ಕೆಮಿಕಲ್ ಕುಲುಕಿದ್ದೇ ಸ್ಪೋಟಕ್ಕೆ ಕಾರಣ

ಬೆಂಗಳೂರು: ಶಾಸಕ ಮುನಿರತ್ನ ಮನೆ ಮುಂಭಾಗ ಸ್ಫೋಟ ಸಂಭವಿಸಿ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಸಾಯನಿಕವನ್ನು ಜೋರಾಗಿ ಅಲುಗಾಡಿಸಿರುವುದೇ ಸ್ಪೋಟಕ್ಕೆ ಕಾರಣ ಎಂಬುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.

ಸ್ಪೋಟಕ್ಕೆ ಕಾರಣವಾದ ರಾಸಾಯನಿಕದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್) ಸಿಬ್ಬಂದಿ ಪರಿಶೀಲಿಸಿದಾಗ ಅವಧಿ ಮೀರಿದ ಮಿಥೈಲ್ ಇಥೈಲ್ ಕೆಟೋನ್ ಪರಾಕ್ಸೈಡ್ ಎಂಬ ರಾಸಾಯನಿಕ ತುಂಬಿದ್ದ ಕ್ಯಾನ್​ನ್ನು ವೆಂಕಟೇಶ್ ಜೋರಾಗಿ ಕುಲುಕಿದ ಹಿನ್ನೆಲೆಯಲ್ಲಿ ಸ್ಪೋಟಗೊಂಡಿದೆ ಎಂಬುದು ಕಂಡುಬಂದಿದೆ. ಅಲ್ಲದೆ, ಈ ರಾಸಾಯನಿಕವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ, ಬೇಕಾಬಿಟ್ಟಿ ಉಪಯೋಗಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ದ್ರವ ರೂಪದ ರಾಸಾಯನಿಕ ಬಹಳ ಅಪಾಯಕಾರಿಯಾಗಿದ್ದು, ಅದರ ಬಳಕೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಘನ ರೂಪ ಪಡೆದಿತ್ತು ಎನ್ನಲಾಗಿದೆ.

ಸ್ಫೋಟ ಘಟನೆ ಗಮನಿಸಿದ ಮುನಿರತ್ನ ಕಾರು ಚಾಲಕ ಪ್ರಸನ್ನ ಹೇಳಿಕೆ ಪಡೆದಿರುವ ವೈಯಾಲಿಕಾವಲ್ ಪೊಲೀಸರು, ಆತನ ಹೇಳಿಕೆ ಆಧರಿಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರ್ಘಟನೆಗೆ ವೆಂಕಟೇಶ್ ನಿರ್ಲಕ್ಷ್ಯವೇ ಕಾರಣ ಎಂಬುದು ಕಂಡುಬಂದಿದೆ. ಸ್ಪೋಟಗೊಂಡಿರುವುದನ್ನು ಸ್ಥಳೀಯ ಕೆಲ ವ್ಯಕ್ತಿಗಳು ಗಮನಿಸಿದ್ದು, ಅವರಿಂದಲೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರತ್ಯಕ್ಷದರ್ಶಿ ಹೇಳಿಕೆ: ಕಳೆದ 10 ವರ್ಷಗಳಿಂದ ಮುನಿರತ್ನ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಕಾರು ಸ್ವಚ್ಚಗೊಳಿಸುತ್ತಿದ್ದಾಗ ವೆಂಕಟೇಶ್ ಅವರು ಮುನಿರತ್ನ ಕಚೇರಿಯ ಕಾರು ರ್ಪಾಂಗ್ ಪ್ರದೇಶದ ಮುಂಭಾಗದ ಕಿರಿದಾದ ರಸ್ತೆಯಲ್ಲಿ ಹೋಗುತ್ತಿದ್ದರು. ಕೈಯಲ್ಲಿ 30 ಲೀ.ನ ನೀಲಿ ಬಣ್ಣದ ಕ್ಯಾನ್ ಹಿಡಿದುಕೊಂಡು ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದರು. ಕೆಲ ಕ್ಷಣದಲ್ಲೇ ಜೋರಾಗಿ ಸ್ಪೋಟಗೊಂಡ ಶಬ್ದ ಕೇಳಿಬಂದಿತ್ತು. ಆಗ ನಾನು ಭಯಗೊಂಡು ಕಾರಿನ ಕೆಳಗೆ ಕುಳಿತುಕೊಂಡೆ. ನಂತರ ಸ್ಫೋಟ ಸ್ಥಳದ ಬಳಿ ಹೋದಾಗ ಕಾರ್ ರ್ಪಾಂಗ್ ಸ್ಥಳದ ಮುಂಭಾಗ ರಕ್ತಸಿಕ್ತವಾಗಿ ಛಿದ್ರಗೊಂಡ ಸ್ಥಿತಿಯಲ್ಲಿ ವೆಂಕಟೇಶ್ ದೇಹವಿತ್ತು. ಕೂಡಲೇ ಅಕ್ಕಪಕ್ಕದವರು ಬಂದರು. ಸ್ಥಳಕ್ಕೆ ಬಂದ ಶಾಸಕರ ಗನ್​ವ್ಯಾನ್​ಗೆ ನಡೆದ ಘಟನೆ ವಿವರಿಸಿದೆ ಎಂದು ಪ್ರಸನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೃತದೇಹದಲ್ಲಿ ಅದೇ ರಾಸಾಯನಿಕ

ಎಫ್​ಎಸ್​ಎಲ್ ಸಿಬ್ಬಂದಿ ವೆಂಕಟೇಶ್ ಶವ ಪರಿಶೀಲಿಸಿದಾಗ ಅವರ ದೇಹದಲ್ಲಿ ಇದೇ ರಾಸಾಯನಿಕ ಪತ್ತೆಯಾಗಿದೆ. ಸಮೀಪದ ಸಿಸಿ ಕ್ಯಾಮರಾ ಪರಿಶೀಲಿಸಲಾಗಿದ್ದು, ಬೇರೆ ಯಾವುದೇ ಚಟುವಟಿಕೆಗಳಿಂದ ದುರ್ಘಟನೆ ಸಂಭವಿಸಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *