ಶ್ರೀರಂಗಪಟ್ಟಣ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನದ ವೇಳೆ ಉತ್ತರಪತ್ರಿಕೆ ಅದಲು-ಬದಲಾಗಿ ಅನುತ್ತೀರ್ಣಗೊಂಡಿದ್ದ ತಾಲೂಕಿನ ವಿದ್ಯಾರ್ಥಿನಿಯನ್ನು ಕೊನೆಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶೇ.76ರಷ್ಟು ಅಂಕ ನೀಡಿ ಉತ್ತೀರ್ಣಗೊಳಿಸಿದೆ. ಜತೆಗೆ ಮುಂದಿನ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟು ಸಮಾಧಾನಪಡಿಸಿದೆ.
ತಾಲೂಕಿನ ತರಿಪುರ ಗ್ರಾಮದ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಜಿ. ಅಶ್ವಿನಿ 2019-20 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಮೌಲ್ಯಮಾಪನ ವೇಳೆ ಈಕೆ ಬರೆದಿದ್ದ 3 ವಿಷಯಗಳ ಉತ್ತರ ಪತ್ರಿಕೆಗಳಲ್ಲಿ ಬೇರೆಯವರ ಉತ್ತರಪತ್ರಿಕೆಗಳು ಸೇರ್ಪಡೆಗೊಂಡಿದ್ದ ಪರಿಣಾಮ ಕಡಿಮೆ ಅಂಕ ಬಂದು ಫೇಲ್ ಆಗಿದ್ದಳು.
ಬಳಿಕ ವಿದ್ಯಾರ್ಥಿನಿಯ ಪಾಲಕರು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿ ಮೌಲ್ಯಮಾಪನವಾಗಿದ್ದ ಉತ್ತರ ಪತ್ರಿಕೆಯ ನಕಲು ಪಡೆದು ಪರಿಶೀಲಿಸಿದ ವೇಳೆ ಯಡವಟ್ಟು ಆಗಿರುವುದು ತಿಳಿದುಬಂದಿತ್ತು. ತಮ್ಮ ಮಗಳಿಗಾದ ಅನ್ಯಾಯದ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ರುಕ್ಸಾನ ನಾಜನೀನ್ ಹಾಗೂ ಪ್ರಾಂಶುಪಾಲ ನಂಜೇಗೌಡ ಅವರ ಸಹಕಾರ ಪಡೆದು ಬೆಂಗಳೂರಿನ ಪರೀಕ್ಷಾ ಮಂಡಳಿಗೆ ಸಾಕಷ್ಟು ಬಾರಿ ಪಾಲಕರು ಅಲೆದಾಡಿದರು. ಮೌಲ್ಯಮಾಪನ ವೇಳೆ ಆಗಿರುವ ಲೋಪದೋಷದ ಬಗ್ಗೆ ಪರಿಶೀಲನೆ ನಡೆಸಿ ಮಗಳಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಶಿಕ್ಷಕಿ ದೇಣಿಗೆ ಕೇಳಿದರೆ, ಅವರಿಂದಲೇ ₹48 ಲಕ್ಷ ದೋಚಿದ ಭೂಪ- ನಿಮಗೂ ಇದು ಪಾಠ!
ಕೊನೆಗೂ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಕೆಂಪರಾಜು ಅವರ ಸೂಚನೆಯಂತೆ ವಿದ್ಯಾರ್ಥಿನಿಯ ಮುಂದಿನ ಕಾಲೇಜು ಶಿಕ್ಷಣಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಸೆ. 3ರಂದು ಎಸ್ಸೆಸ್ಸೆಲ್ಸಿಯಲ್ಲಿ ಶೆ. 76 ಫಲಿತಾಂಶ ನೀಡಿ ಉತ್ತೀರ್ಣಗೊಳಿಸಿದ್ದು, ಈ ಬಗ್ಗೆ ಇಲಾಖೆ ತನಿಖೆ ಮುಂದುವರಿಸಿದೆ ಎಂದು ತಿಳಿದು ಬಂದಿದೆ.
ಆದರೆ ಇದಕ್ಕೆ ತೃಪ್ತರಾಗದ ಪಾಲಕರು, ಮಗಳಿಗೆ ಸೂಕ್ತ ನ್ಯಾಯ ಮತ್ತು ಉತ್ತಮ ಅಂಕಗಳನ್ನು ದೊರಕಿಸಬೇಕೆಂದು ಮನವಿ ಮಾಡಿದ್ದಾರೆ. ಇದೀಗ ವಿದ್ಯಾರ್ಥಿನಿ ಎಸ್.ಜಿ.ಅಶ್ವಿನಿ ಮಂಗಳೂರಿನ ಶಾರದಾ ಪೀಠ ವಿದ್ಯಾಸಂಸ್ಥೆಯ ಪಿಯು ಕಾಲೇಜಿಗೆ ಸೇರಿದ್ದು, ಪಿಸಿಎಂಬಿ ವಿಭಾಗ ಆಯ್ಕೆ ಮಾಡಿಕೊಂಡಿದ್ದಾಳೆ.
ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಮೈಲಿಗಲ್ಲು: ಆತ್ಮನಿರ್ಭರ ಭಾರತದತ್ತ ದಿಟ್ಟ ಹೆಜ್ಜೆ