ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿ ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ರಾಜಕಿಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವಾಗಲೇ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಹಾಲಿ ಅಧ್ಯಕ್ಷ ಅನ್ವರ್ ಬಾಷಾ ಅವರು ಮಂಡಳಿ ಮಂಜೂರು ಮಾಡಿದ್ದ ಜಮೀನನ್ನು ಮರು ಪೋಡಿ ಮಾಡಿಸಿಕೊಂಡು ಸ್ವಂತಕ್ಕೆ ಬಳಸಿಕೊಂಡಿದ್ದಾರೆಂಬ ದೂರು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದೆ.
ಚಿತ್ರದುರ್ಗ ತಾಲ್ಲೂಕು ಕಸಬಾ ಹೋಬಳಿಯ ಅಗಸನಕಲ್ಲು ಗ್ರಾಮದ ಸರ್ವೆ ಸಂಖ್ಯೆ 11ರಲ್ಲಿ ಆಗಿನ ವಿಶೇಷ ಜಿಲ್ಲಾಧಿಕಾರಿಯವರು 6 ಎಕರೆ ಜಮೀನನ್ನು ಮುಸ್ಲಿಂ ಜನಾಂಗದವರ ಖಬರಸ್ಥಾನಕ್ಕೆ ಮಂಜೂರು (1987ರಲ್ಲಿ) ಮಾಡಿದ್ದರು. ಈ ಜಮೀನನ್ನು ಕಾನೂನುಬಾಹಿರವಾಗಿ ಹೊಸ ಸರ್ವೆ ಸಂಖ್ಯೆ 25 ಎಂದು ಮರು ಪೋಡಿ ದುರಸ್ತಿ ಮಾಡಿಸಿ ಮಂಡಳಿಯ ಅಧ್ಯಕ್ಷ ಅನ್ವರ್ ಬಾಷಾ ಸದರಿ ಸ್ವತ್ತನ್ನು ಅತಿಕ್ರಮಿಸಿಕೊಂಡು ಸ್ವಂತ ಬಂಗಲೆ ಹಾಗೂ ಶಾಲಾ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಬಿಜೆಪಿ ಮುಖಂಡ ಎನ್. ಆರ್.ರಮೇಶ್ ಗುರುವಾರ ತಿಳಿಸಿದ್ದಾರೆ.
10 ಕೋಟಿ ರೂ. ಮೊತ್ತದ ಆಸ್ತಿ:
ಮುಸ್ಲಿಂ ಸಮುದಾಯದ ಸ್ಮಶಾನಕ್ಕೆಂದು ಸರ್ಕಾರ ಅಧಿಸೂಚನೆ ಹೊರಡಿಸಿರುವ 6 ಎಕರೆ ಜಮೀನು ಅಂದಾಜು 10 ಕೋಟಿ ರೂ. ಗೂ ಹೆಚ್ಚು ಮೌಲ್ಯದ್ದಾಗಿದೆ. ಇಂತಹ ಸ್ವತ್ತನ್ನು ಸಮುದಾಯದ ಏಳಿಗೆಗೆ ಬಳಸಲು ಕ್ರಮ ಕೈಗೊಳ್ಳದೆ ಮಂಡಳಿಯ ಅಧ್ಯಕ್ಷರೇ ಕಬಳಿಸಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ಇದು ಬೇಲಿಯೇ ಎದ್ದು ಹೊಲವನ್ನು ಮೇಯ್ದ ಕಥೆಯನ್ನು ನೆನಪಿಸುತ್ತದೆ. ವಕ್ಫ್ ನಿಯಮದಂತೆ ಮಂಜೂರಾತಿ ನೀಡಿದ ಬಳಿಕ ಅದನ್ನು ಖಾಸಗಿ ಸ್ವತ್ತಾಗಿ ಬಳಸಿಕೊಳ್ಳಲು ಅವಕಾಶ ಇಲ್ಲ. ಆದರೂ, ಮಂಡಳಿಯ ಹಾಲಿ ಅಧ್ಯಕ್ಷರು ಬೆಲೆಬಾಳುವ ಜಮೀನು ಕಬಳಿಸಿರುವುದನ್ನು ಮರುವಶಕ್ಕೆ ಪಡೆದು ವಕ್ಫ್‌ಗೆ ಒಳಪಡಿಸಬೇಕು. ಇದಕ್ಕೆ ಕಾರಣವಾಗಿರುವ ಮಂಡಳಿಯ ಅಧ್ಯಕ್ಷ ಹಾಗೂ ಭೂ ಕಬಳಿಕೆಗೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತ್ಯೇಕವಾಗಿ ಪತ್ರ ಬರೆದು ಆಗ್ರಹಿಸಿರುವುದಾಗಿ ಅವರು ತಿಳಿಸಿದರು.
ಸದರಿ ಪ್ರಕರಣದಲ್ಲಿ ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳದಿದ್ದಲ್ಲಿ ಸದ್ಯದಲ್ಲೇ ಕೇಂದ್ರ ವಕ್ಫ್ ಮಂಡಳಿಗೂ ದೂರು ನೀಡುವುದಾಗಿ ಎನ್. ಆರ್.ರಮೇಶ್ ವಿವರಿಸಿದರು.