ನ್ಯಾಯಬೆಲೆಯಲ್ಲಿ ವಂಚನೆ ಬಲೆ

ಬೆಂಗಳೂರು: ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಪಡಿತರ ವಿತರಿಸಬೇಕಾದ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಂದ ಹಣ ಸುಲಿಯುವುದಕ್ಕಾಗಿ ದಿನಕ್ಕೊಂದರಂತೆ ವಂಚನೆಯ ಬಲೆ ಹೆಣೆಯುತ್ತಿವೆ. ಶುಲ್ಕ ಈ ಸಾಲಿಗೆ ಹೊಸ ಸೇರ್ಪಡೆ. ವಿವಿಧ ಶುಲ್ಕಗಳ ಹೆಸರಿನಲ್ಲಿ ಗ್ರಾಹಕರಿಂದ ಅಕ್ರಮವಾಗಿ ಹಣ ಪೀಕುತ್ತಿರುವ ಪಡಿತರ ಅಂಗಡಿಗಳ ಸಿಬ್ಬಂದಿ, ಯಾರಾದರೂ ಇದನ್ನು ಪ್ರಶ್ನಿಸಿದಲ್ಲಿ ರೇಷನ್ ಕಾರ್ಡನ್ನೇ ರದ್ದುಗೊಳಿಸುವ ಧಮ್ಕಿ ಹಾಕುತ್ತಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಈ ಅಂಶ ಬಯಲಾಗಿದೆ. ನ್ಯಾಯಬೆಲೆ ಅಂಗಡಿಗಳ ಈ ಅವ್ಯವಹಾರದ ಸಮಗ್ರ ಮಾಹಿತಿಯನ್ನು ಇಲ್ಲಿ ತೆರೆದಿಡಲಾಗಿದೆ.

ಎಷ್ಟು ವಸೂಲಿ: ರಾಜ್ಯದಲ್ಲಿ 20,034 ನ್ಯಾಯಬೆಲೆ ಅಂಗಡಿಗಳಿದ್ದು, ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯದ ಫಲಾನುಭವಿಗಳಿಗೆ ಪಡಿತರ ವಿತರಿಸಲಾಗುತ್ತಿದೆ. ಬಯೋಮೆಟ್ರಿಕ್ ಶುಲ್ಕ 10 ರೂ., ತೂಕ ಮಾಡುವವನ ವೇತನ ಹಾಗೂ ಪಡಿತರ ಸಾಗಾಣಿಕೆ ವೆಚ್ಚ 10 ರೂ. ಎಂದು ಹೇಳಿ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ಕಾರ್ಡ್​ದಾರರಿಂದ ಕನಿಷ್ಠ 20 ರೂ. ವಸೂಲಿ ಮಾಡುತ್ತಿದ್ದಾರೆ.

