ಜಾಗತಿಕವಾಗಿ ಹಲವು ಗಂಟೆ ಸ್ಥಗಿತಗೊಂಡಿದ್ದ ಫೇಸ್​ಬುಕ್​, ಇನ್​ಸ್ಟಾಗ್ರಾಂ: ಚಡಪಡಿಸಿದ ಕೋಟ್ಯಂತರ ಯುವಜನತೆ

ನವದೆಹಲಿ: ಕೆಲಕ್ಷಣಗಳವರೆಗೆ ಫೇಸ್​ಬುಕ್​, ಇನ್​ಸ್ಟಾಗ್ರಾಂ ಅಥವಾ ಟ್ವೀಟರ್​ನಂತ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸದಿದ್ದರೆ ಯುವಜನತೆ ಏನೋ ಕಳೆದುಕೊಂಡವರಂತೆ ಚಡಪಡಿಸುತ್ತಾರೆ. ಇಂಥದ್ದರಲ್ಲಿ ಗಂಟೆಗಟ್ಟಲೆ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳು ಜಾಗತಿಕವಾಗಿ ಸ್ಥಗಿತಗೊಂಡಿದ್ದವು ಎಂದಾದರೆ, ಪರಿಸ್ಥಿತಿಯನ್ನು ಸುಲಭದಲ್ಲಿ ಊಹಿಸಬಹುದು.

ಯಾವುದೋ ತಾಂತ್ರಿಕ ದೋಷದಿಂದಾಗಿ ಫೇಸ್​ಬುಕ್​ ಸ್ಥಗಿತಗೊಂಡಿದೆ. ಅದನ್ನು ಸರಿಪಡಿಸಲಾಗುತ್ತಿದೆ ಎಂದು ಫೇಸ್​ಬುಕ್​ ಕೂಡ ಹೇಳಿತ್ತು. ಆದರೆ ಗಂಟೆಗಟ್ಟಲೆ ಪರದಾಡಿದ ಬಳಿಕ ಹಂತಹಂತವಾಗಿ ಫೇಸ್​ಬುಕ್​ ಕಾರ್ಯನಿರ್ವಹಿಸಲಾರಂಭಿಸಿತು.

ಒಂದು ಮೂಲದ ಪ್ರಕಾರ ಭಾರತೀಯ ಕಾಲಮಾನ ರಾತ್ರಿ 10 ಗಂಟೆಯಲ್ಲಿ ಭಾರತದಾದ್ಯಂತ ಫೇಸ್​ಬುಕ್​ ಸ್ಥಗಿತಗೊಂಡಿತು. ಜಾಗತಿಕವಾಗಿ ಈ ಪ್ರಕ್ರಿಯೆ ಭಾರತೀಯ ಕಾಲಮಾನ ರಾತ್ರಿ 9.38 ರಿಂದಲೇ ಆರಂಭವಾಗಿತ್ತು ಎನ್ನಲಾಗಿದೆ.

ಅಷ್ಟರದಲ್ಲಿ ತಮ್ಮ ಫೇಸ್​ಬುಕ್​ ಅಕೌಂಟ್​ಗೆ ಲಾಗಿನ್​ ಆಗಲಾಗದಿರುವ ಬಗ್ಗೆ ಕೋಟ್ಯಂತರ ಜನರು ದೂರಿದ್ದರು. ಇನ್​ಸ್ಟಾಗ್ರಾಂ ಮತ್ತು ಮೆಸೆಂಜರ್​ ಸಾಮಾಜಿಕ ಜಾಲತಾಣಗಳದ್ದು ಇದೇ ಹಣೇಬರಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವಡೆ ವಾಟ್ಸ್​ಆ್ಯಪ್​ ಕೂಡ ಭಾಗಶಃ ಸ್ಥಗಿತಗೊಂಡಿತ್ತು. ವಾಯ್ಸ್​ ನೋಟ್ಸ್​ ಸೇರಿ ಅದರ ಕೆಲವು ಸೌಲಭ್ಯಗಳನ್ನು ಬಳಸಲಾಗುತ್ತಿಲ್ಲ ಎಂದು ಯುವಜನತೆ ದೂರಿದ್ದರು.

ಈ ಕುರಿತು ಸ್ಪಷ್ಟನೆ ನೀಡಿದ ಫೇಸ್​ಬುಕ್ ಸಿಬ್ಬಂದಿ, ಇದಕ್ಕೂ DDoS ದಾಳಿಗೂ ಸಂಬಂಧ ಕಲ್ಪಿಸುವುದು ತಪ್ಪಾಗುತ್ತದೆ. ತಾಂತ್ರಿಕ ದೋಷವಷ್ಠೆ ಕಾಣಿಸಿಕೊಂಡಿದ್ದು, ಅದನ್ನು ಪತ್ತೆ ಮಾಡಿ ದುರಸ್ತಿಗೊಳಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿ ಜನರನ್ನು ಸಮಾಧಾನಪಡಿಸಲು ಯತ್ನಿಸಿತ್ತು.

DDos ಅಂದರೆ: DDoS ಅಂದರೆ Distributed Denial Of Services. ಅಂದರೆ, ಕೆಲವೊಂದು ನಿರ್ದಿಷ್ಟವಾದ ಸೌಲಭ್ಯಗಳು ಕಾರ್ಯನಿರ್ವಹಣೆಯಲ್ಲಿ ಅಡೆತಡೆ ಉಂಟಾಗುವುದು ಇಲ್ಲವೇ ಸ್ಥಗಿತಗೊಳ್ಳುವುದು ಎಂದು ಅರ್ಥ. (ಏಜೆನ್ಸೀಸ್​)