ಬ್ಯಾಂಕ್ ನಕಲಿ ಆಪ್: ಗ್ರಾಹಕರ ಡೇಟಾಗೆ ಕನ್ನ

ನವದೆಹಲಿ: ಗೂಗಲ್​ಪ್ಲೇ ಸ್ಟೋರ್​ನಲ್ಲಿ ಎಸ್​ಬಿಐ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್​ಗಳ ಆಪ್​ಗಳು ಲಭ್ಯ ಇವೆ. ನೋಡಲು ನೈಜ ಆಪ್​ಗಳಂತೇ ಕಂಡರೂ ಇವುಗಳಲ್ಲಿ ಬಹುತೇಕ ಆಪ್​ಗಳು ನಕಲಿಯಾಗಿರುತ್ತವೆ ಎಂದು ಹೇಳಲಾಗುತ್ತಿದೆ. ಇಂತಹ ನಕಲಿ ಆಪ್​ಗಳ ಮೂಲಕ ಗ್ರಾಹಕರ ಡೆಬಿಟ್/ಕ್ರೆಡಿಟ್​ಕಾರ್ಡ್​ನಿಂದ ಹಿಡಿದು ಹಲವು ಮಹತ್ವದ ಮಾಹಿತಿಗೆ ಖದೀಮರು ಕನ್ನಹಾಕಿದ್ದಾರೆೆ ಎಂದು ಐಟಿ ಭದ್ರತಾ ಸಂಸ್ಥೆ ಸೋಫೋಸ್ ಲ್ಯಾಬ್ಸ್ ಹೇಳಿದೆ.

ನಕಲಿ ಆಪ್​ಗಳಲ್ಲಿ ಕೂಡ ಬ್ಯಾಂಕ್​ಗಳ ಲಾಂಛನವನ್ನು ಬಳಸಲಾಗುವುದರಿಂದ ನೈಜ ಹಾಗೂ ನಕಲಿ ಆಪ್ ನಡುವೆ ವ್ಯತ್ಯಾಸ ತಿಳಿಯುವುದಿಲ್ಲ. ಆದರೆ, ನಕಲಿ ಆಪ್​ಗಳಲ್ಲಿ ಅಳವಡಿಸಲಾಗಿರುವ ಮಾಲ್​ವೇರ್​ಗಳ ಮೂಲಕ ಭಾರತೀಯ ಉಪಖಂಡದ ಕೋಟ್ಯಂತರ ಗ್ರಾಹಕರ ಬ್ಯಾಂಕ್ ಖಾತೆಯ ವಿವರಗಳು ಅಥವಾ ಕ್ರೆಡಿಟ್​ಕಾರ್ಡ್​ಗಳ ಸಂಖ್ಯೆಗಳನ್ನು ಕಳವು ಮಾಡಲಾಗಿದೆ ಎಂದು ಸೋಫೋಸ್ ಲ್ಯಾಬ್ಸ್​ನ ಪಂಕಜ್ ಕೊಹ್ಲಿ ತಿಳಿಸಿದ್ದಾರೆ.

ಆಕರ್ಷಕ ಕೊಡುಗೆಗಳು: ಕುಳಿತಲ್ಲೇ ಬ್ಯಾಂಕ್ ವ್ಯವಹಾರ ಮಾಡಬಹುದು ಎಂಬ ಕಾರಣಕ್ಕೆ ಸಾಕಷ್ಟು ಗ್ರಾಹಕರು ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುತ್ತಾರೆ. ಡೌನ್​ಲೋಡ್ ಮಾಡಿಕೊಳ್ಳಲು ಹಿಂದೇಟು ಹಾಕುವ ಗ್ರಾಹಕರನ್ನು ವಿಶೇಷವಾದ ಕೊಡುಗೆಗಳ ಆಮಿಷ ಒಡ್ಡಿ ಡೌನ್​ಲೋಡ್ ಮಾಡಿಕೊಳ್ಳಲು ನಕಲಿ ಆಪ್​ಗಳನ್ನು ರೂಪಿಸುವವರು ಪ್ರೇರೇಪಿಸುತ್ತಾರೆ. ಈ ಆಪ್ ಇ-ವ್ಯಾಲೆಟ್ ಎಂದು, ಇದರ ಮೂಲಕ ಮಾಡಲಾಗುವ ಖರೀದಿಗಳಿಗೆ ವಿಶೇಷವಾದ ಉಡುಗೊರೆ, ಕ್ಯಾಶ್​ಬ್ಯಾಕ್ ಸೌಲಭ್ಯ, ಉಚಿತವಾದ ಮೊಬೈಲ್ ಡೇಟಾ ಇಲ್ಲವೇ ಬಡ್ಡಿರಹಿತ ಸಾಲ ಸೌಲಭ್ಯ ನೀಡುವುದಾಗಿ ಹೇಳಿ ನಕಲಿ ಆಪ್​ಗಳನ್ನು ರೂಪಿಸುವವರು ಬಲೆ ಬೀಸುತ್ತಾರೆ. ಇನ್ನು ಕೆಲವರು ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಮನೆಬಾಗಿಲಿಗೇ ತಂದುಕೊಡುವ ಭರವಸೆ ನೀಡಿ ಡೌನ್​ಲೋಡ್ ಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ.

ಪರಿಹಾರ ಏನು?

ಬ್ಯಾಂಕ್ ಖಾತೆ ವಿವರ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿ ದುಷ್ಕರ್ವಿುಗಳ ಕೈಗೆ ಸಿಗದಂತೆ ನೋಡಿಕೊಳ್ಳಲು ಮೊಬೈಲ್​ನಲ್ಲಿ ಆಂಟಿವೈರಸ್ ಸಾಫ್ಟ್​ವೇರ್ ಅಳವಡಿಸಿ ಕೊಳ್ಳುವುದು ಸೂಕ್ತ. ಇದರಿಂದ ಮಾಲ್​ವೇರ್​ಗಳಿಗೆ ಮಾಹಿತಿ ಕದಿಯಲು ಸಾಧ್ಯವಾಗುವುದಿಲ್ಲ. ಮೊಬೈಲ್ ಆಪ್​ಗಳನ್ನು ಗೂಗಲ್ ಪ್ಲೇನಿಂದ ಡೌನ್​ಲೋಡ್ ಮಾಡುವಾಗ ಅದರ ಅಧಿಕೃತತೆ ಪರಿಶೀಲಿಸಬೇಕು. ಆಯಾ ಬ್ಯಾಂಕ್​ಗಳು ತಮ್ಮ ಹೆಸರಿನಲ್ಲಿ ಪ್ರಮೋಟ್ ಮಾಡುತ್ತಿ ರುವ ಆಪ್​ಗಳನ್ನು ಮಾತ್ರ ಡೌನ್​ಲೋಡ್ ಮಾಡಬೇಕು.