ಬೆಂಗಳೂರು: ದುಬಾರಿ ಬೈಕ್‌ಗಳನ್ನು ಕದ್ದು ಇಂಜಿನ್, ಚಾಸ್ಸಿಸ್ ನಂಬರ್ ಟ್ಯಾಂಪರ್ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಹುಣಸಮಾರನಹಳ್ಳಿ ನಿವಾಸಿಗಳಾದ ರಾಘವೇಂದ್ರ ಮತ್ತು ಸಾಯಿತೇಜ ಬಂಧಿತರು. 25 ದ್ವಿಚಕ್ರ ವಾಹನ, 6 ಮೊಬೈಲ್, 2 ಲ್ಯಾಪ್‌ಟಾಪ್, ಕಲರ್ ಪ್ರಿಂಟರ್ ಮತ್ತು ಕೆಲ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ಮೂಲದ ರಾಘವೇಂದ್ರ, ಬಿಬಿಎಂ ವ್ಯಾಸಂಗ ಮಾಡಿ ದ್ವಿಚಕ್ರ ವಾಹನ ಮಾರಾಟ ಮಳಿಗೆ ಶುರು ಮಾಡಿದ್ದ. ಉದ್ಯಮದಲ್ಲಿ ನಷ್ಟ ಉಂಟಾಗಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಮತ್ತು ಮತ್ತೆ ಮಳಿಗೆ ತೆರೆಯುವ ಉದ್ದೇಶಕ್ಕೆ ಸಾಯಿತೇಜನನ್ನು ಜೊತೆಗೆ ಕರೆಸಿಕೊಂಡು ಹುಣಸಮಾರನಹಳ್ಳಿಗೆ ಬಂದು ನೆಲೆಸಿದ್ದ.
ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಆಂಧ್ರ ಪ್ರದೇಶದ ಕಡಪ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಸುತ್ತಾಡಿ ಮನೆ ಮುಂದೆ ನಿಲ್ಲಿಸಿದ ದುಬಾರಿ ಬೈಕ್‌ಗಳ ಲಾಕ್ ಮುರಿದು ಕಳವು ಮಾಡಿ ಹುಣಸಮಾರನಹಳ್ಳಿಗೆ ತರುತ್ತಿದ್ದರು. ಕಬ್ಬಿಣದ ಬಿಟ್‌ಗಳನ್ನು ಬಳಸಿ ಕದ್ದ ಬೈಕ್‌ಗಳ ಇಂಜಿನ್ ಮತ್ತು ಚಾಸ್ಸಿಸ್ ನಂಬರ್‌ಗಳನ್ನು ಟ್ಯಾಂಪರ್ ಮಾಡುತ್ತಿದ್ದರು. ಆ ಬೈಕ್‌ಗೆ ಬೇಕಾದ ನಕಲಿ ಆರ್‌ಸಿ ಕಾರ್ಡ್, ನಂಬರ್ ಪ್ಲೇಟ್ ಮತ್ತು ವಿಮೆ ಸಹ ಸೃಷ್ಟಿಸುತ್ತಿದ್ದರು. ಇದಾದ ಮೇಲೆ ಒಎಲ್‌ಎಕ್ಸ್‌ನಲ್ಲಿ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಎಂದು ಮಾರಾಟಕ್ಕೆ ಜಾಹೀರಾತು ನೀಡುತ್ತಿದ್ದರು.
ಮೇಲ್ನೋಟಕ್ಕೆ ನಕಲಿ ದಾಖಲೆ ಅಸಲಿ ಎಂಬಂತೆ ಕಾಣುತ್ತಿದ್ದ ಕಾರಣಕ್ಕೆ ಗ್ರಾಹಕರು ಏನೂ ಪ್ರಶ್ನೆ ಮಾಡದೆ ಲಕ್ಷಾಂತರ ರೂ. ತೆತ್ತು ಖರೀದಿಸುತ್ತಿದ್ದರು. ಇದೇ ರೀತಿಯಾಗಿ 2023ರ ಸೆಪ್ಟೆಂಬರ್‌ನಿಂದ ಕಳ್ಳತನ ಮಾಡುತ್ತಿದ್ದರು.
ಇತ್ತೀಚೆಗೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಸಿ.ಬಿ. ಶಿವಸ್ವಾಮಿ ನೇತೃತ್ವದ ತಂಡ ಎಲ್ಲೆಡೆ ಕಾರ್ಯಾಚರಣೆ ನಡೆಸಿದಾಗ ಸಿಸಿ ಕ್ಯಾಮರಾ ದೃಶ್ಯಾವಳಿ ಪತ್ತೆಯಾಗಿತ್ತು.
