ಮರೆಯಾಗುತ್ತಿರುವ ಕೊಡವ ಭಾಷೆ, ಸಂಸ್ಕೃತಿ

ನಾಪೆೆಕ್ಲು: ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯು ಕೊಡವ ಭಾಷೆ, ಪದ್ಧತಿ ಹಾಗೂ ಸಂಸ್ಕೃತಿಯನ್ನು ಬೆಳೆಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ಅಕಾಡಮಿಯ ಅಧ್ಯಕ್ಷ ಪೆಮ್ಮಂಡ ಪೆಮ್ಮಯ್ಯ ಹೇಳಿದರು.
ಬೇತು ಗ್ರಾಮದ ಶಾಲಾ ಮೈದಾನದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮಡಿಕೇರಿ ಮತ್ತು ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ‘ಕೊಡವ ಭಾಷಿಕ ನಮ್ಮೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಂದ್ ಮಾನಿಗಳಿಗೆ ಸೇರಲು ಜನರು ಕಡಿಮೆಯಾಗುತ್ತಿದ್ದಾರೆ. ಇದರಿಂದ ಮಂದ್‌ಗಳು ಮುಚ್ಚುವ ಹಂತ ತಲುಪಿದ್ದು , ನಾಡಿನ ಯುವಕರು ಉದ್ಯೋಗಕ್ಕಾಗಿ ಊರುಗಳನ್ನು ಬಿಡುತ್ತಿರುವುದರಿಂದ ಕೊಡವ ಭಾಷೆ, ಸಂಸ್ಕೃತಿ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಚ್ಚಿ ಹೋಗಿದ್ದ ಮಂದ್‌ಗಳನ್ನು ತೆರೆಯಲು ಕಳೆದ ಮೂರು ನಾಲ್ಕು ವರ್ಷಗಳಿಂದ ಅಕಾಡಮಿ ಅವಿರತವಾಗಿ ಪ್ರಯತ್ನಿಸುತ್ತಾ ಬಂದಿದೆ. ಮುಂದಿನ ಪೀಳಿಗೆ ಹೆಚ್ಚಿನ ಶಿಕ್ಷಣ ಪಡೆಯಲು ನಮ್ಮ ಪೂರ್ವಿಕರು ತಮ್ಮ ಜಾಗವನ್ನು ದಾನ ಮಾಡಿದ್ದಾರೆ. ಆದ್ದರಿಂದ ಇಂದು ನಾವು ವಿದ್ಯಾವಂತರಾಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಕಾಡಮಿ ಸದಸ್ಯ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ಮಾತನಾಡಿ, ಕೊಡವ ಸಾಹಿತ್ಯ ಅಕಾಡಮಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೊಡವ ಭಾಷಿಕರ ವಿವಿಧ ಸಂಘ-ಸಂಸ್ಥೆಗಳಿಗೆ ಕೊಡವ ಅಕಾಡಮಿಯಿಂದ ಬಾಳೋಪಾಟ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದುಡಿ ಮತ್ತು ಕೋಲು, ಗೆಜ್ಜೆಯನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸೆಕ್ರೇರ್ಡ್ ಹಾರ್ಟ್ ಶಾಲೆಯ ವಿದ್ಯಾರ್ಥಿಗಳಿಂದ ಬೊಳ್‌ಕಾಟ್, ಉಮ್ಮತ್ತಾಟ್, ಅಂಕೂರ್ ಶಾಲಾ ವಿದ್ಯಾರ್ಥಿನಿಯರಿಂದ ಊರುಟ್ಟಿಕೋಟ್ ಆಟ್, ಎಕ್ಸ್‌ಲ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಬಿಂದಿಗೆ ನೃತ್ಯ ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ಒಡ್ಡೋಲಗದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬಾ ತಿಮ್ಮಯ್ಯ ನೇತೃತ್ವ ಕಾರ್ಯಕ್ರಮ ನಡೆಯಿತು. ಗ್ರಾಮದ ಹಿರಿಯ ಬೊಳ್ಳೆಪಂಡ ನಂಜುಂಡ ಅಧ್ಯಕ್ಷತೆ ವಹಿಸಿದ್ದರು.ಕೊಂಡೀರ ಪೂಣಚ್ಚ, ಚೋಕಿರ ಉತ್ತಯ್ಯ, ಅಕಾಡಮಿ ಸದಸ್ಯರಾದ ಬೊಳ್ಳಜ್ಜೀರ ಅಯ್ಯಪ್ಪ, ಅಪಟ್ಟೀರ ಮೊಣ್ಣಪ್ಪ, ಹಂಚೇಟ್ಟಿರ ಫ್ಯಾನ್ಸಿ ಮುತ್ತಣ್ಣ, ಬೀಕಚಂಡ ಬೆಳ್ಯಪ್ಪ, ಕುಡೀಯರ ಶಾರದಾ, ಕಾರ್ಯಕ್ರಮ ಸಂಚಾಲಕ ಎಚ್.ಎ.ಗಣಪತಿ ಇದ್ದರು.