ರಿಯಾಲಿಟಿ ಚೆಕ್​ನಲ್ಲಿ ಕಂಡಿದ್ದು

# ಬೇರೆಬೇರೆ ಕಾರಣಗಳನ್ನು ನೀಡಿ ಹೆಚ್ಚುವರಿ ಹಣ ವಸೂಲಿ

# ಅಕ್ಕಿ, ಬೇಳೆ ಜತೆ ಉಪ್ಪು, ಸಕ್ಕರೆ, ಸೋಪು ಬಲವಂತ ಮಾರಾಟ

# ಬೇಳೆಕಾಳಿಗೆ ನಿಗದಿತ ದರಕ್ಕಿಂತ 5 ರೂ. ಹೆಚ್ಚುವರಿ ವಸೂಲಿ

# ಸರ್ಕಾರ ನಿಗದಿಪಡಿಸಿರುವ ಅಕ್ಕಿಗಿಂತ 2 ಕೆ.ಜಿ ಕಡಿಮೆ ವಿತರಣೆ

# ಹೆಬ್ಬೆಟ್ಟಿನ ಗುರುತಿನ ಚೀಟಿ ಪಡೆಯಲು 15 ರೂ. ಸ್ವೀಕಾರ

# ಸಕ್ಕರೆ, ಸೋಪು ನಿರಾಕರಿಸಿದರೆ ಪಡಿತರ ಕೊಡಲು ಹಿಂದೇಟು

# ಅಂತ್ಯೋದಯಕ್ಕೆ ಬಿಪಿಎಲ್​ಗೆ ನೀಡುವಷ್ಟೇ ಅಕ್ಕಿ

# 1 ಕೆ.ಜಿ ಬೇಳೆ 38 ರೂಪಾಯಿಗೆ ನಿಗದಿಯಾಗಿದ್ದರೂ ಪಡಿತರದಾರರಿಂದ 40 ರೂ. ಪಡೆಯಲಾಗುತ್ತಿದೆ

ಬಡವರು ಕಂಗಾಲು

ರಾಜ್ಯದಲ್ಲಿ 1.13 ಕೋಟಿ ಬಿಪಿಎಲ್, 18.86 ಲಕ್ಷ ಎಪಿಎಲ್ ಮತ್ತು 7.79 ಲಕ್ಷ ಅಂತ್ಯೋದಯ ಸೇರಿ ಒಟ್ಟು 1.40 ಕೋಟಿ ರೇಷನ್ ಕಾರ್ಡ್​ಗಳಿವೆ. ಇದರಲ್ಲಿ 3.80 ಲಕ್ಷ ಎಪಿಎಲ್, 1.13 ಕೋಟಿ ಬಿಪಿಎಲ್ ಮತ್ತು7.79 ಲಕ್ಷ ಅಂತ್ಯೋದಯ ಕಾರ್ಡ್​ದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುತ್ತಾರೆ. ಪ್ರತಿ ತಿಂಗಳು ಒಂದು ಕಾರ್ಡ್​ಗೆ 7 ಕೆಜಿ ಉಚಿತ ಅಕ್ಕಿ ಮತ್ತು 40 ರೂ.ನಂತೆ 1 ಕೆಜಿ ಬೇಳೆ ಕಾಳು ನೀಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ವಿವಿಧ ಕಾರಣ ನೀಡಿ ಪ್ರತಿ ಕಾರ್ಡ್​ಗೆ 20 ರೂ. ಶುಲ್ಕ ಪಡೆಯುತ್ತಿದ್ದಾರೆ. ತಲಾ ಅಂಗಡಿ ವ್ಯಾಪ್ತಿಗೆ 600ರಿಂದ 700 ಕಾರ್ಡ್​ಗಳು ಬರುತ್ತಿದ್ದು, ತಿಂಗಳಿಗೆ ಅಂದಾಜು 10 ರಿಂದ 15 ಸಾವಿರ ರೂ. ಸಂಗ್ರಹವಾಗುತ್ತದೆ. ಒಟ್ಟಾರೆ 1.20 ಕೋಟಿ ಕಾರ್ಡ್​ಗಳಿಗೆ ಸರಾಸರಿ ಲೆಕ್ಕ ಹಾಕಿದರೂ ಮಾಸಿಕ 24 ಕೋಟಿ ರೂ. ಆಗುತ್ತದೆ.

ನ್ಯಾಯಬೆಲೆ ಅಂಗಡಿ ಮಾಲೀಕರು ಫಲಾನುಭವಿಗಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ. ಸರ್ಕಾರದಿಂದ ಉಚಿತವಾಗಿ ಅಕ್ಕಿ ನೀಡಲಾಗುತ್ತದೆ. ಹಣ ವಸೂಲಿ ಬಗ್ಗೆ ದೂರು ಬಂದರೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

| ವಿಜಯ ಕುಮಾರ್ ಆಹಾರ ಇಲಾಖೆ ಜಂಟಿ ನಿರ್ದೇಶಕ.

