More

    FACT CHECK: ಮಹಾತ್ಮ ಗಾಂಧಿ ಜತೆ ನಿಂತ ಈ ಟಿಬೆಟಿಯನ್​ ಹುಡುಗ ದಲೈ ಲಾಮಾ?; ಈ ಫೋಟೋ ಹಿಂದಿನ ರಹಸ್ಯ ಇಲ್ಲಿದೆ ನೋಡಿ

    ನವದೆಹಲಿ: ಒಬ್ಬ ಬಾಲಕ ಮಹಾತ್ಮ ಗಾಂಧಿ ಜತೆ ನಿಂತಿರುವ ಕಪ್ಪು ಬಿಳುಪಿನ ಫೋಟೋ ಫೇಸ್​ಬುಕ್​ನಲ್ಲಿ ಹರಿದಾಡುತ್ತಿದ್ದು, ಗಾಂಧಿ ಜತೆ ನಿಂತಿರುವ ಆ ಬಾಲಕ ಆಧ್ಯಾತ್ಮಿಕ ಗುರು ದಲೈ ಲಾಮಾ ಎಂದು ಬರೆಯಲಾಗಿದೆ.

    ಸಿಯೊ ಚೀಚೂಂಗ್​ ಎಂಬುವವರು ದಲೈ ಲಾಮಾ ಎಂಬ ಗ್ರೂಪ್​ ಮಾಡಿದ್ದು ಅದರಲ್ಲಿ ಈ ಫೋಟೋ ಹಂಚಿಕೊಂಡು ಗಾಂಧಿ ಜತೆಗೆ ನಿಂತಿರುವ ಈ ಬಾಲಕ ದಲೈ ಲಾಮಾ ಎಂದು ಬರೆದುಕೊಂಡಿದ್ದಾರೆ.

    ಇಂಡಿಯಾ ಟುಡೇ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಯಲಾದ ಅಂಶವೆಂದರೆ ಈ ಫೋಟೋವನ್ನು ತಿದ್ದುಪಡಿ ಮಾಡಲಾಗಿದೆ. ಈ ಎರಡು ಫೋಟೋಗಳು ಬೇರೆ ಬೇರೆ. ಚಿತ್ರದಲ್ಲಿರುವ ಬಾಲಕ ದಲೈ ಲಾಮಾ ಆವರೇ. ಆದರೆ ಈ ಫೋಟೋವನ್ನು ಗಾಂಧಿ ಫೋಟೋದ ಜತೆಗೆ ಬೆರೆಸಲಾಗಿದೆ.

    ಹೀಗೆ ಫೇಸ್​ಬುಕ್​ನಲ್ಲಿ ಹರಿದು ಬಂದ ಫೋಟೋವನ್ನು ಬಹಳ ಮಂದಿ ಹಂಚಿಕೊಂಡಿದ್ದಾರೆ. ಮತ್ತು ಇದನ್ನು ನಿಜ ಫೋಟೋ ಎಂದೇ ಭಾವಿಸಿದ್ದಾರೆ. ಕಳೆದ ವರ್ಷದಿಂದ ಈ ಫೋಟೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಗಾಂಧಿಯ ಈ ಫೋಟೋ ಗೆಟ್ಟಿ ಇಮೇಜ್​ನಲ್ಲಿ ಲಭ್ಯವಿದೆ. ಇದನ್ನು 1931ರ ನವೆಂಬರ್​ನಲ್ಲಿ ಲಂಡನ್​ನಲ್ಲಿ ತೆಗೆದಿದ್ದು. ಭಾರತೀಯ ಸಾಂವಿಧಾನಿಕ ಸುಧಾರಣೆಗಳು ಎಂಬ ವಿಷಯದ ಮೇಲೆ ನಡೆದಿದ್ದ ಸಭೆಯಲ್ಲಿ ಗಾಂಧಿ ಭಾಗವಹಿಸಿದ್ದರು. ಆಗ ಇನ್ನೂ ದಲೈ ಲಾಮಾ ಹುಟ್ಟಿರಲಿಲ್ಲ!

    ಇನ್ನು ದಲೈ ಲಾಮಾ ಅವರು ಬಾಲಕದಿದ್ದಾಗಿನ ಫೋಟೋ ಅವರ ವೆಬ್​ ಪುಟದಿಂದಲೇ ದೊರೆಯುತ್ತದೆ. ಈ ವೆಬ್​ಸೈಟ್​ನ ಪ್ರಕಾರ ಟಿಬೆಟ್​ನ ಕುಂಬುಂನಲ್ಲಿ 1935 ಜುಲೈ 6ರಂದು ಈ ಫೋಟೋ ತೆಗೆದದ್ದು. ಆಗ ಬಾಲಕ ದಲೈ ಲಾಮಾಗೆ ಕೇವಲ 4 ವರ್ಷ!

    ಈ ಫೋಟೋ ಸುಳ್ಳು ಎನ್ನಲು ಇನ್ನೊಂದು ಪುರಾವೆ ಇದೆ. ಹಿಂದುಸ್ತಾನ್​ ಟೈಮ್ಸ್ ಪತ್ರಿಕೆಯು ದಲೈ ಲಾಮಾ ಅವರ ಹೇಳಿಕೆಯೊಂದನ್ನು ಪ್ರಕಟಿಸಿದೆ. ಅದು ಹೀಗಿದೆ… “ನನ್ನ ಜೀವನದಲ್ಲಿ ಗಾಂಧಿ ಅವರನ್ನು ಭೇಟಿಯೇ ಆಗಿಲ್ಲ. ಬದಲಿಗೆ ಒಂದು ಬಾರಿ ಅವರನ್ನು ಕನಸಲ್ಲಿ ಕಂಡಿದ್ದೇನೆ” ಎಂದು ಸ್ವತಃ ದಲೈ ಲಾಮಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts