More

  ಬಾಹ್ಯ ಮತ್ತು ಆಂತರಿಕ ಸಂನ್ಯಾಸ

  ಪರಮಹಂಸ ನುಡಿದೀಪಭಾರತದ ಪರಂಪರೆಯಲ್ಲಿ ಸಾವಿರಾರು ವರುಷಗಳಿಂದ ನಡೆದುಬಂದ ಮಹಾನ್ ಸಂಸ್ಕೃ ಎಂದರೆ ಸಂನ್ಯಾಸ ಧರ್ಮ. ಈ ತೆರನಾದ ಸಂಪೂರ್ಣ ತ್ಯಾಗ ಜೀವನ ಹಾಗೂ ಸಂನ್ಯಾಸ ಧರ್ಮದ ಸ್ವೀಕೃತಿ ಇಡೀ ವಿಶ್ವದಲ್ಲಿಯೇ ಎಲ್ಲಿಯೂ ಕಾಣದು. ಈ ಜಗತ್ತಿನಲ್ಲಿ ಇದ್ದಾಗ್ಯೂ ಪ್ರಾಪಂಚಿಕತೆಯ ಲವಶೇಷವೂ ಇಲ್ಲದೆ ಪರಮಾದ್ಭುತ ಜೀವನವನ್ನು ಪಡೆದು ಯಶಸ್ವಿಯಾಗಿ ಸಂನ್ಯಾಸಿ ಜೀವನ ನಡೆಸಿದ ಮಹಾನ್ ಆತ್ಮಸ್ಥರು, ತ್ಯಾಗೀಶ್ವರರು, ಮಹಾನ್ ತಪಸ್ವಿಗಳು ಅಪಾರ. ಉದಾಹರಣೆಗಾಗಿ ಶಂಕರಾಚಾರ್ಯರು, ರಾಮಾನು ಜಾಚಾರ್ಯರು, ಮಧ್ವಾಚಾರ್ಯರು, ಭಗವಾನ್ ಮಹಾವೀರ, ಭಗವಾನ್ ಬುದ್ಧ, ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು ಹೀಗೆ ಶ್ರೇಷ್ಠತಮವಾದ ಸಂನ್ಯಾಸ ಪರಂಪರೆ ಯನ್ನು ನಾವು ಕಾಣಬಹುದು. ಸಂನ್ಯಾಸ ಎಂದರೆ ಸಮ್ಯಕ್ ನ್ಯಾಸಃ- ಅಂದರೆ ಸಂಪೂರ್ಣವಾಗಿ ತೊರೆಯುವುದು ಎಂದರ್ಥ. ಈ ಪ್ರಪಂಚದ ಎಲ್ಲ ಆಸೆ ಲಾಲಸೆಗಳನ್ನು ಸಂಪೂರ್ಣವಾಗಿ ತೊರೆದು ಆತ್ಮಸಾಕ್ಷಾತ್ಕಾರದ ಪಥದಲ್ಲಿ ಅಹರ್ನಿಶಿ ತೊಡಗಿಸಿಕೊಳ್ಳುವುದು ಎಂದರ್ಥ.

  ಭಗವಾನ್ ರಾಮಕೃಷ್ಣ ಪರಮಹಂಸರು ತಮ್ಮ ಬಳಿ ಸಾರುತ್ತಿದ್ದ ಭಕ್ತರಿಗೆ ಅನೇಕ ಸಂದರ್ಭಗಳಲ್ಲಿ ಮತ್ತೊಂದು ಅಂಶವನ್ನು ಪದೇ ಪದೇ ವಿವರಿಸುತ್ತಿದ್ದರು. ಅದೇ ಬಾಹ್ಯ-ಆಂತರಿಕ ಸಂನ್ಯಾಸ. ನಮಗೆ ಸಂನ್ಯಾಸ ಎಂದಾಕ್ಷಣ ಕಾವೀಧಾರಿ ಕಣ್ಮುಂದೆ ಬರುವುದು ಸಹಜ. ಆದರೆ ಪರಮಹಂಸರು ಹೇಳುವುದು ಹೀಗೆ: ಬಾಹ್ಯ ಸಂನ್ಯಾಸ ಅಂದರೆ ಯಾರು ಬೇಕಾದರೂ, ಎಲ್ಲಿ ಬೇಕಾದರೂ, ನೋಡಲು ಸಂನ್ಯಾಸಿ ಎಂತೆಂದಿದ್ದರೆ ಸಾಕು ಎಂಬ ಮನೋಧರ್ಮದಲ್ಲಿರುವವರು. ಆದರೆ ಆಂತರಿಕ ಸಂನ್ಯಾಸವನ್ನು ಪಡೆಯುವುದು ಸುಲಭವಲ್ಲ. ಅದಕ್ಕೆ ಅನುಷ್ಠಾನ, ತಪಸ್ಸು, ಸ್ವಾಧ್ಯಾಯ, ತ್ಯಾಗ, ವೈರಾಗ್ಯ ಮುಂತಾದ ಹಂತಗಳನ್ನು ಅರಿತು ಅಳವಡಿಸಿಕೊಂಡು ನಿರಂತರವಾದ ಸಾಧನೆಯಲ್ಲಿ ನಿರತನಾಗಬೇಕು. ಇಲ್ಲಿ ಋಗ್ವೇದದ ಸಂನ್ಯಾಸ ಸೂಕ್ತ ಶ್ಲೋಕವನ್ನು ಅರಿಯುವುದು ಅತ್ಯಂತ ಸಮಂಜಸ. ಋಗ್ವೇದದಲ್ಲಿ, ಕೈವಲ್ಯ ಉಪನಿಷತ್ತಿನಲ್ಲಿ ಹಾಗೂ ಮಹಾನಾರಾಯಣ ಉಪನಿಷತ್ತಿನಲ್ಲಿ ಬರುವ ಈ ಮಹಾನ್ ವಾಕ್ಯಗಳೇ ಸಂನ್ಯಾಸ ಧರ್ಮದ ಅಮೂಲ್ಯವಾದ ಅಡಿಪಾಯ.

  ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೆ ಅಮೃತತ್ವ
  ಮಾನಶುಃ | ಪರೇಣ ನಾಕಂ ನಿಹಿತಂ ಗುಹಾಯಾಂ
  ವಿಭ್ರಾಜದೇತತ್ ಯತಯೋ ವಿಶಂತಿ ||

  (ಮಹಾನ್ ಕಾರ್ಯಗಳಿಂದಲ್ಲ, ಸಂತತಿ ಮೂಲಕ ಅಲ್ಲ, ಸಂಪತ್ತಿನ ಮೂಲಕ ಅಲ್ಲ, ಆದರೆ ತ್ಯಾಗದಿಂದ ಕೆಲವರು ಅಮರತ್ವವನ್ನು ಪಡೆದಿದ್ದಾರೆ. ಹೃದಯದಲ್ಲಿ ಅಡಗಿರುವ ಮತ್ತು ಪ್ರಕಾಶಮಾನವಾದ ಮಾರ್ಗವನ್ನು ಪಥಿಸುವ ಸಾಧಕರು ಅದನ್ನು ಹುಡುಕಿ ಪಡೆಯುತ್ತಾರೆ).

  ಪರಮಹಂಸರ ಭೋಧನೆಯಲ್ಲಿ ಅಂತಃ ಸಂನ್ಯಾಸಿ ಅತ್ಯಂತ ಮುಖ್ಯ. ಈ ಅಂಶವನ್ನು ಸರಳವಾಗಿ ಅವರು ತಿಳಿಸುತ್ತಾರೆ. ಸಂಸಾರಿಗಳಿಗೂ ಈ ತೆರನಾದ ಮನಃಸ್ಥಿತಿಯನ್ನು, ತ್ಯಾಗ-ಜೀವನವನ್ನು ಪಥಿಸಲು ಸ್ವಾತಂತ್ರ್ಯವಿದೆ. ಕೇವಲ ಸಂನ್ಯಾಸಿ ಎಂಬ ಗುಂಪಿಗೆ ಮಾತ್ರ ಸಾಕ್ಷಾತ್ಕಾರ ಸೀಮಿತವಲ್ಲ. ಸಂಸಾರಿ-ಸಂನ್ಯಾಸಿ ಈ ಎರಡೂ ಪಂಗಡದವರಿಗೂ ಸಾಕ್ಷಾತ್ಕಾರ ಪಡೆಯುವ ಹಕ್ಕಿದೆ. ಆದರೆ ಆರಿಸಿಕೊಳ್ಳುವ ಮಾರ್ಗ ಅತ್ಯಂತ ಮುಖ್ಯ. ಸಂನ್ಯಾಸಿ-ಸಂಸಾರಿಗಳಲ್ಲಿ ಸಾಕ್ಷಾತ್ಕಾರದ ಅರಿವು ಉಂಟಾದೊಡೆ ಏನು ವ್ಯತ್ಯಾಸ ಕಾಣುತ್ತೇವೆ? ಇದಕ್ಕೆ ಉತ್ತರ- ಇವರೀರ್ವರೂ ಒಂದೇ. ಅಂದರೆ ಸಾಕ್ಷಾತ್ಕಾರದ ಹಂತವೂ ಒಂದೇ. ಅರ್ಥಾತ್ ಭಗವದ್ ಶಕ್ತಿ ಒಂದೇ, ಸಾಕ್ಷಾತ್ಕಾರವೂ ಒಂದೇ, ಮಾರ್ಗ ಬೇರೆ ಇರಬಹುದು. ಇದೇ ಧಾಟಿಯಲ್ಲಿ ಪರಮಹಂಸರು ಹೇಳುತ್ತಾರೆ- ಸರ್ವಸಂಗ ಪರಿತ್ಯಾಗಿ ಅಂದರೆ ಕೇವಲ ಪ್ರಾಪಂಚಿಕ ವಸ್ತುಗಳನ್ನು ತ್ಯಜಿಸುವುದಲ್ಲ, ಭಗವದ್ ವ್ಯಾಕುಲತೆಯೂ ಇರಬೇಕು. ನಿಜವಾದ ತ್ಯಾಗ ಮನೋಭಾವನೆಯಲ್ಲಿ ಸರ್ವ ಸಂಗ ಪರಿತ್ಯಾಗಿಯ ಜೀವನವನ್ನು ನಿಷ್ಠೆ, ಶ್ರದ್ಧೆ ಮತ್ತು ನಿರಂತರವಾಗಿ ಸಂನ್ಯಾಸ ಧರ್ಮವನ್ನು ಪಾಲಿಸಿದ್ದೇ ಆದಲ್ಲಿ ಪ್ರಾಪಂಚಿಕ ವಿಷಯವಸ್ತುಗಳು ತಾನೇ ತಾನಾಗಿಯೇ ಕಳಚಿಕೊಳ್ಳುತ್ತವೆ. ಇದಕ್ಕೆ ರಾಮಕೃಷ್ಣರು ತೆಂಗಿನ ಗರಿಯ ಉದಾಹರಣೆ ನೀಡುತ್ತಾರೆ. ತೆಂಗಿನ ಗರಿ ಬೆಳೆದ ನಂತರ ತನ್ನಷ್ಟಕ್ಕೆ ತಾನೇ ಉದುರಿ ಹೋಗುತ್ತದೆ, ಹಾಗೆಯೇ ಮನಸ್ಸು ಪರಿಪಕ್ವವಾಗುತ್ತಾ ಇರುವ ಸಂದರ್ಭದಲ್ಲಿ ಅರಿಷಡ್ವರ್ಗಗಳು ಹಾಗೂ ಪ್ರಾಪಂಚಿಕತೆಯ ವಿಚಾರಗಳು ತನ್ನಷ್ಟಕ್ಕೆ ಕಳಚಿಕೊಳ್ಳುತ್ತವೆ. ಹೇಗೆಂದರೆ -ಉತ್ತರ ದಿಕ್ಕಿನೆಡೆಗೆ ಸಾಗುತ್ತಾ ಹೋದಲ್ಲಿ ದಕ್ಷಿಣ ದಿಕ್ಕನ್ನು ನೂಕಬೇಕಿಲ್ಲ, ತಾನೇ ತಾನಾಗಿಯೇ ದೂರ ದೂರ ಉಳಿಯುತ್ತದೆಯಲ್ಲ ಹಾಗೆ. ಆಂತರಿಕ ತ್ಯಾಗ ಬಹಳ ಮುಖ್ಯ. ಈ ಸ್ಥಿತಿಯನ್ನು ನಿಜವಾದ ಅರ್ಥದಲ್ಲಿ ಪರಿಪೂರ್ಣವಾಗಿ ಪಾಲಿಸಿದಲ್ಲಿ ಸಂನ್ಯಾಸಿ-ಸಂಸಾರಿ ಈ ಎರಡೂ ಗೌಣವಾಗಿಬಿಡುತ್ತದೆ. ಭಗವದ್ ಸಾಕ್ಷಾತ್ಕಾರ, ಆತ್ಮಸಾಕ್ಷಾತ್ಕಾರ ಮಾರ್ಗವನ್ನು ಅರಿತು ಮುಂದುವರಿದಲ್ಲಿ ಮಾತ್ರ ಮಹಾಬೋಧಿ, ನಿರ್ವಾಣ, ಸ್ಥಿತಿಯನ್ನುಪಡೆಯಬಹುದು.

  ಭಾರತ-ಆಸೀಸ್​ ಟಿ20 ಪಂದ್ಯ; ಟೀಂ ಇಂಡಿಯಾ ಕೂಡಿಕೊಂಡ ಸ್ಪೋಟಕ ಬ್ಯಾಟ್ಸ್​ಮನ್​

  ಮಧ್ಯಾಹ್ನ ಮಲಗುವ ಅಭ್ಯಾಸ ಇದ್ಯಾ? ಹಾಗಿದ್ರೆ ನೀವು ಈ ಬಗ್ಗೆ ತಿಳಿಯುವುದು ಅವಶ್ಯಕ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts