ಕಂಪ್ಯೂಟರ್​ ಗೇಮ್​ಗಿಂತ ಕಣ್ಣು ಮುಖ್ಯ!

ಮಕ್ಕಳು ಹೊರಾಂಗಣ ಆಟಕ್ಕಿಂತ ಹೆಚ್ಚಾಗಿ ಕಂಪ್ಯೂಟರ್, ಮೊಬೈಲ್, ಟಿವಿ ಎಂದು ಡಿಜಿಟಲ್ ಪರದೆಗಳ ಮುಂದೆ ಕಳೆಯುವ ಸಮಯವೇ ಹೆಚ್ಚು. ಇದರ ಪರಿಣಾಮವಾಗಿ, ಚಿಕ್ಕ ಮಕ್ಕಳಲ್ಲಿಯೂ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಬರುತ್ತಿದೆ. ನೀವೂ ಕಂಪ್ಯೂಟರ್ ಮುಂದೆ ಸಮಯ ಕಳೆಯುವವರಾಗಿದ್ದರೆ ಎಚ್ಚರಿಕೆ ವಹಿಸಿ.

|ಡಾ.ಕೆ.ಭುಜಂಗ ಶೆಟ್ಟಿ, ಮುಖ್ಯಸ್ಥರು, ನಾರಾಯಣ ನೇತ್ರಾಲಯ

ಶಾಲೆಯಿಂದ ಬಂದು ಹೋಂವರ್ಕ್ ಮುಗಿಸಿ, ಸ್ವಲ್ಪ ಹೊತ್ತು ಆಟವಾಡಿದಂತೆ ಮಾಡಿ ಸೀದಾ ಕಂಪ್ಯೂಟರ್ ಗೇಮ್ಸ್​ನಲ್ಲಿ ಮುಳುಗುವ ಮಕ್ಕಳಿದ್ದಾರೆ. ಒಂದೆರಡು ತಾಸುಗಳ ಕಾಲವಾದರೂ ಕಂಪ್ಯೂಟರ್ ಗೇಮ್ಲ್ಲಿ ಸಮಯ ಕಳೆಯಲೇಬೇಕು. ಅಷ್ಟರಮಟ್ಟಿಗೆ ಗೇಮ್್ಸ, ಮೊಬೈಲ್​ಗಳ ವಿಶ್ವದಲ್ಲಿ ಇರುವುದು ಅವರಿಗೆ ಅಭ್ಯಾಸವಾಗಿದೆ. ಅಂಥ ಮಕ್ಕಳು ನೀವೂ ಆಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ, ನಿಮ್ಮಂಥ ಮಕ್ಕಳಿಗೆ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಬರುವ ಚಾನ್ಸ್ ಹೆಚ್ಚು. ಡಿಜಿಟಲ್ ಸಾಧನಗಳಾದ ಕಂಪ್ಯೂಟರ್ಸ್, ಟ್ಯಾಬ್ಲೆಟ್ಸ್, ಇ-ರೀಡರ್ ಮತ್ತು ಮೊಬೈಲ್​ಗಳ ಬಳಕೆ ಅತಿಯಾದಾಗ ಉಂಟಾಗುವ ತೊಂದರೆಯೇ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್). ಡಿಜಿಟಲ್ ಸಾಧನಗಳನ್ನು ನೋಡುವ, ಉಪಯೋಗಿಸುವ ಸಮಯವೂ ಈಗ ದಿನೇ ದಿನೆ ಹೆಚ್ಚುತ್ತಿದೆ ಮತ್ತು ಅದನ್ನು ಬಳಸುವವರ ಮಕ್ಕಳ ಸಂಖ್ಯೆಯೂ ಏರುತ್ತಿದೆ. ಹೀಗಾಗಿ, ದುಡಿಯುವ ವಯಸ್ಕರಲ್ಲದೆ ಓದುವ ಮಕ್ಕಳು ಸಹ ಕಂಪ್ಯೂಟರ್ ವಿಷನ್ ಸಿಂಡ್ರೋಮ್ಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಡಿಜಿಟಲ್ ಪರದೆಗಳನ್ನು ಹೆಚ್ಚು ಸಮಯ ನೋಡುವುದರಿಂದ ಅನನುಕೂಲತೆಯೇ ಹೆಚ್ಚು. ಅಲ್ಲದೆ, ಬಹಳಷ್ಟು ಜನರಲ್ಲಿ ಕಣ್ಣಿನ ತೊಂದರೆ ಕಾಡುತ್ತಿದೆ. ಸಂಶೋಧನೆಯ ಪ್ರಕಾರ, ಶೇ. 50ರಷ್ಟು ಕಂಪ್ಯೂಟರ್ ಬಳಸುವ ಜನರು ಹಲವಾರು ತೊಂದರೆಗಳಿಂದ ಬಳಲುತ್ತಿದ್ದಾರೆ. ಅವುಗಳೆಂದರೆ, ಕಣ್ಣಿನ ನೋವು, ತಲೆನೋವು, ಅಸ್ಪಷ್ಟ ದೃಷ್ಟಿ, ಕಣ್ಣುಗಳು ಶುಷ್ಕ ಆಗುವುದು, ಕುತ್ತಿಗೆ ಮತ್ತು ಭುಜದ ನೋವು. ಕೋಣೆಯಲ್ಲಿ ಅಗತ್ಯಕ್ಕಿಂತ ಕಡಿಮೆ ಬೆಳಕು ಇದ್ದಾಗ, ಕುಳಿತುಕೊಳ್ಳುವ ಭಂಗಿ ಸರಿಯಾಗಿರದಿದ್ದಾಗ, ಅಸಮರ್ಪಕ ದೂರದಿಂದ ವೀಕ್ಷಣೆ ಮಾಡುವುದು, ಡಿಜಿಟಲ್ ಪರದೆಗಳಲ್ಲಿ ಕಡಿಮೆ ಅಥವಾ ಅಗತ್ಯಕ್ಕಿಂತ ಅಧಿಕ ಬೆಳಕಿರುವುದು ಸರಿಯಲ್ಲ. ಇದರಿಂದ ದೃಷ್ಟಿ ದೋಷಗಳು ಹೆಚ್ಚುತ್ತವೆ.

ಕಣ್ಣುಗಳಿಗೆ ಆಯಾಸ

ಮಕ್ಕಳು ಇಂದು ಅತಿಯಾಗಿ ಡಿಜಿಟಲ್ ಸಾಧನಗಳನ್ನು ವೀಕ್ಷಣೆ ಮಾಡುತ್ತಾರೆ. ತುಂಬ ಜನರಿಗೆ ಉದ್ಯೋಗದಲ್ಲಿ ಕಂಪ್ಯೂಟರ್ ಬಳಕೆ ಮಾಡಬೇಕಾಗುವುದರಿಂದ ಅತಿಯಾದ ವೀಕ್ಷಣೆ ಅನಿವಾರ್ಯವಾಗುತ್ತದೆ. ಆದರೆ, ಮಕ್ಕಳು ಮೊಬೈಲ್, ವಿಡಿಯೋ ಗೇಮ್ಳನ್ನು ತುಂಬ ಹೊತ್ತು ನೋಡುವುದರಿಂದ ಕಣ್ಣಿಗೆ ಬಹಳವೇ ಆಯಾಸವಾಗುತ್ತಿರುತ್ತದೆ. ಸ್ಕ್ರೀನ್ ನೋಡುವಾಗ ಕಣ್ಣುಗಳು ನಿರಂತರವಾಗಿ ಅಕ್ಷರಗಳನ್ನೋ ಚಿತ್ರಗಳನ್ನೋ ಕೇಂದ್ರೀಕರಿಸುವ ಕೆಲಸ ಮಾಡುತ್ತಿರುತ್ತವೆ. ಹಿಂದಕ್ಕೆ, ಮುಂದಕ್ಕೆ ಅಲುಗಾಡುತ್ತವೆ. ಒಮ್ಮೊಮ್ಮೆ ಕೀಬೋರ್ಡ್, ನಂತರ ಸ್ಕ್ರೀನ್ ಮೇಲೆ ಓಡುತ್ತಿರುತ್ತವೆ. ಕಣ್ಣಿನೊಳಗಿನ ಸ್ನಾಯುಗಳು ಈ ರೀತಿ ಬದಲಾಗುತ್ತಿರುವ ಚಿತ್ರಣಗಳನ್ನು ಹೊಂದಿಸಿಕೊಂಡು ಮಿದುಳಿಗೆ ನಾವು ಏನನ್ನು ನೋಡುತ್ತಿದ್ದೇವೆ ಎಂಬುದನ್ನು ತಿಳಿಸಿಕೊಡುತ್ತವೆ. ಈ ಎಲ್ಲ ಕೆಲಸ ಮಾಡಲು ಸ್ನಾಯುಗಳಿಗೆ ಅತಿಯಾದ ಪರಿಶ್ರಮವಾಗುತ್ತದೆ. ಕೆಲವೊಮ್ಮೆ ಕಂಪ್ಯೂಟರ್ ಪರದೆಯಲ್ಲಿ ವ್ಯತ್ಯಾಸ ಮತ್ತು ಪ್ರಜ್ವಲಿಸುವಿಕೆ ಉಂಟಾಗುತ್ತದೆ. ಕಾಗದ ಹಾಗೂ ಪುಸ್ತಕದ ವಿಚಾರದಲ್ಲಿ ಹೀಗಾಗುವುದು ಕಡಿಮೆ. ಈ ರೀತಿ ಆದರೆ ಕಣ್ಣಲ್ಲಿ ಒತ್ತಡ ಮತ್ತು ಆಯಾಸವಾಗುತ್ತದೆ. ಇದು ನಿರಂತರವಾದಾಗ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಉಂಟಾಗುತ್ತದೆ. ದೂರದೃಷ್ಟಿ ದೋಷ, ವಿವಿಧ ಕಣ್ಣಿನ ತೊಂದರೆಗಳು ಉಂಟಾಗುತ್ತವೆ. ಅನೇಕ ಮಕ್ಕಳ ಕಣ್ಣಿಗೆ ಕನ್ನಡಕದ ಅಗತ್ಯವಿರುತ್ತದೆ, ಆದರೆ ಅವರಿಗೆ ಅದರ ಬಗ್ಗೆ ಗೊತ್ತಿರುವುದಿಲ್ಲ. ಆಗಲೂ ಸಮಸ್ಯೆ ಬೇಗ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ತಪ್ಪಾದ ಅಥವಾ ಕಡಿಮೆ ಪವರ್ ಇರುವ ಕನ್ನಡಕದ ಬಳಕೆಯಿಂದಲೂ ತೊಂದರೆ ಹೆಚ್ಚಾಗುತ್ತದೆ.‘

ತೊಂದರೆ ತಡೆಗಟ್ಟೋದು ಹೇಗೆ?

  1. ಕೆಲವು ಸರಳವಾದ ಅಭ್ಯಾಸಗಳಿಂದ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ತೊಂದರೆಯನ್ನು ತಡೆಗಟ್ಟಬಹುದು.
  2. ಕಂಪ್ಯೂಟರ್ ಬಳಸುವ ರೂಮಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ಬೆಳಕಿರುವಂತೆ ನೋಡಿಕೊಳ್ಳಬೇಕು. ಇದರಿಂದ ಕಂಪ್ಯೂಟರ್ ನೋಡಲು ಸಹಕಾರಿಯಾಗಿ, ಕಣ್ಣುಗಳಿಗೆ ತೊಂದರೆಯಾಗುವುದಿಲ್ಲ. ಕಂಪ್ಯೂಟರ್ ಪರದೆಯ ಬೆಳಕಿನ ವ್ಯತ್ಯಾಸದಿಂದ ಕಣ್ಣುಗಳಿಗೆ ಹೆಚ್ಚಿನ ಶ್ರಮ ಆಗುವುದಿಲ್ಲ.
  3. ಕಂಪ್ಯೂಟರ್​ನ್ನು ನೋಡುವ ದೂರವು ಸರಿಯಾಗಿರಬೇಕು. ಸರಿಯಾದ ದೂರದಲ್ಲಿ ಕೂತು ನೋಡಿದರೆ ಹೆಚ್ಚಿನ ತೊಂದರೆ ಇರುವುದಿಲ್ಲ.
  4. ಕಂಪ್ಯೂಟರ್ ನೋಡುವಾಗ ಮಧ್ಯೆ ಸ್ವಲ್ಪ ಸಮಯ ನಿರಾಳ ಮಾಡಿಕೊಂಡು ಆಯಾಸವನ್ನು ಕಡಿಮೆ ಮಾಡಿಕೊಳ್ಳಬೇಕು. ಕಂಪ್ಯೂಟರ್ ಗೇಮ್ಂತ ಕಣ್ಣು ಮುಖ್ಯವಲ್ಲವೇ? ಹೀಗಾಗಿ, ಇಷ್ಟು ಎಚ್ಚರಿಕೆ ವಹಿಸಲೇಬೇಕು. ಇಲ್ಲಿ ನೀವು 20-20-20ರ ನಿಯಮವನ್ನೂ ಬಳಸಬಹುದು. ಅಂದರೆ 20 ನಿಮಿಷ ಕೆಲಸ ಮಾಡಿ ನಂತರ 20 ಸೆಕೆಂಡು ಬೇರೆ ಕಡೆನೋಡಿ ಅಥವಾ ಕಣ್ಣನ್ನು ಮಿಟುಕಿಸುತ್ತ 20 ಹೆಜ್ಜೆ ದೂರ ಹೋಗಿ ಕಣ್ಣನ್ನು ನಿರಾಳ ಮಾಡಿಕೊಳ್ಳುವುದು.
  5. ಕುಳಿತುಕೊಳ್ಳುವ ಕುರ್ಚಿ ಅನುಕೂಲಕರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಅನುಕೂಲಕರವಾದ ಕುರ್ಚಿಯಲ್ಲಿ ಕುಳಿತುಕೊಳ್ಳುವುದರಿಂದ ಕುತ್ತಿಗೆ ನೋವು ಮತ್ತು ಭುಜದ ಆಯಾಸವನ್ನು ತಡೆಗಟ್ಟಬಹುದು. ಜತೆಯಲ್ಲಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ತೊಂದರೆಯನ್ನು ತಡೆಗಟ್ಟಬಹುದು.
  6. ಪದೇ ಪದೆ ಮಿಟುಕಾಡಿಸುವುದರಿಂದ ಕಣ್ಣಿನ ಒಳಮೇಲ್ಭಾಗ ಒದ್ದೆಯಾಗುತ್ತಿರುತ್ತದೆ. ಇದರಿಂದ ಶುಷ್ಕ ಕಣ್ಣಿನ ತೊಂದರೆ ಬರುವುದಿಲ್ಲ.