ಸಿಎಂ ಅಶೋಕ್ ಗೆಹ್ಲೋಟ್​ ನೇತೃತ್ವದಲ್ಲಿ ರಾಜಸ್ಥಾನದ 23 ಸಚಿವರು ಪದಗ್ರಹಣ

ಜೈಪುರ: ನೂತನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ನೇತೃತ್ವದಲ್ಲಿ ರಾಜಸ್ಥಾನದ 23 ಸಚಿವರು ಸೋಮವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಅದೇ ರೀತಿ, ಮಧ್ಯಪ್ರದೇಶದಲ್ಲಿ ಕಮಲ್​ ನಾಥ್​ ಮತ್ತು ಛತ್ತೀಸ್​ಗಢದಲ್ಲಿ ಭೂಪೇಶ್​ ಬಾಘೆಲ್​ ನೇತೃತ್ವದಲ್ಲಿ ಡಿ.25ರಂದು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗಾಗಿ ಗೆಹ್ಲೋಟ್,​ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧೀಯವರಿಗೆ ಸಚಿವ ಸ್ಥಾನಕ್ಕೆ ಅರ್ಹರಾದ 40 ಸ್ಪರ್ಧಿಗಳ ಹೆಸರಿನ ಪಟ್ಟಿಯನ್ನು ಕಳುಹಿಸಿದ್ದರು. ಈ ಪಟ್ಟಿಯನ್ನು ಪರಿಶೀಲಿಸಿದ ರಾಗಾ, ಸಚಿವ ಸಂಪುಟದ ಕುರಿತು ಯಾವುದೇ ಅಸಮಾಧಾನ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ಪಟ್ಟಿಯನ್ನು ಅನುಮೋದಿಸಿದ್ದಾರೆ ಎನ್ನಲಾಗಿದೆ.

‘ರಾಜಸ್ಥಾನದ ಸಚಿವ ಸಂಪುಟ 30 ಸಚಿವರನ್ನು ಹೊಂದಬಹುದಾಗಿದ್ದು, ಇಂದು ಆಗಿರುವುದು ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಯಲ್ಲ, ಲೋಕಸಭಾ ಚುನಾವಣೆ ನಂತರ ಮತ್ತೆ ವಿಸ್ತರಣೆ ಮಾಡಲಾಗುತ್ತದೆ’ ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದಾರೆ.

ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ 18 ಮಂದಿ ಪ್ರಥಮ ಬಾರಿಗೆ ಸಚಿವರಾಗುತ್ತಿದ್ದಾರೆ. ಸಂಪುಟದಲ್ಲಿ ಇಬ್ಬರು ರಜಪೂತರು, ಇಬ್ಬರು ವೈಶ್ಯರು, ಒಬ್ಬ ಗುಜ್ಜರ್​, ಒಬ್ಬ ಮುಸ್ಲಿಂ, ನಾಲ್ವರು ಜಾಟ್​, ಏಳು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇನ್ನೂ ಮೂವರು ಮತ್ತು ಮೂವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಸಂಪುಟದಲ್ಲಿ ಮಹಿಳಾ ಅಭ್ಯರ್ಥಿ ಮಮತಾ ಭೂಪೇಶ್ ಪ್ರಮಾಣ ವಚನ ಸ್ವೀಕರಿಸಿದರು. ​

ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್​ನ ಮೂರು ಮುಖ್ಯಮಂತ್ರಿಗಳು ಡಿ.17ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. (ಏಜೆನ್ಸೀಸ್)