ಕಾರ್ಖಾನೆಯಲ್ಲಿ ಹೊತ್ತಿ ಉರಿದ ಬೆಂಕಿ: ನಾಲ್ವರು ಸಾವು, ನಾಲ್ವರಿಗೆ ಗಾಯ

ಮುಜಾಫರ್​ಪುರ: ಜಿಲ್ಲೆಯಲ್ಲಿನ ಕಾರ್ಖಾನೆಯೊಂದಕ್ಕೆ ಬೆಂಕಿ ತಗುಲಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಚಾಕ್​ನೂರಾನ್​ ಹಳ್ಳಿಯ ಸಮೀಪವಿರುವ ತಿಂಡಿ ಉತ್ಪಾದನಾ ಕಾರ್ಖಾನೆಯೊಂದಕ್ಕೆ ಬೆಂಕಿ ಬಿದ್ದು ಅವಘಡ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಖಾನೆಗೆ ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ 15 ಜನ ಅಲ್ಲಿಂದ ಹೊರಬಂದಿದ್ದಾರೆ. ಏಳು ಮಂದಿ ಕಾಣೆಯಾಗಿದ್ದರು. ಅವರಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಆದರೆ, ಅವರ ಗುರುತು ತಿಳಿಯದಷ್ಟು ಸುಟ್ಟುಹೋಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅವಘಡ ಸಂಭವಿಸಿದ ಸಮಯದಿಂದ ಕಾರ್ಖಾನೆಯ ಮಾಲೀಕ ಮತ್ತು ಮ್ಯಾನೇಜರ್​ ಕಾಣೆಯಾಗಿದ್ದಾರೆ. ಬೆಂಕಿಗೆ ಕಾರಣವೇನು ಎಂಬ ಬಗ್ಗೆ ಶೀಘ್ರದಲ್ಲೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.