ಜಿಪಂ ಮಾಜಿ ಸದಸ್ಯನ ಮೇಲೆ ಪೊಲೀಸರ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಹಾಗೂ ಜಿಪಂ ಮಾಜಿ ಸದಸ್ಯ ಶಿವಣ್ಣ ಅರೆಕುಡಿಗೆ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ನಗರ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಣ್ಣ ಅವರ ಎರಡೂ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಬಲಗಣ್ಣಿನ ಮೇಲೆ ಹೊಲಿಗೆ ಹಾಕಲಾಗಿದೆ. ಹೊಟ್ಟೆ ಬೆನ್ನಿನ ಮೇಲೆ ಗಾಯಗಳಾಗಿವೆ.

ಮನಸೋ ಇಚ್ಛೆ ಹಲ್ಲೆ ಮಾಡಿರುವ ಪಿಎಸ್​ಐ ರಘು ಹಾಗೂ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಗಾಯಗೊಂಡಿರುವ ಶಿವಣ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ನಡೆದಿದ್ದೇನು?: ಖಾಸಗಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಲು ಸೋಮವಾರ ರಾತ್ರಿ 12.55ರ ಸುಮಾರಿಗೆ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ಅಲ್ಲಿ ಸೀಟಿಗೆ ಸಂಬಂಧಿಸಿದಂತೆ ಶಿವಣ್ಣ ಅರೆಕುಡಿಗೆ ಹಾಗೂ ಕೆಎಸ್​ಆರ್​ಟಿಸಿ ಸಂಚಾರಿ ನಿಯಂತ್ರಕರ ನಡುವೆ ಮಾತಿನ ಚಕಮಕಿ ಆಗಿದೆ.

ಈ ನಡುವೆ ಅಲ್ಲಿಯೇ ಮಫ್ತಿಯಲ್ಲಿದ್ದ ಪೊಲೀಸರು ಹಾಗೂ ಶಿವಣ್ಣ ನಡುವೆ ಸಹ ಮಾತಿನ ಚಕಮಕಿ ನಡೆದು ಸಿಟ್ಟಿಗೆದ್ದ ಪೊಲೀಸರು ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್​ಐ ರಘು ಪೊಲೀಸ್ ಜೀಪಿನಲ್ಲಿ ಠಾಣೆಗೆ ಕರೆದೊಯ್ದು ಅಲ್ಲಿಯೂ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಶಿವಣ್ಣ ದೂರಿನಲ್ಲಿ ತಿಳಿಸಿದ್ದಾರೆ.

ಕಣ್ಣು, ಮುಖ, ಬೆನ್ನಿನಲ್ಲಿ ರಕ್ತ ಬರುವಂತೆ ಹಲ್ಲೆ ಮಾಡಿರುವ ಪೊಲೀಸರು, ನನ್ನ ಮೊಬೈಲ್ ಒಡೆದು ಹಾಕಿದ್ದಾರೆ. ಈ ಸಂದರ್ಭ ನನ್ನಲ್ಲಿದ್ದ ಹದಿನೈದು ಗ್ರಾಂ ಚಿನ್ನದ ಸರ, 4,800 ರೂ. ಹಾಗೂ ಬೆಳ್ಳಿ ತಂತಿ ಸ್ಪಟಿಕದ ಸರ ಕೂಡ ಕಾಣೆಯಾಗಿದೆ ಎಂದಿದ್ದಾರೆ.

ಜಿಪಂ ಮಾಜಿ ಸದಸ್ಯನಾಗಿದ್ದು, ರಾಷ್ಟ್ರೀಯ ಪಕ್ಷದ ಜಿಲ್ಲಾ ಕಾರ್ಯಕಾರಣಿಯಾಗಿದ್ದೇನೆಂದು ಹೇಳಿದರೂ ಪೊಲೀಸರು ವಿನಾಕಾರಣ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರಜ್ಞಾಹೀನನಾಗಿದ್ದಾಗ ನನ್ನ ಹೆಬ್ಬೆರಳಿನ ಗುರುತು ಪಡೆದುಕೊಂಡಿದ್ದಾರೆ. ಜಿಲಾ ಪೊಲೀಸ್ ವರಿಷ್ಠಾಧಿಕಾರಿ ಘಟನೆಯನ್ನು ಪೂರ್ಣ ತನಿಖೆ ಮಾಡಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದು, ರಾಜ್ಯಪಾಲರಿಗೂ ಮನವಿ ಕಳುಹಿಸಿದ್ದಾರೆ.

ಹಲ್ಲೆ ಮಾಡಿದ್ದು ನಾನಲ್ಲ, ಜನ: ಸೋಮವಾರ ರಾತ್ರಿ ಮದ್ಯಪಾನ ಮಾಡಿ ಕೆಎಸ್​ಆರ್​ಟಿಸಿ ಸಂಚಾರ ನಿಯಂತ್ರಕರ ಮೇಲೆ ಹಲ್ಲೆ ಮಾಡಿ ಶಿವಣ್ಣ ಗಲಾಟೆ ಮಾಡಿಕೊಂಡಿದ್ದರು. ಈ ಸಂದರ್ಭ ಅಲ್ಲಿನ ಸಾರ್ವಜನಿಕರು ಅವರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಜನರಿಂದ ಶಿವಣ್ಣ ಅವರನ್ನು ರಕ್ಷಿಸಿ ಪೊಲೀಸರೊಡನೆ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ನಗರ ಪೊಲೀಸ್ ಠಾಣೆ ಪಿಎಸ್​ಐ ರಘು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ರೆಕಾರ್ಡ್: ಹಲ್ಲೆ ಘಟನೆಯಲ್ಲಿ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ಳಲಾಗುತ್ತಿದೆ. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದರೆ ಪಿಎಸ್​ಐ ರಘು ಹಾಗೂ ಪೊಲೀಸರು ನನ್ನ ಮೇಲೆ ಮಾಡಿರುವ ಪೈಶಾಚಿಕ ಕೃತ್ಯ ಬಯಲಾಗುತ್ತದೆ ಎಂದು ಶಿವಣ್ಣ ಅರೆಕುಡಿಗೆ ತಿಳಿಸಿದ್ದಾರೆ.

ಶಿವಣ್ಣ ಮದ್ಯಪಾನ ಮಾಡಿರುವುದನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಸೇವೆಗೆ ಅಡ್ಡಿಪಡಿಸಿರುವ ಶಿವಣ್ಣ ಹಲ್ಲೆ ಮಾಡಿದ್ದಾರೆಂದು ಕೆಎಸ್​ಆರ್​ಟಿಸಿ ಸಂಚಾರಿ ನಿಯಂತ್ರಕ ಜಯಣ್ಣ ನೀಡಿರುವ ದೂರು ದಾಖಲಿಸಲಾಗಿದೆ. ದೂರು ದಾಖಲು ಬಳಿಕ ಆಸ್ಪತ್ರೆಗೆ ಸೇರಿಕೊಂಡು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ.

| ರಘು, ನಗರ ಠಾಣೆ ಪಿಎಸ್​ಐ

ನಾನು ಯಾರ ಮೇಲೆ ಹಲ್ಲೆ ಮಾಡಿದ್ದರೂ ಸಿಸಿಟಿವಿಯಲ್ಲಿ ಗೊತ್ತಾಗುತ್ತದೆ. ಪೊಲೀಸರ ವರ್ತನೆ ಗೊತ್ತಾಗುತ್ತದೆಂಬ ಭಯದಿಂದ ಸಿಸಿಟಿವಿ ಕೆಟ್ಟು ಹೋಗಿದೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳಿಂದ ತಿಳಿಸುತ್ತಿದ್ದಾರೆ. ಇದು ಸುಳ್ಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಬೇಕು.

| ಶಿವಣ್ಣ ಅರೆಕುಡಿಗೆ, ಜಿಪಂ ಮಾಜಿ ಸದಸ್ಯ