ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳು ಶುಲ್ಕದ ಹೆಸರಿನಲ್ಲಿ ಪಡಿತರದಾರರಿಂದ ಸುಲಿಗೆ ಮಾಡುತ್ತಿರುವ ಕುರಿತ ವಿಜಯವಾಣಿ ರಿಯಾಲಿಟಿ ಚೆಕ್ ವರದಿಗೆ ಸರ್ಕಾರ ತಕ್ಷಣ ಸ್ಪಂದಿಸಿದೆ. ನ್ಯಾಯಯುತವಾಗಿ ಪಡಿತರ ವಿತರಿಸದೆ ಫಲಾನುಭವಿಗಳನ್ನು ವಂಚಿಸುವ ದೂರು ಬಂದಲ್ಲಿ ಅಂಥ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನೇ ರದ್ದುಪಡಿಸುವುದಾಗಿ ಆಹಾರ ಇಲಾಖೆ ಎಚ್ಚರಿಸಿದೆ.

‘ನ್ಯಾಯಬೆಲೆಯಲ್ಲಿ ವಂಚನೆ ಬಲೆ’ ಶೀರ್ಷಿಕೆಯಡಿ ಗುರುವಾರ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಡಿಯೋ ಸಂವಾದದ ಮೂಲಕ ಗಂಭೀರ ಚರ್ಚೆ ನಡೆಸಿದರು. ಆಹಾರ ನಿರೀಕ್ಷಕರು ಮತ್ತು ಶಿರಸ್ತೆದಾರರು ಕಡ್ಡಾಯವಾಗಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪರಿಶೀಲಿಸುವಂತೆ ಮತ್ತೊಮ್ಮೆ ಅಧಿಸೂಚನೆ ಹೊರಡಿ ಸುವುದಾಗಿ ಆಯುಕ್ತ ಟಿಎಚ್​ಎಂ ಕುಮಾರ್ ತಿಳಿಸಿದರು.

ಆಹಾರ ನಿರೀಕ್ಷಕರು ಮತ್ತು ಶಿರಸ್ತೆದಾರರು ಅಂಗಡಿಗೆ ತೆರಳಿ ಪರಿಶೀಲಿಸಲು ಸಮಯ ಸಾಲುತ್ತಿಲ್ಲ. ಹೀಗಾಗಿ ಪ್ರತಿ ತಿಂಗಳ 7 ನೇ ತಾರೀಖಿನಂದು ಆಹಾರ ಆದಾಲತ್ ನಡೆಸುತ್ತಿದ್ದೇವೆ. ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಜಾಗೃತಿ ಸಮಿತಿ ರೇಷನ್ ನೀಡುವ ಕ್ರಮದ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಒಂದು ವೇಳೆ ಪಡಿತರ ವಂಚನೆ, ಸುಲಿಗೆ ಬಗ್ಗೆ ಆರೋಪ ಕೇಳಿಬಂದರೆ ಮುಲಾಜಿಲ್ಲದೆ ಅಂಥ ರೇಷನ್ ಅಂಗಡಿಗಳ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದರು.

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಎಷ್ಟರಮಟ್ಟಿಗೆ ಅನುಷ್ಠಾನ ಮಾಡಲಾಗುತ್ತಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಕಳೆದ ವರ್ಷ 400 ಅಂಗಡಿಗಳ ಸೋಷಿಯಲ್ ಆಡಿಟ್ ಮಾಡಲಾಗಿತ್ತು. ಈ ಬಾರಿ ಕೂಡ ಮಾಡುತ್ತೇವೆ. ಜಾಗೃತಿ ಸಮಿತಿಗಳು ತಮ್ಮ ವ್ಯಾಪ್ತಿಗೆ ಬರುವ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪರಿಶೀಲಿಸಲಿವೆ. ಪಡಿತರ ವಿತರಣೆ ಸರಿಯಾಗಿ ಆಗುತ್ತಿದೆಯೇ, ಪಡಿತರ ನೀಡುವ ವೇಳೆ ಮಾಲೀಕರು ಏನು ಹೇಳುತ್ತಾರೆ ಎನ್ನುವುದು ಸೇರಿ ಇನ್ನಿತರ ವಿಷಯಗಳ ಬಗ್ಗೆ ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸುತ್ತೇವೆ. ಏನಾದರೂ ತಪು್ಪ ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಪ್ರತಿ ಜಾಗೃತಿ ಸಮಿತಿಯಲ್ಲಿ ಐವರು ಸದಸ್ಯರು ಇರುತ್ತಾರೆ. ಜಿಲ್ಲಾ ಜಾಗೃತಿ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿರುತ್ತಾರೆ ಎಂದು ಅವರು ವಿವರಿಸಿದರು.

20ಕ್ಕೆ ವಿತರಕರ ಸಂಘದ ಸಭೆ

ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗಳ ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘವು ನ.20ರಂದು ಬೆಂಗಳೂರಿನಲ್ಲಿ ಸಭೆ ಕರೆದಿದೆ. ಪಡಿತರ ನೀಡುವ ಕ್ರಮ, ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಇರುವ ಆರೋಪ, ಅಸಮರ್ಪಕ ತೂಕ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

ಕಣ್ತೆರೆದ ಇಲಾಖೆ

ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತ 7 ಕೆಜಿ ಅಕ್ಕಿ ಮತ್ತು 38 ರೂ.ಪಡೆದು 1 ಕೆಜಿ ಬೇಳೆ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ಉಚಿತ 35 ಕೆಜಿ ಅಕ್ಕಿ ವಿತರಿಸಬೇಕು. ಅದು ಬಿಟ್ಟು ಇನ್ಯಾವುದಕ್ಕೂ ಹಣ ತೆಗೆದುಕೊಳ್ಳುವಂತಿಲ್ಲ ಎಂದು ಆಹಾರ ಇಲಾಖೆಯು ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ನಿರ್ದೇಶನ ನೀಡಿದೆ. ಹೀಗಿದ್ದರೂ ನಿಯಮಗಳನ್ನು ಮೀರಿ ಫಲಾನುಭವಿಗಳಿಂದ ಬೇರೆ ಹೆಸರಿನಲ್ಲಿ ಶುಲ್ಕ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರು ಬಂದರೆ ಲೈಸೆನ್ಸ್ ರದ್ದು ಮಾಡುವುದಾಗಿ ಆಹಾರ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.