ಕಂಪನಿ ಮಾತಿಗೆ ಮರುಳು, ಹೆಚ್ಚಿನ ಬಡ್ಡಿ ಆಸೆಗಾಗಿ ಲಕ್ಷಾಂತರ ರೂ. ಹೂಡಿಕೆ

ಭಟ್ಕಳ: ಹೆಚ್ಚಿನ ಬಡ್ಡಿ ಪಡೆಯುವ ಆಸೆಯಿಂದ ಹೆಸರು ಗೊತ್ತಿಲ್ಲದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ಪಟ್ಟಣದ ಜನರು ಈಗ ಪರಿತಪಿಸುವಂತಾಗಿದೆ. ತಮ್ಮ ಹಣ ವಾಪಸ್ ನೀಡುವಂತೆ ಕಂಪನಿ ಏಜೆಂಟರ ಮನೆಗೆ ಭಾನುವಾರ ಮುತ್ತಿಗೆ ಹಾಕಿದ್ದಾರೆ.

ಪಟ್ಟಣದ ಆಜಾದ್​ನಗರ ಐದನೇ ಕ್ರಾಸ್​ನಲ್ಲಿ ಮನೆ ಹೊಂದಿದ ಮೂವರು ಸ್ಥಳೀಯರು ‘ನಾಳಿನ ಉತ್ತಮ ಜೀವನಕ್ಕಾಗಿ ಇಂದು ಹೂಡಿಕೆ ಮಾಡಿ’ (ಇನ್ವೆಸ್ಟ್ ಟುಡೇ ಫಾರ್ ಬೆಟರ್ ಟುಮಾರೋ) ಎಂಬ ಟ್ಯಾಗ್​ಲೈನ್ ಹೊಂದಿದ ಬೆಂಗಳೂರು ಜೆ.ಸಿ.ನಗರ, 20 ಎಂ.ಆರ್.ಪಾಳ್ಯ ರಸ್ತೆಯಲ್ಲಿ ಮುಖ್ಯ ಕಚೇರಿ ಇರುವ ಟ್ರೇಡ್​ಲಿಂಕ್ ಕಂಪನಿಯ ಹೆಸರಿನಲ್ಲಿ ಮಾರ್ಚ್​ನಿಂದ ಹಣ ಪಡೆದಿದ್ದರು.

ಇಲೆಕ್ಟ್ರಾನಿಕ್ಸ್ ಅಂಗಡಿಯ ಒಳಗೆ ಸಣ್ಣ ಕಚೇರಿ ತೆರೆದ ವ್ಯಕ್ತಿಗಳು 1 ಲಕ್ಷ ರೂ. ಹೂಡಿಕೆ ಮಾಡಿದರೆ ತಿಂಗಳಿಗೆ 14 ಸಾವಿರದಿಂದ 20 ಸಾವಿರ ರೂ. ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದರು. ಹೆಚ್ಚಿನ ಹಣ ಮಾಡುವ ಆಸೆಯಿಂದ ಪಟ್ಟಣದ ನೂರಾರು ಜನರು 1 ಲಕ್ಷದಿಂದ 6 ಲಕ್ಷ ರೂ. ವರೆಗೂ ಹೂಡಿಕೆ ಮಾಡಿದ್ದರು. ಕೆಲವರು ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಇಟ್ಟಿದ್ದ ಠೇವಣಿ ತೆಗೆದು ಇಲ್ಲಿ ಹೂಡಿಕೆ ಮಾಡಿದ್ದರು. ಇನ್ನು ಕೆಲವರು ಬಂಗಾರ ಅಡವಿಟ್ಟು ಹಣ ಹೂಡಿಕೆ ಮಾಡಿದ್ದರು. ಚೆಕ್ ಅಥವಾ ಆನ್​ಲೈನ್ ಮೂಲಕ ಹಣ ಹೂಡಿಕೆ ಮಾಡಬೇಡಿ. ಅದಕ್ಕೆ ಜಿಎಸ್​ಟಿ ಕಟ್ ಆಗುತ್ತದೆ ಎಂದು ನಂಬಿಸಿದ ವ್ಯಕ್ತಿಗಳು ನಗದಾಗಿ ಹಣ ಪಡೆದಿದ್ದರು. ಕಂಪನಿಯ ಹೆಸರಿನಲ್ಲಿ ರಶೀದಿ, ಕರಾರು ಪತ್ರ ಎಲ್ಲವನ್ನೂ ನೀಡಿ ನಂಬಿಕೆ ಬರುವಂತೆ ಮಾಡಿದ್ದರು.

ಹೂಡಿಕೆ ಮಾಡಿದವರಿಗೆ ಏಪ್ರಿಲ್ ತಿಂಗಳಲ್ಲಿ ಮಾತ್ರ ಲಾಭಾಂಶ ನೀಡಿದ್ದಾರೆ. ನಂತರ ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ದಿನ ದೂಡುತ್ತ ಕಳೆದಿದ್ದರು.

ಮುತ್ತಿಗೆ: ಹಣ ಪಡೆದ ವ್ಯಕ್ತಿಗಳು ಆಜಾದ್​ನಗರದ ತಮ್ಮ ಮನೆಯಲ್ಲೇ ಇರುವ ಮಾಹಿತಿ ಪಡೆದ 200 ಕ್ಕೂ ಹೆಚ್ಚು ಹೂಡಿಕೆದಾರರು ಭಾನುವಾರ ಮನೆಯ ಎದುರು ಸೇರಿದ್ದರು. ಆದರೆ, ಮನೆಯಿಂದ ಯಾರೂ ಹೊರ ಬರದ ಕಾರಣ ನೂಕು ನುಗ್ಗಲು ಸಂಭವಿಸಿತ್ತು. ಸಿಪಿಐ ಗಣೇಶ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಜನರ ಸಮಸ್ಯೆ ಆಲಿಸಿದರು. ದೂರು ನೀಡುವಂತೆ ಸೂಚನೆ ನೀಡಿದರು.