ಮಂಡ್ಯದಿಂದ ನಿಖಿಲ್‌ ಸ್ಫರ್ಧೆ: MLA, MP ಟಿಕೆಟ್‌ ತಮ್ಮ ಕುಟುಂಬಕ್ಕೆ, ಸಿನಿಮಾ ಟಿಕೆಟ್ ಪಕ್ಷದ ಕಾರ್ಯಕರ್ತರಿಗೆ…

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಖಚಿತವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಎಚ್‌ ಡಿ ದೇವೇಗೌಡ ಅವರ ಕುಟುಂಬದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜೆಡಿಎಎಸ್‌ನ ಕುಟುಂಬ ರಾಜಕಾರಣ, ಸುಮಲತಾ ಅಂಬರೀಷ್‌ ಅವರನ್ನು ಟೀಕಿಸಿದ್ದ ಸಚಿವ ತಮ್ಮಣ್ಣ ವಿರುದ್ಧ ನೆಟ್ಟಿಗರು ತಿರುಗೇಟು ನೀಡಿದ್ದಾರೆ.

ಹುಲಿ ಇದ್ದಾಗ ಉಪಯೋಗಿಸಿಕೊಂಡ ಇಲಿಗಳು, ಇಂದು ತಾವೇ ಹುಲಿಗಳು ಅಂದುಕೊಂಡಿವೆ. MLA, MP ಟಿಕೆಟ್ ಗಳನ್ನು ತಾವೇ, ತಮ್ಮ ಕುಟುಂಬದವರಿಗೆ ಇಟ್ಟುಕೊಂಡು, ಸಿನಿಮಾ ಟಿಕೆಟ್ ಅನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಏಕೈಕ ಪಕ್ಷ ಯಾವುದು? ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬುದು ಹಿಂದಿನ ಪ್ರಜಾಪ್ರಭುತ್ವದ ವ್ಯಾಖ್ಯಾನ ಎಂದು ಟೀಕಿಸಿದ್ದಾರೆ.

ಇವಾಗ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅಂತಾ ಏನಾದ್ರೂ ಬದಲಾಗಿ ಹೋಗಿದ್ಯಾ? ಯೋಧನ ಕುಟುಂಬಕ್ಕೆ ಸುಮಲತಾ 20 ಗುಂಟೆ ಜಮೀನು ಕೊಟ್ಟರು. ಸಿಎಂ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಸಿನಿಮಾದ ಟಿಕೆಟ್ ಹಂಚಿದ್ದಾರೆ. ಇದೇ ಅವರ ಸಾಧನೆ. ಕಾವೇರಿ ವಿಷಯ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಮಂಡ್ಯ ಜನತೆ ಪರ ನಿಂತ ಅಂಬಿ ಬೇಕೋ? ಅಧಿಕಾರಕ್ಕಾಗಿ ನಿಷ್ಠಾವಂತ ಕಾರ್ಯಕರ್ತರ ಕಡೆಗಣಿಸಿ, ಕುಟುಂಬದವರಿಗೆ ಟಿಕೆಟ್ ನೀಡುವ ಜೆಡಿಎಸ್ ಬೇಕೋ? ಎಂದು ಜೆಡಿಎಸ್‌ ಕುಟುಂಬ ರಾಜಕಾರಣದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸಚಿವ ತಮ್ಮಣ್ಣ ಹೇಳಿಕೆಗೂ ತಿರುಗೇಟು ನೀಡಿದ್ದು, ಯಾರ ಮನೆಗೆ ಯಾರು ನೀರು ಕುಡಿಯಲು ಹೋಗಿದ್ದಾರೆ ನೀವೇ ನೋಡಿ ಎಂದು ಸಾರಿಗೆ ಸಚಿವ ತಮ್ಮಣ್ಣ ಕುಟುಂಬ ಅಂಬಿ ಮನೆಗೆ ತೆರಳಿದ್ದ ಫೋಟೋ ಹಾಕಿ ತಿರುಗೇಟು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)