ಅಂಕ ಅಂಕ ಎಂದೇಕೆ ಅಳುವಿರಿ!?: ಕಡಿಮೆ ಅಂಕ ಪಡೆದರೂ ಬದುಕಿನಲ್ಲಿ ಯಶಸ್ಸು ಪಡೆವರಿದ್ದಾರೆ

ಪರೀಕ್ಷೆಯಲ್ಲಿ ಗಳಿಸುವ ಅಂಕ ಮುಂದಿನ ತರಗತಿಗೆ ಹೋಗಲು ಮಾನದಂಡವೇ ಹೊರತು ಅದು ಭವಿಷ್ಯವನ್ನು ನಿರ್ಧರಿಸಲಾರದು. ದೊಡ್ಡ ಮಟ್ಟದ ಯಶಸ್ಸು ಗಳಿಸಿದವರ ಪೈಕಿ ಹಲವರು ಹೆಚ್ಚಿಗೆ ಅಂಕ ಪಡೆದೇ ಆ ಮಟ್ಟಕ್ಕೆ ಏರಿದವರಲ್ಲ. ಆದರೆ ಅವರ ಸಾಧನೆಯಿಂದ ಅನುಕರಣೀಯರಾಗಿದ್ದಾರೆ. ಕಡಿಮೆ ಅಂಕ ಪಡೆದರೂ ಬದುಕಿನಲ್ಲಿ ನೀವು ಯಶಸ್ವಿಯಾಗಿದ್ದರೆ ಅದರ ಬಗ್ಗೆ ಬರೆದು ಕಳಿಸಿ ಎಂದು ವಿಜಯವಾಣಿ ನೀಡಿದ ಕರೆಗೆ ನೂರಾರು ಮಂದಿ ಸ್ಪಂದಿಸಿದ್ದಾರೆ. ಆ ಪೈಕಿ ಆಯ್ದ ಕೆಲವರ ಯಶೋಗಾಥೆಗಳು ಇಲ್ಲಿವೆ.

ಅಮ್ಮಾ… ನಾ ಫೇಲಾದೆ

1992ರ ಮೇ ತಿಂಗಳು. ದ್ವಿತೀಯ ಪಿಯುಸಿ ಫಲಿತಾಂಶ ಬಂದಿತ್ತು. ಆದರೆ ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ! ಊರಿನ ಬಸ್ ಇಳಿಯುತ್ತಿದ್ದಂತೆ ಕಟ್ಟೆ ಮೇಲೆ ಕುಳಿತ ಕಾಕರಾಜನ ಸಂತತಿಯ ಕೆಲವರು ‘ರಿಸಲ್ಟ್ ಏನಾಯ್ತು?’ ಎಂದರು. ‘ಫೇಲ್’ ಅನ್ನುತ್ತಿದ್ದಂತೆಯೇ ಅವರ ಭಾಷಣ ಶುರುವಾಯ್ತು. ಫಲಿತಾಂಶ ಕೇಳಿ ತಂದೆ ಕೆಂಡಾಮಂಡಲವಾದರು. ಆದರೂ ಮರುಪರೀಕ್ಷೆ ಬರೆಸುವ ಭರವಸೆ ನೀಡಿದರು. ಕೂಲಿ ಕೆಲಸಕ್ಕೆ ಹೋದ ಅಮ್ಮ ಸಂಜೆ ಮನೆಗೆ ಬರುವಾಗ ಇತರರು ಆಡಿದ ಕೊಂಕು ಮಾತುಗಳನ್ನು ಕೇಳಿಸಿಕೊಂಡಿದ್ದಳು. ಆದರೂ ನನ್ನ ಬಾಯಿಯಿಂದ ‘ಪಾಸ್’ ಎಂದು ಕೇಳುವ ಹಂಬಲ ಆಕೆಗೆ. ‘ಫೇಲ್’ ಎಂದು ಹೇಳಿದಾಗ ಕಪಾಳಕ್ಕೆ ಎರಡು ಏಟು ಬಿದ್ದೇ ಬೀಳುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ ಅವಳು, ‘ಜೀವಕ್ಕೇನೂ ತೊಂದರೆ ಮಾಡಿಕೋಬೇಡಪ್ಪ. ಆದದ್ದು ಆಗಿ ಹೋಯ್ತು. ಪರೀಕ್ಷೆ ಕಟ್ಟು. ಚೆನ್ನಾಗಿ ಓದು’ ಎಂದಳು. ಆ ನುಡಿಗಳು ನನ್ನ ಭವಿಷ್ಯವನ್ನೇ ಬದಲಿಸಿದವು. ಯಾರ್ಯಾರದೋ ಮಾತನ್ನು ಕೇಳಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಸರಿಯಾಗಿ ಅರ್ಥವಾಗಲಿಲ್ಲ. ಹಾಗಾಗಿ ಫೇಲ್! ನಂತರ ವಿಜ್ಞಾನಕ್ಕೆ ತಿಲಾಂಜಲಿ ಹೇಳಿ ಪ್ರಥಮ ವರ್ಷದ ಸರ್ಕಾರಿ ಕಲಾ ವಿಭಾಗಕ್ಕೆ ಪ್ರವೇಶ ಪಡೆದುಕೊಂಡೆ. ರಾಜ್ಯಶಾಸ್ತ್ರ ಉಪನ್ಯಾಸಕರನ್ನು ಹೊರತುಪಡಿಸಿದರೆ ಬೇರೆ ಉಪನ್ಯಾಸಕರು ಇರಲಿಲ್ಲ. ಈಗಿನಂತೆ ಅತಿಥಿ ಉಪನ್ಯಾಸಕರ ಸೇವೆಯೂ ಇರಲಿಲ್ಲ. ಕಷ್ಟಪಟ್ಟು ಓದಿದೆ ಎನ್ನುವುದಕ್ಕಿಂತ ಇಷ್ಟಪಟ್ಟು ಓದಿದೆ. ಇದರ ಫಲವಾಗಿ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಫಸ್ಟ್ ರ್ಯಾಂಕ್ ಬಂದೆ! ಟಿಸಿಎಚ್ ಮಾಡಿ ಶಿಕ್ಷಕನಾದೆ. ಬಿ.ಎ. ಪೂರೈಸಿದೆ. ಎರಡು ಸ್ನಾತಕೋತ್ತರ ಪದವಿ ಕೂಡ ಪಡೆದೆ.

| ಆರ್.ಬಿ. ಗುರುಬಸವರಾಜ ಹೊಳಗುಂದಿ, ಬಳ್ಳಾರಿ

5ನೇ ಕ್ಲಾಸ್​ನಲ್ಲೇ ಫೇಲ್ ಆಗಿದ್ದೆ!

ನಾನು ಪ್ರೖೆಮರಿಯಿಂದ ಡಿಗ್ರಿವರೆಗೂ ಓದಿನ ಬಗ್ಗೆ ತಲೆ ಕೆಡಿಸಿಕೊಂಡವನೇ ಅಲ್ಲ. ಇಂಗ್ಲಿಷಂತೂ ತಲೆಗೆ ಹತ್ತುತ್ತಾ ಇರಲಿಲ್ಲ. 5ನೇ ಕ್ಲಾಸಿನಲ್ಲಿ ಫೇಲ್ ಆದೆ. ಹಾಗೂ ಹೀಗೂ ಡಿಗ್ರಿ ಮಾಡಿದೆ. ನನ್ನ ಇಡೀ ಶೈಕ್ಷಣಿಕ ಜೀವನದಲ್ಲಿ ಅತಿ ಹೆಚ್ಚಿನ ಪರ್ಸಂಟೇಜ್ ಎಂದರೆ 51. ಕಡಿಮೆ ಅಂಕ ಬಂದಾಗಲೆಲ್ಲಾ ಮನೆಯಲ್ಲಿ ಚಿಕ್ಕಪುಟ್ಟ ಗಲಾಟೆ ಆಗ್ತಾ ಇತ್ತು. ಆದರೆ ಪ್ರೖೆಮರಿಯಿಂದಲೇ ನನ್ನ ಒಲವು ನಾಟಕ, ನಟನೆ, ಯಕ್ಷಗಾನದತ್ತ ಇತ್ತು. ಅದಕ್ಕಾಗಿ ಅದರಲ್ಲಿಯೇ ಮುಂದುವರೆಯಲು ಬಯಸಿದ್ದೆ. ಇನ್ನೊಂದೆಡೆ ಬಿಸಿನೆಸ್ ಮಾಡುವ ಒಲವೂ ಇತ್ತು. ಪ್ರೖೆವೇಟ್ ಲಿಮಿಟೆಡ್ ಕಂಪನಿ ಶುರು ಮಾಡಿದೆ. ಬಿಸಿನೆಸ್ ಮಾಡುವ ಸಲುವಾಗಿಯೇ ಕಾಮರ್ಸ್ ತೆಗೆದುಕೊಂಡಿದ್ದೆ. ಅಲ್ಲಿ ಅಂಕವೇನೂ ಹೆಚ್ಚಿಗೆ ಬರಲಿಲ್ಲ. ಬಂದ ಅಂಕವೂ ನನಗೆ ಬಿಸಿನೆಸ್​ಗೆ ಉಪಯೋಗ ಆಗಲಿಲ್ಲ. ಏಕೆಂದರೆ ಅಂಕ ಎನ್ನುವುದು ಮುಂದಿನ ತರಗತಿಗೆ ಹೋಗಲು ಒಂದು ದಾರಿ ಅಷ್ಟೇ. ಹೊರತಾಗಿ ಯಶಸ್ವಿ ಬದುಕಿಗೆ ಈ

ಮಾರ್ಕ್ಸ್​ಗಳೇ ಸರ್ವಸ್ವವೇನಲ್ಲ. ಜೀವನದಲ್ಲಿ ನಮ್ಮ ಒಡನಾಟ ಯಾರ ಜತೆ ಹೆಚ್ಚಿಗೆ ಇರುತ್ತದೆ, ಇರುವ ಸಮಯವನ್ನು ಸದುಪಯೋಗಪಡಿಸಿಕೊಂಡು ನಮ್ಮ ಗುರಿಯತ್ತ ಹೇಗೆ ತಲುಪುತ್ತೇವೆ ಇತ್ಯಾದಿಗಳಿಂದ ಜೀವನದ ಯಶಸ್ಸು ಸಾಧ್ಯವೇ ಹೊರತು ಅಂಕಕ್ಕೂ, ಬದುಕಿಗೂ ತಾಳೆ ಹಾಕುವುದು ಸರಿಯಲ್ಲ. ಬಿಸಿನೆಸ್, ನಟನೆ, ನಿರ್ದೇಶನ ಕ್ಷೇತ್ರದಲ್ಲಿ ಮುಂದೆ ಹೋದ ನಾನು ಇವತ್ತು ಇಷ್ಟರಮಟ್ಟಿಗೆ ಬೆಳೆದಿದ್ದೇನೆ.

| ರಿಷಬ್ ಶೆಟ್ಟಿ ನಿರ್ದೇಶಕ, ನಟ

ರಾಷ್ಟ್ರಮಟ್ಟದಲ್ಲಿ ಮಿಂಚಿದೆ…

ನಾನು ಹುಟ್ಟಿದ್ದು ಏಪ್ರಿಲ್ 1ರಂದು. ಅಂದರೆ ಏಪ್ರಿಲ್ ಫೂಲ್ ದಿನ. ಅದ್ಯಾವ ಗಳಿಗೆಯಲ್ಲಿ ಹುಟ್ಟಿದ್ದೆನೋ ಗೊತ್ತಿಲ್ಲ. ಎಸ್​ಎಸ್​ಎಲ್​ಸಿ, ಪಿಯುಸಿ ಎಲ್ಲಾ ಕಡೆಯೂ ‘ಫೂಲ್’ ಆಗುವ ಅಂಕಗಳೇ ಬಂದವು. ಬೆಂಗಳೂರಿನ ತಿಲಕನಗರದಿಂದ ನಾವು 24 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದೆವು, ಅದರಲ್ಲಿ ನಾನೊಬ್ಬನೇ ಕೇವಲ 210 (ಶೇ. 42) ಅಂಕ ಪಡೆದಿದ್ದೆ. ‘ಅಬ್ಬಾ ಅಂತೂ ಪಾಸಾದೆನಲ್ಲ’ ಎಂಬ ಸಮಾಧಾನ ಇದ್ದದ್ದು ಬಿಟ್ಟರೆ ಅಪ್ಪ-ಅಮ್ಮನಿಗೆ ಮುಖ ತೋರಿಸಲೂ ಮುಜುಗರ ಆಗಿತ್ತು. ಇಷ್ಟು ಕಮ್ಮಿ ಅಂಕ ನೋಡಿದ ನನಗೆ ಎಲ್ಲರಂತೆಯೇ ಭವಿಷ್ಯದ ಚಿಂತೆ ಕಾಡತೊಡಗಿತು. ಇಷ್ಟು ಅಂಕಕ್ಕೆ ಅದೇನು ಸಾಧಿಸಲು ಸಾಧ್ಯ ಎಂಬ ಗೊಂದಲ ಕೂಡ ಶುರುವಾಯಿತು.

ನನ್ನ ಅಂಕಕ್ಕೆ ಯಾವ ಕಾಲೇಜಿನಲ್ಲಿಯೂ ಪ್ರವೇಶ ಸಿಗುವುದಿಲ್ಲ ಎಂದು ಗೊತ್ತಿತ್ತು. ಆದರೂ ಪದವಿಯಂತೂ ಮಾಡಲೇಬೇಕಲ್ಲ. ಹಾಗೂ ಹೀಗೂ ಎಲ್ಲೆಲ್ಲೋ ಅಡ್ಡಾಡಿದ ಮೇಲೆ ಬೆಂಗಳೂರಿನ ಜಯನಗರದ ಸಂಜೆ ಕಾಲೇಜೊಂದರಲ್ಲಿ ಸೀಟು ಸಿಕ್ಕಿತು. ಕಷ್ಟಪಟ್ಟು ಬಿ.ಎ. ಮುಗಿಸಿದೆ. ಆದರೆ ಅಲ್ಲೂ ಅಂಕ ಮಾತ್ರ ಎಸ್​ಎಸ್​ಎಲ್​ಸಿ, ಪಿಯುಸಿಗಿಂತ ಮೇಲೆ ಬರಲೇ ಇಲ್ಲ. ಅದಕ್ಕಾಗಿ ಹೆಚ್ಚು ಅಂಕ ಗಳಿಸಿದವರಂತೆ ದೊಡ್ಡ ದೊಡ್ಡ ಕನಸು ಕಾಣಲು ಸಾಧ್ಯವಾಗಲಿಲ್ಲ. ಹಾಗೆಂದು ಸುಮ್ಮನಿರಲಾದೀತೆ?

ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸೇರಿ ಸಿನಿಮಾಟೋಗ್ರಫಿ ಕೋರ್ಸ್ ಮಾಡಿದೆ. ಚಲನಚಿತ್ರರಂಗದಲ್ಲಿ ಮಿಂಚತೊಡಗಿದೆ. ಜತೆಗೆ, ಫೋಟೋಜರ್ನಲಿಸಂ ಕೂಡ ನನ್ನ ಕೈ ಹಿಡಿಯಿತು. ಅಲ್ಲಿಂದ ಬದುಕು ತಿರುವು ಪಡೆಯಿತು. ಪತ್ರಿಕೋದ್ಯಮದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಒಳ್ಳೆಯ ಛಾಯಾ ಚಿತ್ರಗಳನ್ನು ತೆಗೆಯಲು ಆರಂಭಿಸಿದೆ. 1998ರಲ್ಲಿ ನನ್ನ ಛಾಯಾಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಬಂತು. ಜತೆಗೆ, ಹಲವಾರು ಪ್ರಶಸ್ತಿಗಳೂ ಬಂದವು. ಇದಕ್ಕೆಲ್ಲಾ ಕಾರಣ, ಕಡಿಮೆ ಅಂಕವೇ ಎಂದರೆ ಅತಿಶಯೋಕ್ತಿ ಅಲ್ಲ.

(ಇನ್ನಷ್ಟು ಯಶಸ್ಸಿನ ಕಥೆಗಳು ಮುಂದಿನ ವಾರ)

One Reply to “ಅಂಕ ಅಂಕ ಎಂದೇಕೆ ಅಳುವಿರಿ!?: ಕಡಿಮೆ ಅಂಕ ಪಡೆದರೂ ಬದುಕಿನಲ್ಲಿ ಯಶಸ್ಸು ಪಡೆವರಿದ್ದಾರೆ”

  1. “nanna bagge helade irade vasi, Ekendre, 10 ne taragathiyalli, nanna pakkadallidda ramesha torisaddiddare nanu 2 subject jothege inneradu faalaguttide, Adare, nanna Aagina sahapatigalige nanu B.Sc.(B.Ed.,) Eng, Kannada Shorthand & Eng, Kan Typing madi, Courtalli Stenographer Agirodu nodi, hengo stenographer Ade, nanu M.Sc.(B.Ed) madi private collagalli dinagooli, lecture Agiddini anda…………………………

Comments are closed.