ಬಲವಂತದ ಮಾರಾಟ

ಸಕ್ಕರೆ, ಉಪು್ಪ, ಎಣ್ಣೆ ಮತ್ತು ಸೋಪು ವಿತರಿಸದಂತೆ ರಾಜ್ಯ ಸರ್ಕಾರ ಆದೇಶಿಸಿ ದ್ದರೂ ಕೆಲ ನ್ಯಾಯಬೆಲೆ ಅಂಗಡಿಗಳು ಕಡಿಮೆ ಬೆಲೆಗೆ ತಂದ ಈ ವಸ್ತುಗಳನ್ನು ರೇಷನ್ ವಿತರಣೆ ವೇಳೆ ಹೆಚ್ಚಿನ ಬೆಲೆಗೆ ನೀಡುತ್ತಿವೆ.


ಪಡಿತರ ಅಕ್ರಮದ ಜಿಲ್ಲಾವಾರು ದರ್ಶನ

ತುಮಕೂರು
# ಬಯೋಮೆಟ್ರಿಕ್ ಟೋಕನ್ ಹೆಸರಲ್ಲಿ 10 ರೂ., ಅಕ್ಕಿ ವಿತರಣೆ ಬಳಿಕ 10 ರೂ. ವಸೂಲಿ.
# ಬಟ್ಟೆ ಸೋಪು, ಸಬೀನಾ, ಪಾತ್ರೆ ತೊಳೆವ ಸೋಪು, ಸಕ್ಕರೆ, ಉಪ್ಪು ಕಡ್ಡಾಯವೆಂದು ಹೇಳಿಕೆ.

ಚಿಕ್ಕಬಳ್ಳಾಪುರ
# ಹೆಚ್ಚುವರಿಯಾಗಿ 15 ರೂ. ಸಂಗ್ರಹ. 133 ರೂ.ಗೆ 150 ರೂ. ವಸೂಲಿ.
# ಸಾಬೂನು, ಉಪ್ಪು ಖರೀದಿಸುವುದು ಕಡ್ಡಾಯವೆಂದು ಹಣ ವಸೂಲಿ.

ರಾಮನಗರ
# ಬಯೋಮೆಟ್ರಿಕ್, ಸಾಗಣೆ ಶುಲ್ಕ ಎಂದು ಹೆಚ್ಚುವರಿ 50 ರೂ. ಸಂಗ್ರಹ.
# ಬೇಳೆಕಾಳಿಗೆ ಪ್ರತಿ ಕೆ.ಜಿಗೆ ಹೆಚ್ಚುವರಿಯಾಗಿ 5 ರೂ. ಪಡೆಯಲಾಗುತ್ತಿದೆ.
# ಸೋಪು, ಟೀ ಪುಡಿ, ದಿನಬಳಕೆ ವಸ್ತುಗಳನ್ನು ಹೆಚ್ಚು ಬೆಲೆಗೆ ಮಾರಾಟ.
# ದಿನಬಳಕೆ ವಸ್ತು ಖರೀದಿಸದಿದ್ದರೆ ಅಕ್ಕಿ, ಬೇಳೆ ಕೊಡಲ್ಲವೆಂದು ಬೆದರಿಕೆ.

ರಾಯಚೂರು:
# ತೊಗರಿ ಬೇಳೆಗೆ ನಿಗದಿಪಡಿಸಿದ 38 ರೂ. ಬದಲಿಗೆ 40 ರೂ. ವಸೂಲಿ.
# ನಿಗದಿಪಡಿಸಿರುವ ಅಕ್ಕಿಗಿಂತ 2 ಕೆ.ಜಿ ಕಡಿಮೆ ಕೊಡಲಾಗುತ್ತದೆ.

ಕೊಪ್ಪಳ
# ಅಕ್ಕಿ, ಬೇಳೆ ಜತೆಗೆ ಉಪ್ಪು, ಎಣ್ಣೆ, ಜೀರಿಗೆ ಸೇರಿ ಇತರ ಆಹಾರ ಪದಾರ್ಥಗಳ ಮಾರಾಟ.

ಬಳ್ಳಾರಿ
# ಇಂಟರ್​ನೆಟ್ ಬ್ರೌಸಿಂಗ್ ಹೆಬ್ಬೆಟ್ಟಿನ ಗುರುತು ಚೀಟಿಗೆ 10 ರೂ. ಸಂಗ್ರಹ.

