ಫೇಸ್​ಬುಕ್​, ಇನ್​ಸ್ಟಾಗ್ರಾಂಗಳು ಸ್ಥಗಿತ: ಟ್ವೀಟ್​ ಮೂಲಕ ಸಮಸ್ಯೆ ತಿಳಿಸಿದ ನೆಟ್ಟಿಗರು

ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂ ಮಂಗಳವಾರ ಸಂಜೆ ಜಗತ್ತಿನಾದ್ಯಂತ ಸ್ಥಗಿತಗೊಂಡಿದ್ದು ಕೋಟ್ಯಂತರ ನೆಟ್ಟಿಗರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ತಮ್ಮ ಟ್ವೀಟ್​ಗಳಿಗೆ #FacebookDown and #InstagramDown ಎಂದು ಹ್ಯಾಷ್​ಟ್ಯಾಗ್​ ನೀಡಿದ್ದಾರೆ.

ಮಂಗಳವಾರ ಬೆಳಗ್ಗೆಯಿಂದಲೇ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಸಂಜೆ ಹೊತ್ತಿಗೆ ಕೆಲ ಕಾಲ ಸ್ಥಗಿತಗೊಂಡಿದೆ. ಯುನೈಟೆಡ್​ ಸ್ಟೇಟ್​ನಲ್ಲಿ ಪದೇಪದೆ ಫೇಸ್​ಬುಕ್​ ಸ್ಥಗಿತಗೊಳ್ಳುತ್ತಿದ್ದು ಈಗ ಜಗತ್ತಿನಾದ್ಯಂತ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಈ ತಿಂಗಳಲ್ಲಿ ಇದು ಎರಡನೇ ಬಾರಿಗೆ ಫೇಸ್​ಬುಕ್​ ಡೌನ್​ ಆಗಿದೆ ಎಂದು ವೆಬ್​ಸೈಟ್​ವೊಂದು ಪ್ರಕಟಿಸಿದೆ.

ಫೋಟೋ ಅಪ್​ಲೋಡ್​ ಮಾಡಲು ಬಳಸುವ ಇನ್​ಸ್ಟಾಗ್ರಾಂ ಕೂಡ ಸ್ಥಗಿತಗೊಂಡಿದೆ, ಫೋಟೋ ಹಾಕಲು ಆಗುತ್ತಿಲ್ಲ ಎಂದು ಬಳಕೆದಾರರು ವರದಿ ನೀಡಿದ್ದಾರೆ.

ಮಂಗಳವಾರ ಸಂಜೆ ವೇಳೆ ಫೇಸ್​ಬುಕ್​ನಲ್ಲಿ ಯಾವುದೇ ಸ್ಟೇಟಸ್​ ಹಾಕಲು ಆಗುತ್ತಿಲ್ಲ. ಪೇಜ್​ಗಳು ತುಂಬ ನಿಧಾನವಾಗಿ ತೆರೆದುಕೊಳ್ಳುತ್ತವೆ. ಮೆಸೆಂಜರ್​ನಲ್ಲಿ ಕೂಡ ಮೆಸೇಜ್​ ಕಳಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಬಾರಿಯಂತೂ ಸೈಟ್​ನಲ್ಲಿ ಎರರ್​ ಎಂದು ಕಾಣಿಸಿಕೊಳ್ಳುತ್ತದೆ. ಇನ್​ಸ್ಟಾಗ್ರಾಂನಲ್ಲೂ ಹೀಗೆ ಬರುತ್ತಿದೆ ಎಂದು ಬಳಕೆದಾರರು ತಿಳಿಸಿದ್ದಾರೆ.
ಮೊದಮೊದಲು ಇಂಟರ್​ನೆಟ್​ ಸಮಸ್ಯೆ ಇರಬಹುದು ಎಂದು ಅನ್ನಿಸಿದರೂ ನಂತರ ಫೇಸ್​ಬುಕ್​ನಲ್ಲಿ ಸಮಸ್ಯೆ ಇರುವುದು ತಿಳಿದುಬಂದಿದೆ.