ನಕಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಂಧನ

ಮೈಸೂರು: ಪ್ರೊಬೇಷನರಿ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದ ಆರೋಪಿಯನ್ನು ಮೈಸೂರಿನ ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ನಿವಾಸಿ ದಿಲೀಪ್(36) ಬಂಧಿತ ನಕಲಿ ಐಪಿಎಸ್ ಅಧಿಕಾರಿ. ಈತ ನಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಪೊಲೀಸ್ ವ್ಯವಸ್ಥೆಯ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದನು.

ಕೆ.ಆರ್.ಠಾಣೆಯ ಇನ್ಸ್‌ಪೆಕ್ಟರ್ ವಿ.ನಾರಾಯಣಸ್ವಾಮಿ ಅವರಿಗೆ ತನ್ನ ಹೆಸರು ದಿಲೀಪ್ ಎಂತಲೂ, ತಾನು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಆಗಿರುತ್ತೇನೆ. ತಾನು ಮತ್ತು ತನ್ನ ಕುಟುಂಬ ಸದಸ್ಯರು ಪ್ರವಾಸ ಹೋಗಬೇಕು. ಹೀಗಾಗಿ, ತನಗೆ ಒಂದು ಉತ್ತಮ ಮತ್ತು ಎಸಿ ಹೊಂದಿದ ಇನೋವಾ ಕಾರನ್ನು ಚಾಲಕರ ಸಮೇತ ಕಳುಹಿಸಿಕೊಡಬೇಕು.

ಕಾರಿನ ಬಾಡಿಗೆ ಮೊತ್ತ, ಚಾಲಕರ ಸಂಬಳ ಮತ್ತು ಬಾಟವನ್ನು ನೀವೇ ಕೊಡಬೇಕು ಎಂದು ಹೇಳಿದ್ದ. ಈ ಬಗ್ಗೆ ಅನುಮಾನಗೊಂಡ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ಅವರು, ಇಬ್ಬರು ಪೊಲೀಸರನ್ನು ದಿಲೀಪ್ ಮನೆ ಬಳಿಗೆ ಕಳುಹಿಸಿ ಅಕ್ಕಪಕ್ಕ ವಿಚಾರಿಸಿದ್ದಾರೆ. ಈ ವೇಳೆ ದಿಲೀಪ್ ಐಪಿಎಸ್ ಅಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ, ದಿಲೀಪ್‌ನನ್ನು ಶನಿವಾರ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ದಿಲೀಪ್, ತಾನು ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿ ನೇಮಕವಾಗಿಲ್ಲ. ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ನಂಬಿಸಿ, ಐಪಿಎಸ್ ಅಧಿಕಾರಿಯಂತೆ ನಟಿಸಿ, ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಬೆದರಿಸಿ, ಅವರಿಂದ ಸೇವೆ ಮತ್ತು ಆರ್ಥಿಕ ಸಹಾಯವನ್ನು ಪಡೆದು ಮೋಸ ಮಾಡುತ್ತಿದ್ದೆ. ಇದಕ್ಕಾಗಿ 2018 ಫೆ. 19 ರಂದು ಕೇಂದ್ರ ಸರ್ಕಾರದ ಗೃಹ ಇಲಾಖೆಯಿಂದ ಹೊರಡಿಸಿದ ಅಧಿಸೂಚನೆಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ನಕಲಿಯಾಗಿ ತನ್ನ ಹೆಸರು ಮತ್ತು ವಿವರಗಳನ್ನು ನಮೂದು ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸರು ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.