ಕಲಬುರಗಿ
# ಬಲವಂತವಾಗಿ ಉಪ್ಪು, ಎಣ್ಣೆ, ಸಕ್ಕರೆ, ಖಾರದಪುಡಿ, ಸಬೀನಾ ಸೋಪು ಮಾರಾಟ.

ಹುಬ್ಬಳ್ಳಿ
# ಬಯೋಮೆಟ್ರಿಕ್ ಶುಲ್ಕ ಹೆಸರಿನಲ್ಲಿ 12 ರೂ. ವಸೂಲಿ.
# ಉಚಿತ ಅಕ್ಕಿ, 1 ಕೆ.ಜಿ. ಬೇಳೆಗೆ 38 ರೂ. ಬದಲು 50 ರೂ. ಸ್ವೀಕೃತಿ.
# ಉಪ್ಪು, ಬಟ್ಟೆ ಸಾಬೂನು, ಚಹಾ ಪುಡಿ ನೀಡಿ 100 ರೂ. ಸಂಗ್ರಹ.
# ಪ್ರತಿ ಕಾರ್ಡ್​ನ ಅಕ್ಕಿಯಲ್ಲಿ 1 ಕೆ.ಜಿ. ಕಡಿತಗೊಳಿಸಿ ವಿತರಣೆ.

ಹಾವೇರಿ
# ಬೇಳೆ, ಗೋಧಿ, ತಾಳೆಎಣ್ಣೆ ಪಡೆದ ನಂತರ ಉಳಿಯುವ ಚಿಲ್ಲರೆ ಹಣ ಕೊಡಲ್ಲ.
# ಬಟ್ಟೆ ಸೋಪು, ಟೀ ಪುಡಿ, ಪೇಸ್ಟ್, ಕಡ್ಡಿಪೊಟ್ಟಣದಂತಹ ವಸ್ತುಗಳ ಮಾರಾಟ.

ಕಾರವಾರ
# ತೊಗರಿಬೇಳೆಗೆ 38 ರೂ. ಬದಲು 40 ರೂ. ವಸೂಲಿ.

ಶಿರಸಿ
# 3 ಲೀ. ಸೀಮೆ ಎಣ್ಣೆಗೆ ಒಪ್ಪಿಗೆ ಪಡೆದರೂ 2 ಲೀ. ವಿತರಣೆ.

ವಿಜಯಪುರ
# ಫಲಾನುಭವಿಗಳಿಂದ ಕನಿಷ್ಠ 10 ರೂ. ಹೆಚ್ಚುವರಿ ವಸೂಲಿ.
# ಸಕ್ಕರೆ ಬೇಡವೆಂದರೂ ಖರೀದಿ ಕಡ್ಡಾಯವೆಂದು ಬಲವಂತ.

ಚಿತ್ರದುರ್ಗ
# ಬಯೋಮೆಟ್ರಿಕ್ ಶುಲ್ಕ 20 ರೂ., ನಿರ್ವಹಣಾ ವೆಚ್ಚವೆಂದು 20 ರೂ. ಸಂಗ್ರಹ.

ಬಾಗಲಕೋಟೆ
# ಬಯೋಮೆಟ್ರಿಕ್ ಶುಲ್ಕದ ಹೆಸರಲ್ಲಿ 10 ರೂ. ವಸೂಲಿ.
# ತೂಕದಲ್ಲೂ 1 ಕೆ.ಜಿ ಕಡಿಮೆ ಕೊಟ್ಟು ಗ್ರಾಹಕರಿಗೆ ಮೋಸ.

ಬೆಳಗಾವಿ
# ವಿವಿಧ ಶುಲ್ಕದ ಹೆಸರಿನಲ್ಲಿ ತಲಾ 15 ರಿಂದ 20 ರೂ. ಸಂಗ್ರಹ.
# ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಬಳಿಕ ಕೈಬಿಟ್ಟಿದ್ದಾರೆ.

ಚಿಕ್ಕಮಗಳೂರು
# ಎನ್.ಆರ್.ಪುರ ವ್ಯಾಪ್ತಿಯಲ್ಲಿ ಕಾಳಸಂತೆಯಲ್ಲಿ ಪಡಿತರ ಮಾರಾಟ.
# ಬಯೋ ಮೆಟ್ರಿಕ್ ಶುಲ್ಕವೆಂದು 10ರಿಂದ 20 ರೂ. ವಸೂಲಿ.

ಹಾಸನ
# ಕಾರ್ಡ್​ದಾರರಿಂದ ನಿಗದಿಗಿಂತಲೂ 15-20 ರೂ. ಹೆಚ್ಚು ಸಂಗ್ರಹ.
# ಬಿಪಿಎಲ್ ಕಾರ್ಡ್​ದಾರರಿಗೆ ತಲಾ ಅರ್ಧ ಕೆ.ಜಿ. ಅಕ್ಕಿ ಕಡಿತಗೊಳಿಸಿ ವಿತರಣೆ.
# ಗೋದಾಮಿನಿಂದ ಬರುವ ಚೀಲದಲ್ಲಿ ಅಕ್ಕಿ ಕಡಿಮೆ ಇರುತ್ತದೆಂಬ ಸಬೂಬು.

ಮಂಡ್ಯ
# ಅಕ್ಕಿ, ಬೇಳೆ ಜತೆಗೆ 50 ರೂ. ಹೆಚ್ಚುವರಿ ವಸೂಲಿ.
# 38 ರೂ. ನಿಗದಿಯಾಗಿರುವ ಬೇಳೆಗೆ 50 ರೂ. ಸಂಗ್ರಹ.

ಮೈಸೂರು
# ನಿಗದಿಗಿಂತ 20 ರೂ. ಹೆಚ್ಚುವರಿ ವಸೂಲಿ.
# ಇತರ ಪದಾರ್ಥ ಕೊಳ್ಳದಿದ್ದರೆ ಉಚಿತ ಅಕ್ಕಿ ಕೊಡುವುದಿಲ್ಲವೆಂದು ಬೆದರಿಕೆ.

ಕೊಡಗು
# ಬಯೋಮೆಟ್ರಿಕ್, ಸಾಗಣೆ ಶುಲ್ಕವಾಗಿ 20 ರೂ. ವಸೂಲಿ.

ದಾವಣಗೆರೆ
# ಅಕ್ಕಿ ಮತ್ತು ಬೇಳೆಗೆ ನಿಗದಿತ ದರಕ್ಕಿಂತ 5ರಿಂದ 10 ರೂ. ಹೆಚ್ಚು ಸಂಗ್ರಹ.

ಶಿವಮೊಗ್ಗ
# 38 ರೂ. ತೊಗರಿಬೇಳೆಗೆ 40 ರೂ. ಪಡೆಯಲಾಗುತ್ತಿದೆ.

ಕೋಲಾರ
# ತೊಗರಿ ಬೇಳೆಗೆ ಸರ್ಕಾರ ನಿಗದಿಪಡಿಸಿರುವ 38 ರೂ. ಬದಲಾಗಿ 40 ರೂ. ವಸೂಲಿ.
# ಜಿಲ್ಲೆಯ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚುವರಿಯಾಗಿ 12 ರೂ. ಸಂಗ್ರಹ.
# ಸಕ್ಕರೆ, ಅಡುಗೆ ಎಣ್ಣೆ, ಸೋಪು, ಉಪ್ಪು ಬಲವಂತವಾಗಿ ಮಾರಾಟ ಮಾಡಲಾಗುತ್ತಿದೆ.
# ತೊಗರಿ ಬೇಳೆ ಜತೆ ಬಟ್ಟೆ ಸೋಪು, ಸರ್ಫ್ ಬಲವಂತವಾಗಿ ನೀಡಿ 100 ರೂ. ವಸೂಲಿ.