ಫೇಸ್​ಬುಕ್​ನಿಂದ ಪ್ರೀತಿಸಿ ಒಂದಾದ ದಾಂಪತ್ಯದಲ್ಲಿ ವಾಟ್ಸ್​ಆ್ಯಪ್​ ಚಾಟ್​ನಿಂದ ಬಿರುಕು!

ಬೆಂಗಳೂರು: ಫೇಸ್​ಬುಕ್​ನಿಂದ ಪರಿಚಯವಾಗಿ ಮದುವೆಯಾಗಿದ್ದ ದಂಪತಿ ಈಗ ದೂರವಾಗಲು ವಾಟ್ಸ್​ಆ್ಯಪ್ ಚಾಟ್ ಕಾರಣವಾಗಿದೆ.

ಬೆಂಗಳೂರು ಮೂಲದ ಯುವಕನಿಗೆ ಛತ್ತೀಸ್​ಗಡ ರಾಯಪುರದ ಮೂಲದ ಯುವತಿ ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದಳು. ಇಬ್ಬರಿಗೂ ಪ್ರೀತಿಯಾಗಿ, ಮನೆಯವರ ವಿರೋಧದ ನಡುವೆ ಪುಣೆಯ ರಿಜಿಸ್ಟ್ರಾರ್​ ಕಚೇರಿಯಲ್ಲಿ ವಿವಾಹವಾಗಿದ್ದರು. ನಂತರ ಯುವಕ ಯುವತಿಯನ್ನು ರಾಯ್ಪುರದಲ್ಲೇ ಬಿಟ್ಟು ಬೆಂಗಳೂರಿಗೆ ಬಂದಿದ್ದ. ತನ್ನ ಮನೆಯವರನ್ನು ಒಪ್ಪಿಸಿ ನಂತರ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ ಎನ್ನಲಾಗಿದೆ.

ಸುಮಾರು ಒಂದೂವರೆ ವರ್ಷ ರಾಯ್ಪುರದ ಪತ್ನಿ ಮನೆಗೆ ಹೋಗಿ ಬಂದು ಮಾಡುತ್ತಿದ್ದ. ಈಗ ನವೆಂಬರ್​ನಲ್ಲಿ ನಾರಾಯಣಪುರದಲ್ಲಿ ಮನೆ ಮಾಡಿ ಪತ್ನಿಯನ್ನೂ ಕರೆಸಿಕೊಂಡಿದ್ದ. ಅದಾದ ಬಳಿಕ ಯುವತಿಯ ಕಡೆಯವರು ಆಕೆಯ ಮೊಬೈಲ್​ಗೆ ಮೆಸೇಜ್​ ಮಾಡಿದ್ದರು. ಪತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನಾ ಎಂದು ಕೇಳಿದ್ದರು. ಇದರಿಂದ ಸಿಟ್ಟಿಗೆದ್ದ ಗಂಡ ಪತ್ನಿ ಶೀಲ ಶಂಕಿಸಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ನೀನು ನಡತೆಗೆಟ್ಟವಳು  ವಿಚ್ಛೇದನ ಕೊಡು ಎಂದು ಪೀಡಿಸುತ್ತಿದ್ದಾನೆ. ಈಗ ಗಂಡನ ಹಿಂಸೆ ತಾಳಲಾರದೆ ಯುವತಿ ಹುಟ್ಟೂರಿಗೆ ತೆರಳಿದ್ದಾಳೆ. ರಾಯ್ಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪ್ರಕರಣ ಬೆಂಗಳೂರಿಗೆ ವರ್ಗಾವಣೆಯಾಗಿದೆ. ಮಹದೇವಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.