ಖಾತೆ ಇಲ್ಲದಿರುವವರ ಖಾಸಗಿ ಮಾಹಿತಿ ಫೇಸ್​ಬುಕ್ ಪಾಲು!

ಸ್ಯಾನ್​ಫ್ರಾನ್ಸಿಸ್ಕೊ: ಕೋಟ್ಯಂತರ ಬಳಕೆದಾರರ ಖಾಸಗಿ ಮಾಹಿತಿ ದುರ್ಬಳಕೆ ಆರೋಪ ಎದುರಿಸುತ್ತಿರುವ ಫೇಸ್​ಬುಕ್, ಸಾಮಾಜಿಕ ಜಾಲತಾಣ ಖಾತೆ ಹೊಂದಿಲ್ಲದ ವ್ಯಕ್ತಿಗಳ ಡೇಟಾವನ್ನೂ ಸಂಗ್ರಹಿಸುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಫೇಸ್​ಬುಕ್ ಖಾತೆ ಹೊಂದಿಲ್ಲದ ವ್ಯಕ್ತಿಗಳು ಆಪ್ ಅಥವಾ ವೆಬ್​ಸೈಟ್​ಗೆ ಭೇಟಿ ನೀಡಿದಾಗ ಅವರ ಮಾಹಿತಿ ಲಭ್ಯವಾಗುತ್ತದೆ. ಒಂದು ವೇಳೆ ಫೇಸ್​ಬುಕ್ ಖಾತೆ ಲಾಗ್​ಔಟ್ ಆಗಿದ್ದರೂ ಕೂಡ ಮಾಹಿತಿ ಲಭಿಸುತ್ತದೆ ಎಂದು ಫೇಸ್​ಬುಕ್​ನ ಉತ್ಪನ್ನ ನಿರ್ವಹಣೆ ವಿಭಾಗದ ನಿರ್ದೇಶಕ ಡೇವಿಡ್ ಬಾಸೆರ್ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಟ್ರಾ್ಯಕ್ ಹೇಗೆ?: ಬಹಳಷ್ಟು ವೆಬ್​ಸೈಟ್​ಗಳು, ಆಪ್​ಗಳು ಮಾಹಿತಿ ಮತ್ತು ಜಾಹೀರಾತಿಗಾಗಿ ಫೇಸ್​ಬುಕ್ ಸೇವೆಗಳನ್ನು ಬಳಕೆ ಮಾಡುತ್ತವೆ. ಫೇಸ್​ಬುಕ್​ನಲ್ಲಿ ಬಳಕೆದಾರರು ಒತ್ತುವ ಲೈಕ್ ಮತ್ತು ಶೇರ್ ಬಟನ್​ಗಳ ವಿವರಗಳನ್ನು ಜಾಹೀರಾತು ನೀಡಲು ಕಂಪನಿಗಳು ಬಳಸಿಕೊಳ್ಳುತ್ತವೆ. ಇತರ ವೆಬ್​ಸೈಟ್​ಗಳಿಗೆ ಲಾಗ್​ಇನ್ ಆಗಲು ಫೇಸ್​ಬುಕ್ ಖಾತೆಗಳನ್ನು ಬಳಕೆ ಮಾಡಿದಾಗ ಬಳಕೆದಾರರ ಸಾಕಷ್ಟು ವಿವರ ವೆಬ್​ಸೈಟ್​ನವರ ಪಾಲಾಗುತ್ತದೆ ಎಂದು ಬಾಸೆರ್ ವಿವರಿಸಿದ್ದಾರೆ.

ಗೂಗಲ್​ನಿಂದಲೂ ಅದೇ ಕೆಲಸ

ಟ್ವಿಟರ್ ಮತ್ತು ಗೂಗಲ್​ನಂಥ ಬಹುರಾಷ್ಟ್ರೀಯ ಐಟಿ ಕಂಪನಿಗಳು ಕೂಡ ಬಳಕೆದಾರರ ಮೇಲೆ ಸದಾ ನಿಗಾ ಇರಿಸುತ್ತವೆ ಎಂದು ಬಾಸೆರ್ ಸಮರ್ಥಿಸಿಕೊಂಡಿದ್ದಾರೆ. ಇದು ಅಂತರ್ಜಾಲ ಕ್ಷೇತ್ರದಲ್ಲಿ ಸಾಮಾನ್ಯ. ಭೇಟಿ ಕೊಟ್ಟ ತಕ್ಷಣ ಅನೇಕ ವೆಬ್​ಸೈಟ್, ಆಪ್​ಗಳು ನಿಮ್ಮ ಮಾಹಿತಿಯನ್ನು ವಿವಿಧ ಕಂಪನಿಗಳಿಗೆ ವರ್ಗಾಯಿಸುತ್ತವೆ ಎಂದು ಬಾಸೆರ್ ಬಹಿರಂಗಪಡಿಸಿದ್ದಾರೆ.

ಶೀಘ್ರ ಪೇಮೆಂಟ್ ಸೇವೆ

ಮೊಬೈಲ್ ಬ್ಯಾಂಕಿಂಗ್ ಜನಪ್ರಿಯತೆ ಗಳಿಸುತ್ತಿರುವ ಬೆನ್ನಿಗೆ ಫೇಸ್​ಬುಕ್ ಭಾರತದಲ್ಲಿ ಪೇಮೆಂಟ್ ಸರ್ವೀಸ್ (ಯುಪಿಐ ಪೇಮೆಂಟ್) ಆರಂಭಿಸಲು ಸಿದ್ಧತೆ ನಡೆಸಿದೆ. ಮೆಸೇಜಿಂಗ್ ಆಪ್ ‘ಮೆಸೆಂಜರ್’ ಮೂಲಕ ಹಣ ಪಾವತಿ ಸೇವೆ ಆರಂಭಿಸಲು ಮುಂದಾಗಿದೆ.

Leave a Reply

Your email address will not be published. Required fields are marked *