ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಕಡ್ಡಾಯ

ಚಿಕ್ಕಮಗಳೂರು: ಗೊಬ್ಬರ, ಕೀಟನಾಶಕಗಳ ಅಂಗಡಿಗಳಲ್ಲಿ ದರಪಟ್ಟಿಯನ್ನು ಹಾಕದೆ ಹಾಗೂ ನ್ಯಾಯಯುತ ಬೆಲೆಗೆ ಮಾರಾಟ ಮಾಡದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಗೊಬ್ಬರದ ಅಂಗಡಿಗಳಲ್ಲಿ ದರಪಟ್ಟಿ ಹಾಕಿಲ್ಲವೆಂಬ ದೂರು ಬಂದಿವೆ. ಅಧಿಕಾರಿಗಳು ತಕ್ಷಣ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ನಾಮಫಲಕ ಮತ್ತು ಲೆಕ್ಕಪತ್ರ ಸರಿಯಾಗಿ ನೀಡದೆ ಇರುವವರ ಅಂಗಡಿ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಹೇಳಿದರು.

ಅಧಿಕಾರಿಗಳು ಇಲಾಖೆಗೆ ಬರುವ ಅನುದಾನದ ಬಗ್ಗೆ ರ್ಚಚಿಸಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಚುನಾಯಿತ ಪ್ರತಿನಿಧಿಗಳು ಸಭೆಯಲ್ಲಿ ಹೇಳುವುದು, ಅಧಿಕಾರಿಗಳು ಕೇಳಿಕೊಂಡು ಹೋಗುವ ಪರಿಸ್ಥಿತಿ ಜಿಪಂನಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.

ಮಾಹಿತಿ ನೀಡಿ: ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ನೌಕರರು ಸರಿಯಾದ ಮಾಹಿತಿ ನೀಡಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಬೇಕು. ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆದಿರುವ ರೈತರನ್ನು ಪ್ರೋತ್ಸಾಹಿಸಿ ಉತ್ತಮ ಮಾರ್ಗದರ್ಶನ ನೀಡಬೇಕೆಂದರು.

ಅಡಕೆ ಸುಲಿಯುವ ಯಂತ್ರಗಳಿಗೆ ಸಬ್ಸಿಡಿ ನೀಡಿದ್ದರೂ ಕಡೂರು, ತರೀಕೆರೆ, ಮೂಡಿಗೆರೆ ಭಾಗದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ. ಎಲ್ಲ ಗ್ರಾಮ ಸಭೆಗಳಲ್ಲೂ ಅಧಿಕಾರಿಗಳು ಭಾಗವಹಿಸಬೇಕು. ಇಲಾಖೆಯ ಸೌಲಭ್ಯಗಳ ಬಗ್ಗೆ ಹೆಚ್ಚು ಮಾಹಿತಿ ನೀಡಬೇಕೆಂದು ತಿಳಿಸಿದರು. ಜಿಪಂ ಸದಸ್ಯರಾದ ಪ್ರೇಮಾ, ಕೆ.ವಿ.ಮಂಜುನಾಥ್, ಸುಧಾ ಯೋಗೀಶ್, ಉಪಕಾರ್ಯದರ್ಶಿ ರಾಜಗೋಪಾಲ್ ಇದ್ದರು.

 

ಪೈಪ್​ಗಳ ಗುಣಮಟ್ಟ ಸರಿಯಿಲ್ಲ

ಗಂಗಾಕಲ್ಯಾಣ ಯೋಜನೆಯಡಿ ಗುಣಮಟ್ಟದ ಪೈಪ್ ಮತ್ತು ಮೋಟಾರ್ ವಿತರಿಸುತ್ತಿಲ್ಲವೆಂಬ ಅಸಮಾಧಾನ ರೈತರಿಂದ ಕೇಳಿಬರುತ್ತಿದೆ. ಗುಣಮಟ್ಟ ಸರಿ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಕೈಗಾರಿಕಾ ಇಲಾಖೆಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿ ನೀಡಿದರೂ ಬ್ಯಾಂಕಿನಲ್ಲಿ ಸಾಲ ಸರಿಯಾಗಿ ವಿತರಿಸುತ್ತಿಲ್ಲ ಎಂದರು. ಬರದಿಂದ ತತ್ತರಿಸಿರುವ ಲಕ್ಯಾ ಹೋಬಳಿಗೆ ಸರ್ಕಾರಕ್ಕೆ ಸರಿಯಾಗಿ ಮಾಹಿತಿ ನೀಡಿ ವಿಶೇಷ ಅನುದಾನ ತರಿಸಬೇಕು. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದರು. ಸದಸ್ಯ ಮಹೇಶ್ ಒಡೆಯರ್ ಮಾತನಾಡಿ, ಚುನಾವಣೆಗಳು ಸಮೀಪಿಸುತ್ತಿದ್ದು, ತಕ್ಷಣ ವಿವಿಧ ಕಾಮಗಾರಿಗಳನ್ನು ಜನವರಿಯೊಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸದಸ್ಯ ಪ್ರಭಾಕರ್ ಮಾತನಾಡಿ, ಕೃಷಿ ಇಲಾಖೆ ಮಾಡುತ್ತಿರುವ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ತೋಟಗಾರಿಕೆ, ಪಶುಪಾಲನೆ ಇಲಾಖೆ ವತಿಯಿಂದ ಹೆಚ್ಚಿನ ಮಳಿಗೆ ಹಾಕಬೇಕು. ಇದರಿಂದ ರೈತರಿಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದರು.