ಫೇಸ್​ಬುಕ್ ಪ್ರಿಯತಮನಿಂದ 95 ಲಕ್ಷ ರೂ. ವಂಚನೆ

ಬೆಂಗಳೂರು: ಶಾಸಕರ ಮಗನೆಂದು ಮಹಿಳೆಯನ್ನು ನಂಬಿಸಿ ಆಕೆ ಮತ್ತು ಆಕೆಯ 45 ಸ್ನೇಹಿತರಿಗೆ ಸರ್ಕಾರದಿಂದ ನಿವೇಶನ ಕೊಡಿಸುವುದಾಗಿ ಒಟ್ಟು 90 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ನಾಗಸಂದ್ರದ ವಾದಿರಾಜ ಗೌಡ (41) ಬಂಧಿತ. ಈತನಿಂದ ಪೊಲೀಸರು 3 ಲಕ್ಷ ರೂ. ಮತ್ತು 45 ಗ್ರಾಂ ಆಭರಣ ವಶಪಡಿಸಿ ಕೊಂಡಿದ್ದಾರೆ. ಫೇಸ್​ಬುಕ್ ಮೂಲಕ ಪರಿಚಯವಾದ ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ 2 ವರ್ಷ ಜತೆಗಿದ್ದು ಹಣ, ಆಭರಣ ಪಡೆದು ಮೋಸ ಮಾಡಿದ್ದ. ಈ ಬಗ್ಗೆ ಮಹಿಳೆ ದೂರು ದಾಖಲಿಸಿದ್ದಳು.

ಆರೋಪಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಇನ್ನೂ ಹಲವರಿಗೆ ಈತ ವಂಚನೆ ಮಾಡಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಸವೇಶ್ವರನಗರದ 37 ವರ್ಷದ ಮಹಿಳೆಗೆ 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಕಳೆದ ಜನವರಿಯಲ್ಲಿ ಆರೋಪಿ ವಾದಿರಾಜ ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದಾನೆ. ತಾನು ಶಾಸಕ ರಾಮಚಂದ್ರಯ್ಯ ಪುತ್ರ. ಅವಿವಾಹಿತ. ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ಬಿಜಿನೆಸ್ ಮಾಡುತ್ತಿದ್ದೇನೆ. ನೀವು ನೋಡಲು ತುಂಬ ಚೆನ್ನಾಗಿದ್ದೀರಿ. ನನಗೆ ಸಿನಿಮಾ ಮತ್ತು ಧಾರಾವಾಹಿ ನಿರ್ವಪಕರು ಪರಿಚಯವಿದ್ದು, ನಿಮಗೆ ಅವಕಾಶ ಕೊಡಿಸುತ್ತೇನೆ ಎಂದು ಹೇಳಿದ್ದ.

ಮಹಿಳೆ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ವಿಷಯ ತಿಳಿದ ಆರೋಪಿ, ‘ನೀವು ಒಪ್ಪಿದರೆ ಮದುವೆ ಮಾಡಿಕೊಳ್ಳುವೆ’ ಎಂದಿದ್ದ. ಅದನ್ನು ಮಹಿಳೆ ನಂಬಿದಾಗ ಊಟಿ, ಮಡಿಕೇರಿ ಎಂದೆಲ್ಲ ನಾಲ್ಕೈದು ದಿನ ಸುತ್ತಾಡಿಸಿದ್ದ. ಯಶವಂತಪುರದಲ್ಲಿ ಬೇರೆಯವರ ಮಾಲೀಕತ್ವದ ವಸತಿಗೃಹ ತೋರಿಸಿ ಅದರ ಮಾಲೀಕ ನಾನೇ, ಕಚೇರಿಯೂ ಇಲ್ಲೇ ಇದೆ ಎಂದು ಹೇಳಿದ್ದ. ಅಲ್ಲಿಗೆ ಕರೆದೊಯ್ದು ಕಾಫಿ ಕೊಡಿಸಿದ ಆರೋಪಿ, ನಾಳೆಯೇ ದೇವಸ್ಥಾನಕ್ಕೆ ಹೋಗಿ ಮದುವೆ ಆಗೋಣ. ಆದರೆ, ಸಂಸಾರ ನಡೆಸಲು ತಕ್ಷಣ ಮನೆ ಬೇಕಾಗಿದೆ. ಆದರೆ, ಈಗ ನನ್ನ ಬಳಿ ಹಣ ಇಲ್ಲ. ಕೆಲ ಬಿಜಿನೆಸ್​ನಿಂದ ಹಣ ಬರಬೇಕಿದೆ. ಅದಕ್ಕೆ ಸ್ವಲ್ಪ ತಡವಾಗುತ್ತಿದೆ ಎಂದಿದ್ದ. ಅದನ್ನು ನಂಬಿದ ಮಹಿಳೆ ಮನೆಯಲ್ಲಿದ್ದ 132 ಗ್ರಾಂ ಆಭರಣ ಹಾಗೂ ಪರಿಚಿತರ ಬಳಿ ಸಾಲ ಪಡೆದು ಒಟ್ಟು 5 ಲಕ್ಷ ರೂ. ಕೊಟ್ಟಿದ್ದಳು.

ಕೆಲ ದಿನಗಳ ನಂತರ ವಾದಿರಾಜ, ಸರ್ಕಾರದಿಂದ ಕಡಿಮೆ ಬೆಲೆಗೆ ಸೈಟ್ ಕೊಡಿಸುತ್ತೇನೆ. ನಿಮಗೆ ಬೇಕಾದವರಿಗೆ ಹೇಳುವಂತೆ ಮಹಿಳೆಯನ್ನು ನಂಬಿಸಿದ್ದ. ತನ್ನ ಅಕ್ಕ, ಭಾವ, ಸ್ನೇಹಿತರು ಸೇರಿ 45 ಮಂದಿಯಿಂದ ನಿವೇಶನಗಳಿಗೆಂದು ಮೂರು ತಿಂಗಳಲ್ಲಿ ಹಂತಹಂತವಾಗಿ 90 ಲಕ್ಷ ರೂ. ಸಂಗ್ರಹಿಸಿ ಅದೇ ವಸತಿಗೃಹಕ್ಕೆ ಹೋಗಿಕೊಟ್ಟಿದ್ದಳು. ಹಣ ಸೇರುತ್ತಿದ್ದಂತೆ ವಾದಿರಾಜ, ರಾತ್ರೋರಾತ್ರಿ ಲಾಡ್ಜ್ ರೂಂ ಖಾಲಿ ಮಾಡಿ ಪರಾರಿಯಾಗಿದ್ದ.

ಸಿನಿಮಾಗಳಲ್ಲಿ ಅವಕಾಶದ ಆಮಿಷ

ಎಸ್​ಎಸ್​ಎಲ್​ಸಿ ವ್ಯಾಸಂಗ ಅರ್ಧಕ್ಕೆ ಬಿಟ್ಟಿದ್ದ ಆರೋಪಿ ವಾದಿರಾಜ ದುಶ್ಚಟಕ್ಕೆ ದಾಸನಾಗಿದ್ದ. ಶ್ರೀಮಂತರಂತೆ ಹೊಸ ಹೊಸ ಬಟ್ಟೆ ಧರಿಸಿ, ಮೇಕಪ್ ಮಾಡಿಕೊಂಡು ಫೋಟೋ ಮತ್ತು ವಿಡಿಯೋ ತೆಗೆಸಿ ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡುತ್ತಿದ್ದ. ಯುವತಿಯರು, ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಳ್ಳುತ್ತಿದ್ದ. ಒಂಟಿಯಾಗಿ ಇದ್ದಾರೆ ಎಂದರೆ ಸಾಕು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಪುಸಲಾಯಿಸಿ ಲಾಡ್ಜ್​ಗೆ ಕರೆದೊಯ್ದು ಹಣ ಪಡೆದು ಮೋಸ ಮಾಡುತ್ತಿದ್ದ.

ಆರು ತಿಂಗಳಲ್ಲಿ ವಿಚ್ಛೇದನ ಕೊಡಿಸಿದ್ದ

ಸಂಸಾರದ ಕಲಹದಿಂದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಂತ್ರಸ್ತೆ ಪರವಾಗಿ ಆರೋಪಿ ವಾದಿರಾಜು, ಮೈಸೂರಿನ ನ್ಯಾಯಾಲಯಕ್ಕೆ ಓಡಾಡಿ 6 ತಿಂಗಳಲ್ಲಿ ವಿಚ್ಛೇದನ ಕೊಡಿಸಿದ್ದ. ಇದನ್ನು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.