ಫ್ಯಾಕ್ಟ್‌ ಚೆಕ್‌: ಮರ್ಲಿನ್‌ ಮನ್ರೋರ ಎಕ್ಸ್ ರೇಯಲ್ಲಿ ಜಿರಳೆ ಪತ್ತೆ ಸುದ್ದಿಯನ್ನು ನಂಬಲೇಬೇಡಿ, ವಾಸ್ತವವೇ ಬೇರೆ!

ನವದೆಹಲಿ: ಎದೆಯ ಎಕ್ಸ್ ರೇ ಚಿತ್ರದಲ್ಲಿ ಜಿರಳೆ ಇರುವ ಚಿತ್ರವೊಂದು ಮಿ. ಸೈಂಟಿಫಿಕ್‌ ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ಜಿಂಬಾಬ್ವೆ ಆಸ್ಪತ್ರೆಯಲ್ಲಿ ಕಂಡುಬಂದಿದೆ ಎನ್ನುವ ಅಡಿಬರಹದೊಂದಿಗೆ ಪ್ರಕಟಗೊಂಡಿದೆ.

ಫೇಸ್‌ಬುಕ್‌ ಪೋಸ್ಟ್‌ನಲ್ಲಿರುವಂತೆ ಈ ಎಕ್ಸ್ ರೇಯು ವ್ಯಕ್ತಿಯೊಬ್ಬನದ್ದಾಗಿದ್ದು, ಆಪರೇಷನ್‌ಗಾಗಿ ವೈದ್ಯರು ಭಾರತಕ್ಕೆ ತೆರಳುವಂತೆ ಹೇಳಿದ್ದಾರೆ. ಇದಕ್ಕಾಗಿ ವ್ಯಕ್ತಿಯು ತನ್ನಲ್ಲಿದ್ದ ಎಲ್ಲವನ್ನು ಮಾರಿದ್ದಾನೆ ಮತ್ತು ಭಾರತಕ್ಕೆ ಬಂದು ಮತ್ತೊಂದು ಎಕ್ಸ್​ರೇಯನ್ನು ತೆಗೆಸಿದ್ದಾನೆ. ಭಾರತದ ವೈದ್ಯರು ಎದೆಯಲ್ಲಿ ಏನೂ ಇಲ್ಲ. ಜಿಂಬಾಬ್ವೆಯ ಎಕ್ಸ್ ರೇ ಯಂತ್ರದಿಂದಾಗಿ ಜಿರಳೆಯ ಚಿತ್ರವು ಬಂದಿದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Mr Scientific ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಸೆಪ್ಟೆಂಬರ್ 16, 2019

ಅಷ್ಟಕ್ಕೂ ನಿಜ ಏನು?

ಈ ಚಿತ್ರದ ಕುರಿತಾಗಿ ಖಾಸಗಿ ವೆಬ್‌ಸೈಟ್‌ವೊಂದು ಫ್ಯಾಕ್ಟ್‌ಚೆಕ್‌ ಮಾಡಿದಾಗ ಈ ಚಿತ್ರವು ಸುಳ್ಳು ಎಂದು ತಿಳಿದುಬಂದಿದ್ದು, ಕಾಲ್ಪನಿಕ ಕಥೆಯನ್ನೊಳಗೊಂಡ ಈ ಚಿತ್ರವು ಹಲವು ವರ್ಷಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ ಎನ್ನುವುದು ತಿಳಿದುಬಂದಿದೆ.

ವೈರಲ್‌ ಆಗಿರುವ ಚಿತ್ರವು ಫೋಟೊಶಾಪ್‌ ಮಾಡಿದ್ದಾಗಿದೆ. ನಿಜವಾದ ಚಿತ್ರವು ಹಾಲಿವುಡ್‌ನ ಪ್ರಸಿದ್ಧ ನಟಿ ಮರ್ಲಿನ್‌ ಮನ್ರೋರ ಎದೆಯ ಎಕ್ಸ್ ರೇಯಾಗಿದೆ. 2017ರಲ್ಲಿ ಫೇಸ್‌ಬುಕ್‌ ಪೇಜ್‌ನಲ್ಲಿ ಲೆಟ್ಸ್‌ ಎಂಜಾಯ್‌ ಜಿಂಬಾಬ್ವೆ(ಜಿಂಬಾಬ್ವೆಯನ್ನು ಆನಂದಿಸೋಣ) ಎನ್ನುವ ಬರಹದೊಂದಿಗೆ ಫೇಸ್‌ಬುಕ್‌ನಲ್ಲಿ ಇದೇ ರೀತಿಯನ್ನು ಹೋಲುವಂತೆ ಚಿತ್ರವನ್ನು ಶೇರ್‌ ಮಾಡಲಾಗಿತ್ತು. 2018ರಲ್ಲೂ ಇದೇ ಚಿತ್ರವನ್ನು ಹಲವರು ಶೇರ್‌ ಮಾಡಿಕೊಂಡಿದ್ದರು.

