ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ

ಪಟ್ಟಣದ ಹೊಸ್ ನಿಲ್ದಾಣದ ಹತ್ತಿರ ಇರುವ ಎಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು ಕೆಲಸ ಕೈಗೂಡದೇ ಕಾಲ್ಕಿತ್ತ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಪಟ್ಟಣದ ಶಿರಸಿ- ಹಾವೇರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಎಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು, ಸಿಸಿ ಕ್ಯಾಮರಾಗೆ ಪಟ್ಟಿ ಹಚ್ಚಿದ್ದಾರೆ. ಪಕ್ಕದ ಅಂಗಡಿಯಲ್ಲಿದ್ದ ಗ್ಯಾಸ್ ವೆಲ್ಡಿಂಗ್ ಮಶಿನ್ ಕದ್ದು ಅದರಿಂದ ಎಟಿಎಂ ಯಂತ್ರವನ್ನು ಕೊರೆಯಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದಿದ್ದಾಗ ಸ್ಥಳದಲ್ಲೇ ಗ್ಯಾಸ್ ಯಂತ್ರ ಬಿಟ್ಟು ಕಾಲ್ಕಿತ್ತಿದ್ದಾರೆ.

ಭದ್ರತಾ ಸಿಬ್ಬಂದಿ ಎಟಿಎಂಗೆ ಬೀಗ ಹಾಕಿಕೊಂಡು ಮನೆಗೆ ಹೋದಾಗ ಕೃತ್ಯ ನಡೆದಿದೆ. ಎಟಿಎಂನಲ್ಲಿ 15 ಲಕ್ಷ ರೂ. ಹಣ ಸುರಕ್ಷಿತವಾಗಿ ಇರುವುದು ಖಾತ್ರಿಯಾಗಿದೆ.

ಪಿಎಸ್​ಐ ಆರ್. ನೀಲೇಶ, ಸಿಪಿಐ ಮಂಜಪ್ಪ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು, ಸಿಸಿ ಕ್ಯಾಮರಾ ತಜ್ಞರು ತೀವ್ರ ಶೋಧ ನಡೆಸಿದರು. ಜನನಿಬೀಡ ಪ್ರದೇಶವಾಗಿರುವ ಬಸ್ ನಿಲ್ದಾಣದ ಹತ್ತಿರದಲ್ಲೇ ಎಟಿಎಂ ಕಳ್ಳತನಕ್ಕೆ ಯತ್ನಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖದೀಮರ ಶೋಧಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಪಿಎಸ್​ಐ ನಿಲೇಶ ತಿಳಿಸಿದ್ದಾರೆ.