ನವದೆಹಲಿ: ಮಹಾಮಾರಿ ಕರೊನಾ ವೈರಸ್ ಹರಡುತ್ತಿರುವ ನಡುವೆಯೇ ನಕಲಿ ಸುದ್ದಿಗಳ ಭರಾಟೆಯು ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ. ಮಹಾರಾಷ್ಟ್ರದ 28 ವರ್ಷದ ವೈದ್ಯೆ ಡಾ. ಮನೀಶಾ ಪಾಟೀಲ್ ಅವರು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಸೋಂಕು ತಗುಲಿ ಪ್ರಾಣಬಿಟ್ಟಿದ್ದಾರೆ ಎನ್ನುವ ಎರಡು ಸೆಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯ ಕೊರಳಲ್ಲಿ ಸ್ಟೆತೊಸ್ಕೋಪ್ ಹಾಕಿರುವ ಒಂದು ಫೋಟೋ ಹಾಗೂ ವ್ಯಕ್ತಿಯೊಬ್ಬರೊಂದಿಗೆ ವೈದ್ಯಕೀಯ ಧಿರಿಸಿನಲ್ಲಿರುವ ಮಹಿಳೆಯ ಮತ್ತೊಂದು ಫೋಟೋ ವೈರಲ್ ಆಗಿದೆ.

ವೈರಲ್ ಆಗಿರುವ ಫೋಟೋ ಹಾಗೂ ಅದರ ಮಾಹಿತಿಯ ಅಸಲಿಯತ್ತು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ಫೋಟೋ ಮತ್ತು ಮಾಹಿತಿಗೂ ಒಂದಕ್ಕೊಂದು ಸಂಬಂಧವಿಲ್ಲ. ಇದೊಂದು ನಕಲಿ ಸುದ್ದಿ ಎಂದು ತಿಳಿದುಬಂದಿದೆ.
ಪೂನಮ್ ವರ್ಮಾ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಫೋಟೋ ಪೋಸ್ಟ್ ಮಾಡಲಾಗಿದ್ದು, ಈವರೆಗೂ 29 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ ಹಾಗೂ 1 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಆ ಫೋಟೋವನ್ನು ನೀವಿಲ್ಲಿ ಕಾಣಬಹುದಾಗಿದೆ.
ಫೋಟೋ ಪೋಸ್ಟ್ ಮಾಡಿ ಹಿಂದಿಯಲ್ಲಿ ಬರೆದಿದ್ದು, ಅದರ ಸಾರ ಹೀಗಿದೆ. ತುಂಬಾ ದುಃಖದಿಂದ ನಾನಿದನ್ನು ತಿಳಿಸುತ್ತಿದ್ದೇನೆ. ಮಹಾರಾಷ್ಟ್ರದ 28 ವರ್ಷದ ವೈದ್ಯೆ ಮನೀಶಾ ಪಾಟೀಲ್ ಅವರು ಕರೊನಾದಿಂದ ಸಾವಿಗೀಡಾಗಿದ್ದಾರೆ. ಮನೀಶಾ ಅವರು ಅನೇಕ ಕರೊನಾ ರೋಗಿಗಳನ್ನು ಗುಣಪಡಿಸಿದ್ದಾರೆ. ಆದರೆ, ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಇಂಜಿನ್ನಲ್ಲಿ ಹಾಗೂ ಕೀವರ್ಡ್ಸ್ ಸಹಾಯದಿಂದ ಹುಡುಕಿದಾಗ ಪೋಟೋದಲ್ಲಿರುವ ಮಹಿಳೆ ಮನೀಶಾ ಪಾಟೀಲ್ ಅಲ್ಲ, ಬದಲಾಗಿ ಡಾ. ರಿಚಾ ರಜಪೂತ್ ಎಂದು ತಿಳಿದುಬಂದಿದೆ. ಇದನ್ನು ತಿಳಿದ ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ ತಂಡ ನೇರವಾಗಿ ರಿಚಾ ಅವರನ್ನು ಭೇಟಿ ಮಾಡಿತು.
ಈ ವೇಳೆ ಮಾತನಾಡಿದ ರಿಚಾ, ನಿಜವಾಗಿಯು ಈ ಫೋಟೋ ನನ್ನದೆ. ನಾನೀಗ ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯ ಉತ್ತರ ಪ್ರದೇಶದ ಕಾನ್ಪುರ್ನಲ್ಲಿ ವಾಸವಿರುವ ರಿಚಾ, ತಾನೋರ್ವ ಹೋಮಿಯೋಪಥಿ ವೈದ್ಯೆ ಎಂದಿದ್ದಾರೆ. ನಾನು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಆನ್ಲೈನ್ ಮೂಲಕವೇ ಸಾಮಾನ್ಯ ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇವುಗಳಿಂದ ತಿಳಿಯುವುದೇನೆಂದರೆ ವೈರಲ್ ಫೋಸ್ಟ್ ಅಕ್ಷರಶಃ ಸುಳ್ಳು. ಫೋಟೋದಲ್ಲಿರುವ ಮಹಿಳೆಗೂ ಹರಿದಾಡುತ್ತಿರುವ ಸುದ್ದಿಗೂ ಒಂದುಕ್ಕೊಂದು ಸಂಬಂಧವಿಲ್ಲ. ಅವರು ಮನೀಶಾನೂ ಅಲ್ಲ. ಫೋಟೋದಲ್ಲಿರುವವರ ಹೆಸರು ರಿಚಾ ಆಗಿದ್ದು, ಅವರು ಚೆನ್ನಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುಳ್ಳು ಮಾಹಿತಿ ಹಬ್ಬಿ ಆತಂಕ ಸೃಷ್ಟಿಸುತ್ತಿದ್ದು, ಇಂತವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ರಿಚಾ ಅವರು ನೀಡಿದ್ದಾರೆ. (ಏಜೆನ್ಸೀಸ್)
"अभी हम जिंदा है "
हमारे मौत की फेक न्यूज़ फेसबुक और ट्विटर पर बहुत वायरल हो गयी है , हँसी तो आती है इसपर लेकिन डर भी लगता है कही कोई हमारे भूत की अफवाह फैला कर कुटाई न कर दे ..ऐसी अफवाहों पर कई लोगो की जान जा चुकी है 🙏
इस पोस्ट को ज्यादा से ज्यादा लोगो तक पहुंचाने में मदद करे pic.twitter.com/GqSkhl0gOP
— Dr. Richa Rajpoot (@doctorrichabjp) April 26, 2020
My entry on #BlueTwitter pic.twitter.com/7x1VO6I6Ta
— Dr. Richa Rajpoot (@doctorrichabjp) April 25, 2020
ಈ ಮಹಿಳೆ ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ಸಾವಿಗೀಡಾದ್ರಾ?: ಸುದ್ದಿಯ ಅಸಲಿಯತ್ತು ಇಲ್ಲಿದೆ ನೋಡಿ…