ಪೈಲ್ವಾನ್​ ಸಿನಿಮಾ ಪೈರಸಿ ಮಾಡಿ ಸಿಕ್ಕಿಬಿದ್ದಿರುವ ಆರೋಪಿ ಹೇಳಿದ್ದು ಸ್ಫೋಟಕ ಸುದ್ದಿ, ಯಾರನ್ನೋ ಮೆಚ್ಚಿಸಲು ಪೈರಸಿ ಮಾಡಿದ್ದನಂತೆ!

ಬೆಂಗಳೂರು: ಕಿಚ್ಚ ಸುದೀಪ್​ ಅಭಿನಯದ ಬಹುನೀರಿಕ್ಷಿತ “ಪೈಲ್ವಾನ್”​ ಚಿತ್ರವನ್ನು ಪೈರಸಿ ಮಾಡಿದ ಆರೋಪದಲ್ಲಿ ಬಂಧನವಾಗಿರುವ ಯುವಕ ಇದೀಗ ಪೈರಸಿ ಮಾಡಿದ್ದು ಯಾಕೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

ಈ ಕುರಿತು ದಿಗ್ವಿಜಯ ನ್ಯೂಸ್‌ಗೆ ಇಂಚಿಂಚು ಮಾಹಿತಿ ಲಭ್ಯವಾಗಿದ್ದು, ತನಿಖೆ ವೇಳೆ ಆರೋಪಿ ರಾಕೇಶ್‌ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಒಂದು ವರ್ಗವನ್ನು ಮೆಚ್ಚಿಸೋಕೆ ಪೈರಸಿ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ದರ್ಶನ್ ಫ್ಯಾನ್ಸ್‌ಗಳನ್ನು ಮೆಚ್ಚಿಸುವ ಸಲುವಾಗಿ ಪೈಲ್ವಾನ್‌ ಚಿತ್ರವನ್ನು ಪೈರಸಿ ಮಾಡಿದ್ದಾಗ ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

ಪೈರಸಿ ಮಾಡಿದ್ದ ಪುಡಾರಿ ಸಿಕ್ಕಿಬಿದ್ದಿದ್ದೇ ರೋಚಕ

ಪೈಲ್ವಾನ್‌ ಸಿನಿಮಾ ಪೈರಸಿ ಆಗಿದೆ ಎಂದು ದೂರು ದಾಖಲಾಗಿ ಎಫ್​ಐಆರ್ ದಾಖಲಾಗುತ್ತಿದ್ದಂತೆ ಸಿಸಿಬಿ ತಂಡ ಫಿಲ್ಡ್‌ಗೆ ಇಳಿದಿತ್ತು. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ನಡೆದಿದ್ದ ತನಿಖೆಯಲ್ಲಿ ಮೊದಲಿಗೆ ಆರೋಪಿ ರಾಕೇಶ್​ ಫೇಸ್‌ಬುಕ್‌ ಐಡಿಯನ್ನು ಪರಿಶೀಲನೆ ನಡೆಸಲಾಗಿತ್ತು. ಬಳಿಕ ಐಪಿ ಅಡ್ರೆಸ್ ಹಾಗೂ ಆರೋಪಿ ರಾಕೇಶ್ ಮೊಬೈಲ್​ ನಂಬರ್​ ಸಂಗ್ರಹಿಸಲಾಯಿತು. ನಿನ್ನೆ ಇಡೀ ದಿನ ಆರೋಪಿ ರಾಕೇಶ್ ಫೋನ್​ ನಂಬರ್ ಲೊಕೇಶನ್​ ಸರ್ಚ್ ಮಾಡಲಾಗಿತ್ತು. ಕೊನೆಗೆ ದಾಬಸ್​ಪೇಟೆ ಬಳಿ ಲೈವ್ ಲೊಕೇಶನ್ ಪಡೆದಿದ್ದ ಸಿಸಿಬಿ ತಂಡ ಅಲ್ಲಿಯೇ ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಿದ್ದರು.

ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಸಂಪೂರ್ಣ ಸಿನಿಮಾವನ್ನು ಪೈರಸಿ ಮಾಡಲಾಗಿತ್ತು. ಇದನ್ನು ವೈರಲ್‌ ಮಾಡಿದ್ದವರ ವಿರುದ್ಧ ಪೈಲ್ವಾನ್ ಚಿತ್ರದ ನಿರ್ಮಾಪಕಿ‌ ಸ್ವಪ್ನ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *