಸೈಬೀರಿಯಾದ ಅಮೂರಲ್ಯಾಂಡ್ ಇವುಗಳ ಮೂಲಸ್ಥಾನ. ಆ ಕಾರಣದಿಂದಲೇ ಅಮೂರ್​ಫಾಲ್ಕನ್ ಎನ್ನುವ ಹೆಸರನ್ನು ಪಡೆದಿವೆ. ಅಲ್ಲಿನ ಅತಿಯಾದ ಚಳಿಯ ವಾತಾವರಣದಿಂದ ಬೆಚ್ಚಗಿನ ಸ್ಥಳ ಹುಡುಕುತ್ತ ಭಾರತದ ಅರಬ್ಬಿ ಸಮುದ್ರದ ಮಾರ್ಗವಾಗಿ ಇವು ದಕ್ಷಿಣ ಆಫ್ರಿಕಾಗೆ ಹಾದುಹೋಗುತ್ತವೆ. ಈ ಪ್ರಯಾಣದಲ್ಲಿ ಬರೋಬ್ಬರಿ 2 ಲಕ್ಷ 20 ಸಾವಿರ ಕಿ.ಮೀ. ದೂರ ಕ್ರಮಿಸುತ್ತವೆ! ಇದು ಪಕ್ಷಿಲೋಕದಲ್ಲೇ ಅಪರೂಪದ ಪಯಣ. ಪಕ್ಷಿಯೊಂದು ಅತಿಹೆಚ್ಚು ಪಯಣಿಸುವ ದಾಖಲೆಗಳಲ್ಲೂ ಒಂದಾಗಿದೆ. ಇವುಗಳ ವೈಜ್ಞಾನಿಕ ಹೆಸರು Falco amrensis.
.

ನಾಗಾಲ್ಯಾಂಡ್​ನ ವೋಖಾ ಜಿಲ್ಲೆ ಇವುಗಳ ಪಾಲಿಗೆ ಭಾರತದ ಹೆಬ್ಬಾಗಿಲು. ಈ ಜಿಲ್ಲೆಯನ್ನು ಇವುಗಳ ಎರಡನೆಯ ಮನೆಯೆಂದೇ ವ್ಯಾಖ್ಯಾನಿಸಲಾಗುತ್ತದೆ. ಅಂದ ಹಾಗೆ, ಮಂಗೋಲಿಯಾದಿಂದ ಭಾರತದ ನಾಗಾಲ್ಯಾಂಡ್​ಗಿರುವ 5600 ಕಿ.ಮೀ. ದೂರ ಪಯಣಿಸಲು ಇವು ತೆಗೆದುಕೊಳ್ಳುವ ಸಮಯ 5 ದಿನಗಳು ಮಾತ್ರ. ಈ ಅಮೂರ ಗಿಡುಗಗಳು ತೂಗುವುದು ಕೇವಲ 150 ಗ್ರಾಂನಷ್ಟಾದರೂ ತಮ್ಮ ದೇಹರಚನೆ ಮೀರುವಂತಹ ಸಾಮರ್ಥ್ಯ ಪ್ರದರ್ಶಿಸುತ್ತವೆ. ಇಷ್ಟು ದೂರದ ಪಯಣಕ್ಕೂ ಮುನ್ನ ಇವು ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ತೂಕ ಏರಿಸಿಕೊಳ್ಳುವುದು ವಿಶೇಷ.

