ವಿಟ್ಲ ಪೇಟೆಯಲ್ಲಿ ಸ್ಫೋಟ!

ವಿಟ್ಲ: ಪೇಟೆ ಹೃದಯ ಭಾಗದಲ್ಲಿ ಶನಿವಾರ ಸಾಯಂಕಾಲ ಏಕಾಏಕಿಯಾಗಿ ಸ್ಫೋಟಕ ಬಳಸಿ ಕಲ್ಲು ಒಡೆಯಲು ಯತ್ನಿಸಿದ್ದರಿಂದ ಆಸುಪಾಸಿನ ಕಟ್ಟಡಗಳಲ್ಲಿ ಭೂಕಂಪನದ ಅನುಭವಾಗಿ ಅಂಗಡಿಗಳಿಂದ ಜನರು ರಸ್ತೆಗೆ ಓಡಿ ಬಂದಿದ್ದಾರೆ. ಹಲವು ವಾಹನ ಹಾಗೂ ಅಂಗಡಿಗಳ ಮೇಲೆ ಕಲ್ಲಿನ ಚೂರುಗಳು ಅಪ್ಪಳಿಸಿದೆ.

ವಿಟ್ಲ ಸಂತೆ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಹಲವು ದಿನದಿಂದ ಪಂಚಾಯಿತಿ ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಸಂದರ್ಭ ಕಪ್ಪು ಶಿಲೆಕಲ್ಲು ಸಿಕ್ಕಿದ್ದು, ಇದನ್ನು ಹಿಟಾಚಿ ಬ್ರೇಕರ್ ಬಳಸಿ ತೆಗೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಾಗಾಗಿ ಶನಿವಾರ ಸ್ಫೋಟಕ ಬಳಸಿ ಕಲ್ಲು ಒಡೆಯಲು ಯತ್ನಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಅಂಗಡಿ, ಕಟ್ಟಡ ಮಾಲೀಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಅರ್ಧ ತಾಸಿನಷ್ಟು ತಡವಾಗಿ ಬಂದಿದ್ದಾರೆ. ಇದರಿಂದ ಸ್ಫೋಟಕ ಬಳಕೆ ಮಾಡಿದವರು ಯಾವುದೇ ಕುರುಹು ಸಿಗದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆಂಬುದು ಪ್ರತ್ಯಕ್ಷದರ್ಶಿಗಳ ಆರೋಪ.

ಜಿಲ್ಲಾಧಿಕಾರಿಗೆ ದೂರು: ಕೆಲದಿನಗಳ ಹಿಂದೆ ಕಲ್ಲು ತೆರವು ಮಾಡಲು ಈ ಸ್ಥಳದಲ್ಲಿ ತೋಟೆ ಬಳಕೆ ಮಾಡಲಾಗಿತ್ತೆನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಅಂಗಡಿ ಮಾಲೀಕರು ಪಂಚಾಯಿತಿಗೆ ದೂರು ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅವರ ಸೂಚನೆ ಬಳಿಕ ಬ್ರೇಕರ್ ಬಳಕೆ ಮಾಡಿ ತೆರವಿಗೆ ಪ್ರಯತ್ನ ಮಾಡಲಾಗುತ್ತಿತ್ತು.

ಸ್ಥಳ ಪರಿಶೀಲನೆ: ವಿಟ್ಲ ಪೊಲೀಸ್ ಠಾಣೆ ಉಪನಿರೀಕ್ಷಕ ಯಲ್ಲಪ್ಪ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ಯಾವುದೇ ಸ್ಫೋಟಕ ಬಳಕೆಯಾದ ಕುರುಹು ಪತ್ತೆಯಾಗಿಲ್ಲ ಎನ್ನಲಾಗಿದೆ. ಪಂಚಾಯಿತಿ ಪರವಾನಗಿ ಇಲ್ಲದೆ ಯಾವುದೇ ಕಾಮಗಾರಿ ನಡೆಸದಂತೆ ಸ್ಥಳಕ್ಕೆ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *