ರಫೇಲ್​ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಫೇಲ್​ ಒಪ್ಪಂದದಲ್ಲಿ ತನಿಖೆಯ ಅಗತ್ಯವಿಲ್ಲ ಎಂದು ನಿನ್ನೆ (ಡಿ.14ರಂದು) ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದು ರಾಜಕೀಯವಾಗಿ ಪರ, ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇಂದು ಕೇಂದ್ರ ಸರ್ಕಾರ, ತೀರ್ಪಿನಲ್ಲಿ ಸಣ್ಣ ದೋಷವಿದ್ದು ಅದನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂಗೆ ಮನವಿ ಸಲ್ಲಿಸಿದೆ.

ನ್ಯಾಯಾಲಯ ತೀರ್ಪನ್ನು ಓದುವಾಗ ಕಂಟ್ರೋಲರ್​ ಮತ್ತು ಅಡಿಟರ್​ ಜನರಲ್​ ವರದಿ (ಸಿಎಜಿ) ಹಾಗೂ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (PAC) ಬಗ್ಗೆ ಉಲ್ಲೇಖ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿಯನ್ನು ಸುಪ್ರೀಂ ತಪ್ಪಾಗಿ ಅರ್ಥ ಮಾಡಿಕೊಂಡು ತೀರ್ಪು ಓದಿದೆ. ರಫೇಲ್​ ಯುದ್ಧ ವಿಮಾನಗಳ ಬೆಲೆಯನ್ನು ಪರಿಶೀಲಿಸಿ ಸಿಎಜಿ ವರದಿ ನೀಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದೆ. ಆದರೆ ಅದರಲ್ಲಿ ಮಾಡಿದ ಪ್ರಸ್ತಾವನೆಯನ್ನು ನ್ಯಾಯಾಲಯ ತಪ್ಪಾಗಿ ಅರ್ಥೈಸಿಕೊಂಡಿದೆ. ಇದರಲ್ಲಿ ಮುದ್ರಣ ದೋಷ ಆಗಿರುವ ಸಾಧ್ಯತೆಯೂ ಇದ್ದು ತಿದ್ದುಪಡಿ ಮಾಡಬೇಕು. ವಾಸ್ತವವನ್ನು ತಿಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ.

ಅಲ್ಲದೆ ಯುದ್ಧವಿಮಾನಗಳ ಬೆಲೆಯೊಂದಿಗೆ ಖರೀದಿ ಪ್ರಕ್ರಿಯ ಸವಿವರವನ್ನು ಸೀಲ್​ ಮಾಡಿದ ಕವರ್​ನಲ್ಲಿ ಇಟ್ಟಿದ್ದ ಪತ್ರದಲ್ಲಿ ಸರಿಯಾಗಿ ದಾಖಲಿಸಲಾಗಿದೆ. ಈಗ ಸುಪ್ರೀಂಕೋರ್ಟ್​ ಸ್ಪಷ್ಟೀಕರಣ ನೀಡಬೇಕು ಎಂದು ಕೇಂದ್ರ ಕೋರಿದೆ.

ರಫೇಲ್​ ಯುದ್ಧ ವಿಮಾನಗಳ ಬಗ್ಗೆ ವಿವರವನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಬಹಿರಂಗ ಪಡಿಸಿಲ್ಲ. ಅದನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ನೀಡಲಾಗಿದ್ದು, ಅದನ್ನು ಸಮಿತಿ ಪರಿಶೀಲಿಸುತ್ತಿದೆ ಎಂದು ಕೇಂದ್ರ ಸರ್ಕಾರ  ತಿಳಿಸಿದೆ. ಇದರ ಜತೆಗೆ “ವರದಿ ಸಾರ್ವಜನಿಕವಾಗಿಯೂ ಲಭ್ಯವಿದೆ ಎಂಬುದು ಕೋರ್ಟ್​ಗೆ ಸರ್ಕಾರ ನೀಡಿದ ದಾಖಲೆಗಳಿಂದ ತಿಳಿಯುತ್ತದೆ,” ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿತ್ತು. ಈ ಸಾಲನ್ನು ಸರಿಪಡಿಸುವಂತೆ ಕೋರ್ಟ್​ಗೆ ಸರ್ಕಾರ ಕೋರಿದೆ.

ಸಿಎಜಿ ವರದಿಯನ್ನು ಕೇಂದ್ರ ಸರ್ಕಾರ ಸಂಸತ್ತು, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಎದುರು ಹಾಜರುಪಡಿಸಿದ್ದು, ಸಮಿತಿ ಅದನ್ನು ಪರಿಶೀಲಿಸಿದೆ. ಅಲ್ಲದೆ, ಸಾರ್ವಜನಿಕವಾಗಿಯೂ ಲಭ್ಯವಿದೆ ಎಂದು ಸುಪ್ರೀಂ ಕೋರ್ಟ್​ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಇದೇ ಅಂಶವನ್ನು ಕೈಗೆತ್ತಿಕೊಂಡ ಪ್ರತಿಪಕ್ಷಗಳು ಮತ್ತು ಸ್ವತಃ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಸುಳ್ಳು ಹೇಳಿದೆ. ಸಂಸತ್ತಿನಲ್ಲಿ ಸಿಎಜಿ ವರದಿಯನ್ನು ಬಹಿರಂಗ ಪಡಿಸಲಾಗಿದೆ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಳ್ಳು ಹೇಳಿದೆ. ಅಲ್ಲದೆ, ಈ ವರದಿ ಈಗಾಗಲೇ ಸಾರ್ವಜನಿಕವಾಗಿಯೂ ಲಭ್ಯವಿದೆ ಎಂದಿದೆ. ಆದರೆ, ವರದಿ ಎಲ್ಲಿದೆ? ಯಾರಾದರೂ ನೋಡಿದ್ದೀರಾ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಬೆಳಗ್ಗೆ ಆರೋಪ ಮಾಡಿದ್ದರು.