ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿ ಕಾರಿನಿಂದ ಗುದ್ದಿರುವುದಾಗಿ ಬೆದರಿಸಿ ಚಾಲಕನಿಂದ ಬೈಕ್ ಸವಾರರು 15 ಸಾವಿರ ರೂ. ಸುಲಿಗೆ ಮಾಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಬಿಳೇಕಹಳ್ಳಿ ನಿವಾಸಿ ಕಿಶನ್ ಕೆ. ಹವಾಲ್ಕರ್, ದೂರು ಸಲ್ಲಿಸಿದ್ದಾರೆ. ಮೇ 10ರ ಬೆಳಗ್ಗೆ 9.30ರಲ್ಲಿ ಚಿತ್ರಕಲಾ ಪರಿಷತ್‌ನಿಂದ ಕಾರು ಚಾಲನೆ ಮಾಡಿಕೊಂಡು ಬನ್ನೇರುಘಟ್ಟ ರಸ್ತೆ ಅಗ್ನಿಶಾಮಕ ದಳದ ತರಬೇತಿ ಶಾಲೆ ಮುಂದೆ ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಕಾರು ನಿಲ್ಲಿಸುವಂತೆ ಕೂಗಿದರು. ಡೈರಿ ಸರ್ಕಲ್ ಬಳಿ ರಸ್ತೆಬದಿ ಕಾರು ನಿಲ್ಲಿಸಿದಾಗ ನಿಮ್ಹಾನ್ಸ್ ಆಸ್ಪತ್ರೆ ಬಳಿಗೆ ಬರುವಂತೆ ಅಪರಿಚಿತರು ಸೂಚಿಸಿದ್ದರು. ಕಿಶನ್, ಕಾರು ಚಲಾಯಿಸಿಕೊಂಡು ನಿಮ್ಹಾನ್ಸ್ ಮತ್ತು ಕಿದ್ವಾಯಿ ಆಸ್ಪತ್ರೆ ನಡುವೆ ನಿಲ್ಲಿಸಿದ್ದರು. ಅಲ್ಲಿಗೆ ಬೈಕ್‌ನಲ್ಲಿ ಬಂದ ಅಪರಿಚಿತರು, ಜಗಳ ತೆಗೆದು ಕಾರಿನಲ್ಲಿ ಗುದ್ದಿ ಹಾಗೇ ಹೋಗುತ್ತಿದ್ದೀರ.

ಈಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡುವಂತೆ ಬೆದರಿಕೆ ಹಾಕಿದ್ದರು. ಗೊತ್ತಿಲ್ಲದೆ ಡಿಕ್ಕಿ ಹೊಡೆದಿರಬೇಕೆಂದು ಕಿಶನ್, ಒಪ್ಪಿಕೊಂಡಾಗ ಓರ್ವ ಕಾರಿನ ಒಳಗೆ ಬಂದು ಕುಳಿತುಕೊಂಡಿದ್ದಾನೆ. ನಿಮ್ಹಾನ್ಸ್ ಆಸ್ಪತ್ರೆ ಒಳಗೆ ಕಾರು ಚಲಾಯಿಸಿಕೊಂಡು ಹೋದಾಗ ‘ನಾನು ಹುಚ್ಚನಾ… ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗುತ್ತೀದಿಯ’ ಎಂದು ಕಾರಿನಲ್ಲಿ ಜಗಳ ತೆಗೆದಿದ್ದಾನೆ. ಹೆದರಿದ ಕಿಶನ್, ಅಪಘಾತ ಆಗಿರುವುದಿಂದ ಮೊದಲು ಪೊಲೀಸ್ ಠಾಣೆಗೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದಾರೆ. ಅಷ್ಟಕ್ಕೆ ಅಪರಿಚಿತ ವ್ಯಕ್ತಿ, 10-15 ಜನರಿಗೆ ೆನ್ ಮಾಡಿ ಸ್ಥಳಕ್ಕೆ ಬರುವಂತೆ ಕರೆದು ಈ ಕಡೆ ಕಿಶನ್‌ಗೆ ಬೆದರಿಕೆ ಒಡ್ಡಿದ್ದ.
ಭಯಗೊಂಡ ಕಿಶನ್, ಚಿಕಿತ್ಸೆಗೆ ಹಣವನ್ನು ಕೊಡುತ್ತೇನೆ. ೆನ್ ಪೇ ನಂಬರ್ ಕೊಡುವಂತೆ ಕೇಳಿದಾಗ ಅಪರಿಚಿತ ವ್ಯಕ್ತಿ ಕೊಟ್ಟಿಲ್ಲ. ಬದಲಿಗೆ ವಿಲ್ಸನ್ ಗಾರ್ಡನ್‌ನಲ್ಲಿ ಇರುವ ಐಸಿಐಸಿಐ ಬ್ಯಾಂಕ್ ಬಳಿಗೆ ಕರೆದೊಯ್ದು ಎಟಿಎಂನಲ್ಲಿ 15 ಸಾವಿರ ರೂ. ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದಾರೆ. ಇತ್ತ ಭಯಗೊಂಡಿದ್ದ ಕಿಶನ್, ವಿಶ್ರಾಂತಿ ಪಡೆದು ಎಲ್ಲವನ್ನು ಯೋಜನೆ ಮಾಡಿದಾಗ ಅಪರಿಚಿತರು ಸಂಚು ರೂಪಿಸಿ ಭಯಗೊಳಿಸಿ ಸುಲಿಗೆ ಮಾಡಿರುವುದು ಗೊತ್ತಾಗಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.