ಇದರ ಆಧಾರದ ಮೇಲೆ ಹುಣಸಮಾರನಹಳ್ಳಿ ಮನೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮಾರಾಟವಾಗಿದ್ದ ಬೈಕ್‌ಗಳು ಮತ್ತು ರಾಮಚಂದ್ರಪುರದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ಚಿಪ್, ಆರ್‌ಸಿ ಕಾರ್ಡ್ ಖರೀದಿ
ಕದ್ದ ಬೈಕ್‌ಗಳಿಗೆ ನಕಲಿ ಆರ್‌ಸಿ ಕಾರ್ಡ್ ತಯಾರು ಮಾಡುವ ಉದ್ದೇಶಕ್ಕೆ ಆನ್‌ಲೈನ್‌ನಲ್ಲಿ ಚಿಪ್ ಮತ್ತು ಖಾಲಿ ಆರ್‌ಸಿ ಕಾರ್ಡ್‌ಗಳನ್ನು ಖರೀದಿ ಮಾಡಿಕೊಳ್ಳುತ್ತಿದ್ದರು. ಖಾಲಿ ಕಾರ್ಡ್ ಮೇಲೆ ಸ್ಕೂಟರ್ ಮಾಹಿತಿ, ಅಪರಿಚಿತ ವ್ಯಕ್ತಿಯ ಹೆಸರು, ವಿಳಾಸ ಅಪ್‌ಡೇಟ್ ಮಾಡಿ ಚಿಪ್ ಅಳವಡಿಸುತ್ತಿದ್ದರು. ಅದನ್ನೇ ಅಸಲಿ ಎಂದು ಗ್ರಾಹಕರಿಗೆ ಕೊಟ್ಟು ಕಳುಹಿಸುತ್ತಿದ್ದರು. ಗ್ರಾಹಕರು, ಆರ್‌ಸಿ ಕಾರ್ಡ್ ಅನ್ನು ಆರ್‌ಟಿಒ ಕಚೇರಿಗೆ ಹೋಗಿ ಪರಿಶೀಲನೆ ನಡೆಸಿದಾಗ ಮಾತ್ರ ಆರ್‌ಸಿ ಕಾರ್ಡ್‌ನಲ್ಲಿ ದತ್ತಾಂಶ ಇಲ್ಲ ಎಂಬುದು ಬೆಳಕಿಗೆ ಬರುತ್ತಿತ್ತು. ಅಲ್ಲಿಯವರೆಗೂ ಅಮಾಯಕ ಜನರಿಗೆ ತಿಳಿಯುತ್ತಿರಲಿಲ್ಲ.
ಒಂದಕ್ಕೊಂದು ಮೊಬೈಲ್ ಬಳಕೆ
ಆನ್‌ಲೈನ್‌ನಲ್ಲಿ ಐದಾರು ಸಾವಿರ ರೂ.ಗೆ ಮೊಬೈಲ್ ಖರೀದಿ ಮಾಡುತ್ತಿದ್ದ ಕಳ್ಳರು, ಅದೇ ಮೊಬೈಲ್‌ಗೆ ಹೊಸ ಸಿಮ್‌ಕಾರ್ಡ್ ಬಳಸಿ ಒಎಲ್‌ಎಕ್ಸ್‌ನಲ್ಲಿ ಕದ್ದ ಬೈಕ್ ಮಾರಾಟಕ್ಕೆ ಜಾಹೀರಾತು ನೀಡುತ್ತಿದ್ದ. ಆ ಬೈಕ್ ಸೇಲ್ ಆದ ಮೇಲೆ ಮತ್ತೆ ಮೊಬೈಲ್ ಅನ್ನು ಅಪರಿಚಿತರಿಗೆ ಮಾರಾಟ ಮಾಡಿ ಸಿಮ್ ಕಾರ್ಡ್ ಎಸೆಯುತ್ತಿದ್ದರು. ಒಂದೊಂದು ಬೈಕ್‌ಗೂ ಹೊಸ ಹೊಸ ಮೊಬೈಲ್, ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದ ಕಾರಣಕ್ಕೆ ಆರೋಪಿಗಳನ್ನು ಪತ್ತೆ ಮಾಡಲು ಕಷ್ಟವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.