ಅಮೂರ ಗಿಡುಗಗಳ ಪಯಣದ ಹಾದಿ ಅಷ್ಟೊಂದು ಸುಲಭದ್ದೇನಲ್ಲ. ಸಾವಿರೋಪಾದಿಯಲ್ಲಿ ಗುಂಪಿನಲ್ಲಿ ಪಯಣಿಸುವ ಇವುಗಳನ್ನು ಈ ಮೊದಲು ನಾಗಾಲ್ಯಾಂಡ್​ನ ವೋಖಾ ಮತ್ತು ಟ್ಯಾಮೆಂಗ್ಲೊಂಗ್ ಜಿಲ್ಲೆಗಳ ಆದಿವಾಸಿಗಳು ಮಾಂಸಕ್ಕಾಗಿ ಬಲೆ ಬೀಸಿ ಹತ್ಯೆಗೈಯ್ಯುತ್ತಿದ್ದರು. ಪ್ರತಿವರ್ಷ ಸಾವಿರ ಸಾವಿರ ಸಂಖ್ಯೆಯಲ್ಲಿ ಇವುಗಳ ಮಾರಣಹೋಮವೇ ನಡೆಯುತ್ತಿತ್ತು. ಗಿಡುಗಗಳ ಹತ್ಯೆಯನ್ನು ಕಾನೂನುರೀತ್ಯ ನಿಷೇಧಿಸಲಾಗಿದ್ದರೂ ಸಮರ್ಪಕವಾಗಿ ಜಾರಿಗೊಳಿಸಿರಲಿಲ್ಲ. ಇದನ್ನರಿತ ಪಕ್ಷಿಪ್ರೇಮಿಗಳು ಹಾಗೂ ಯುವ ಸಮೂಹ ಒಂದು ರೀತಿಯ ಚಳವಳಿಯನ್ನೇ ನಡೆಸಿದರು. ಈ ಕಾರ್ಯಕ್ಕೆ ಬಾಂಬೆ ನ್ಯಾಚುರಲ್ ಹಿಸ್ಟಾರಿಕಲ್ ಸೊಸೈಟಿಯಂತಹ ಸಂಸ್ಥೆಗಳು ಕೈ ಜೋಡಿಸಿದವು. ಇಂಥ ಸಂಘಟಿತ ಪ್ರಯತ್ನದಿಂದಾಗಿ ಅಲ್ಲಿನ ಪರಿಸ್ಥಿತಿ ಈಗ ಬಹಳಷ್ಟು ಸುಧಾರಿಸಿದೆ. ಬೇಟೆಯಾಡುತ್ತಿದ್ದ ಕೈಗಳೀಗ ರಕ್ಷಣೆಗೆ ಮುಂದಾಗಿವೆ.

ಕೇಂದ್ರ ಸರ್ಕಾರವೂ ಇದನ್ನು ಗುರುತಿಸಿ ‘ಅಮೂರ ಉಳಿಸಿ’ ಅಭಿಯಾನಕ್ಕೆ ಸಾಥ್ ನೀಡಿದೆ. ಸಾರ್ವಜನಿಕರಲ್ಲಿ ಅರಿವನ್ನು ಹೆಚ್ಚಿಸಲು ಅಮೂರ ನೃತ್ಯಹಬ್ಬಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಯತ್ನಿಸುತ್ತಿದೆ. ಈ ಅಮೂರಗಳು ಹೆಚ್ಚಾಗಿ ಕಾಣಸಿಗುವ ಡೊಯಾಂಗ್ ಕೆರೆಯ ಸುತ್ತಲಿನ ಪ್ರದೇಶವನ್ನು ಇಕೋ ಟೂರಿಸಂ ತಾಣವಾಗಿ ಬೆಳೆಸುವತ್ತ ಸರ್ಕಾರ ಕಾರ್ಯೋನ್ಮುಖವಾಗಿದೆ. ಅಷ್ಟಕ್ಕೂ ಸಾವಿರದ ಗುಂಪಲ್ಲಿ ಪಯಣಿಸುವ ಇವು ಒಮ್ಮೊಮ್ಮೆ ಅಪರಿಚಿತ ಸ್ಥಳಗಳಲ್ಲೂ ಕಂಡು ಬರುತ್ತವೆ. ಪಕ್ಷಿತಜ್ಞರ ಅಭಿಪ್ರಾಯದಂತೆ, ಈ ಪಕ್ಷಿಗಳು ಮುಖ್ಯ ಗುಂಪಿನಿಂದ ಬೇರ್ಪಡುವ ಚಿಕ್ಕ ತಂಡಗಳಾಗಿದ್ದು, ಮಾರ್ಗಮಧ್ಯೆ ವಿರಮಿಸಿ ಪುನಃ ಗುಂಪನ್ನು ಸೇರಿಕೊಳ್ಳುತ್ತವೆ. ಸಂರಕ್ಷಣೆಯ ಫಲದಿಂದ ಸಂಖ್ಯೆಯಲ್ಲಿ ಹೆಚ್ಚಳವಾದುದರಿಂದ ಸಹಜವಾಗಿಯೇ ಅಲ್ಲಲ್ಲಿ ಕಾಣಸಿಗುತ್ತವೆ.