ಸೌಲಭ್ಯ ಕಲ್ಪಿಸದಿದ್ದರೆ ಮತದಾನ ಬಹಿಷ್ಕಾರ – ಬಳಗನೂರಿನ 3 ವಾರ್ಡ್ ನಿವಾಸಿಗಳ ಎಚ್ಚರಿಕೆ

ರಾಯಚೂರು: ಮಸ್ಕಿ ತಾಲೂಕು ಬಳಗನೂರು ಪಪಂ ವ್ಯಾಪ್ತಿಯ ವಾರ್ಡ್ ನಂ.7, 11 ಹಾಗೂ 12ಕ್ಕೆ ಮೂಲಸೌಲಭ್ಯ ಕಲ್ಪಿಸದಿದ್ದರೆ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ನಿವಾಸಿಗಳು ಸೋಮವಾರ ಡಿಸಿ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಹಿಂದೆ ಗ್ರಾಪಂ ವ್ಯಾಪ್ತಿಯಲ್ಲಿದ್ದಾಗ ಮೂರು ವಾರ್ಡ್‌ಗಳಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿತ್ತು. ಆದರೆ, ಪಪಂ ಆಗಿ ಮೇಲ್ದರ್ಜೆಗೇರಿದ ನಂತರ ಅಧಿಕಾರಿಗಳು ಸೌಲಭ್ಯ ನೀಡಲು ಬರಲ್ಲ ಎಂದು ತಳ್ಳಿ ಹಾಕುತ್ತಿದ್ದಾರೆ. ಗ್ರಾಪಂ ಅವಧಿಯಲ್ಲಿ ಅಲ್ಲಿನ ಡಿಮಾಂಡ್ ರಿಜಿಸ್ಟಾರ್‌ನಲ್ಲಿ ಮೂರು ವಾರ್ಡ್‌ಗಳನ್ನು ಸೇರಿಸಿ ಅಗತ್ಯ ಶುಲ್ಕ ಪಾವತಿಸಲಾಗುತ್ತಿತ್ತು. ದೀಪ, ರಸ್ತೆ, ನೀರು ಮತ್ತು ವಸತಿ ಮನೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಕಳೆದ 2 ವರ್ಷಗಳಿಂದ ಪಪಂ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಡಿಸಿ ಮಧ್ಯಸ್ಥಿಕೆ ವಹಿಸಿ ವಾರ್ಡ್‌ಗಳನ್ನು ಪಪಂ ಇಲ್ಲವೆ ಉದ್ಬಾಳ, ಗೌಡನಬಾವಿ ಗ್ರಾಪಂಗಾದರೂ ಸೇರಿಸಬೇಕು. ಬೇಡಿಕೆ ನ್ಯಾಯಯುತವಾಗಿದ್ದರೆ ಈಡೇರಿಸಬೇಕು. ಲೋಪ ಇದ್ದರೆ ಸರಿಪಡಿಸಬೇಕು. ಶೀಘ್ರ ಸಮಸ್ಯೆ ಪರಿಹರಿಸದಿದ್ದರೆ ಏ.23ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಡಿ.ತಿಕ್ಕಯ್ಯ, ಎಚ್.ಮಹಾಬಳೇಶ್ವರ, ನಾಗನಗೌಡ, ಮೌಲಾ ಸಾಬ್, ವೆಂಕಟೇಶ, ಅಮರೇಶ, ಸೀತಾರಾಮು, ಭಾಸ್ಕರರಾವ್, ರಾಂಬಾಬು, ಪಿ.ಪ್ರಸಾದ್, ಜಿ.ಸೂರಿಬಾಬು, ಹನುಮಂತ, ಲಿಂಗಪ್ಪ, ನಾಗಪ್ಪ, ಮೌನೇಶ ಇತರರಿದ್ದರು.

Leave a Reply

Your email address will not be published. Required fields are marked *