ವೈರಲ್‌ ಇಮೇಜ್‌ ನಿಜ ಬಣ್ಣ

ರಿವರ್ಸ್ ಇಮೇಜ್‌ ಸರ್ಚ್‌ ಮಾಡಿದಾಗ ನಿಜವಾದ ಚಿತ್ರವು ಕಂಡು ಬಂದಿದ್ದು, ಅದು ಮರ್ಲಿನ್‌ ಮನ್ರೋರ ಎದೆಯ ಎಕ್ಸ್​ ರೇ ಯಾಗಿರುವುದು ತಿಳಿದುಬಂದಿದೆ. 1954ರಲ್ಲಿ ಸ್ತ್ರೀರೋಗದ ಎಂಡೊಮೆಟ್ರಿಯೊಸಿಸ್ ಶಸ್ತ್ರಚಿಕಿತ್ಸೆಗಾಗಿ ಆಕೆಯನ್ನು ಸೀಡಾರ್ಸ್‌ ಆಫ್‌ ಲೆಬೆನಾನ್‌ ಆಸ್ಪತ್ರೆಗೆ ದಾಖಲಿಸಲಾಯಿತು. 2010 ರಲ್ಲಿ, ಈ ಆಸ್ಪತ್ರೆಯಿಂದ ಮೂರು ಎಕ್ಸ್​ ರೇ ಚಿತ್ರಗಳನ್ನು 45,000 ಸಾವಿರ(32,04,333) ಡಾಲರ್‌ಗೆ ಹರಾಜು ಮಾಡಲಾಯಿತು. ಇದನ್ನು ಮುಖ್ಯವಾಹಿನಿಯ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದ್ದವು. ವೈರಲ್‌ ಚಿತ್ರವನ್ನು ನಿಜವಾದ ಚಿತ್ರದೊಂದಿಗೆ ಹೋಲಿಸಿದಾಗ ಹಳೆಯದನ್ನು ಎಡಿಟ್‌ ಮಾಡಿರುವುದು ತಿಳಿದಿದೆ. ವೈರಲ್‌ ಚಿತ್ರದಲ್ಲಿ ತಿರುಚಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಕೊನೆಯದಾಗಿ ಹೇಳೋದೇನು?

ವೈರಲ್‌ ಆಗಿರುವ ಚಿತ್ರವು ಕಾಲ್ಪನಿಕವಾಗಿದೆ. ಇದೇ ಚಿತ್ರಕ್ಕೆ ಹಲವಾರು ಇದೇ ತೆರನಾದ ಕಥೆಗಳನ್ನು ಎಣೆದಿರುವುದು ಕಾಣಸಿಗುತ್ತದೆ. ವೈರಲ್‌ ಇಮೇಜ್‌ ಅನ್ನು ಫೋಟೊಶಾಪ್‌ ಮಾಡಲಾಗಿದೆ ಮತ್ತು ಉದ್ದೇಶಪೂರ್ವಕವಾಗಿ ತಮಾಷೆಯಾಗಿ ಈ ಆರೋಗ್ಯ ಸಂಬಂಧಿಯ ಕಥೆಯನ್ನು ಎಣೆಯಲಾಗಿದೆ.
ಅಂತಾರಾಷ್ಟ್ರೀಯ ಫ್ಯಾಕ್ಟ್ ಚೆಕ್ ಸಂಸ್ಥೆ ಸ್ನೋಪ್ಸ್ ಕೂಡ ಈ ವೈರಲ್ ಚಿತ್ರದ ಹಿಂದಿನ ಸುಳ್ಳನ್ನು ನಿರಾಕರಿಸಿತ್ತು. (ಏಜೆನ್ಸೀಸ್)

Leave a Reply

Your email address will not be published. Required fields are marked *