ಶೋಷಣೆರಹಿತ ಸಮಾಜ ಅವಶ್ಯ

ಗುಳೇದಗುಡ್ಡ:ವರ್ಗ, ಜಾತಿ, ಶೋಷಣೆರಹಿತ ಸಮಾಜ ನಮ್ಮದಾಗಬೇಕು. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ ಸಮಾಜ ನಿರ್ವಣವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 33ನೇ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ 6ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ದೇವರು ಮಾಡಿದ್ದಲ್ಲ, ಮನುಷ್ಯರು ಮಾಡಿದ್ದು. ಶೋಷಣೆಗಾಗಿ ಜಾತಿ ವ್ಯವಸ್ಥೆ ಜಾರಿಗೆ ಬಂತು. ಕಾಯಕ ಜೀವಿಗಳನ್ನು ಶೂದ್ರರು ಎಂದು ಶೋಷಿಸಲಾಯಿತು ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಸಮಾಜದ ಕನಸು ಕಂಡಿದ್ದರು. ಇಂದಿಗೂ ಸಮಾಜದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ, ಶೋಷಣೆ ಮುಂದುವರಿದಿದೆ. ಸಮಾಜದಲ್ಲಿ ಇನ್ನೂ ಬದಲಾವಣೆಯಾಗಿಲ್ಲ. ಚಲನೆ ಇಲ್ಲದ ಸಮಾಜ ನಮ್ಮದಾಗಿದೆ. ಇಂತಹ ಸಮಯದಲ್ಲಿ ಶರಣ ಸಂಸ್ಕೃತಿ ಮುನ್ನಡೆಸಿಕೊಂಡು ಸಮಾಜದಲ್ಲಿನ ಅಸಮಾನತೆ, ಶೋಷಣೆ ಹೋಗಲಾಡಿಸಲು ಗುರುಸಿದ್ದೇಶ್ವರ ಮಠ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಜಾತಿ, ವರ್ಗ ರಹಿತ ಸಮಾಜ ಕಲ್ಪನೆ ಸಾಕಾರಗೊಳಿಸಲು ಗುರುಸಿದ್ದೇಶ್ವರ ಮಠದ ಶ್ರೀಗಳು ಶ್ರಮಿಸುತ್ತಿದ್ದಾರೆ ಎಂದರು. ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು ಮಾತನಾಡಿ, ಶ್ರೀಮಠದ ಗುರುಗಳ ಪುಣ್ಯಾರಾಧನೆ ಮೂಲಕ ಸಮಾಜದಲ್ಲಿ ಸಮಾನತೆ, ಮಾನವೀಯತೆ, ಧಾರ್ವಿುಕ ಸ್ವಾತಂತ್ರ್ಯ ಅರಿವು ಮೂಡಿಸುವ ಕೈಂಕರ್ಯವನ್ನು 33 ವರ್ಷಗಳಿಂದ ಮಾಡಲಾಗುತ್ತಿದೆ ಎಂದರು.

ಚಂದ್ರಶೇಖರ ವಸ್ತ್ರದ ಉಪನ್ಯಾಸ ನೀಡಿದರು. ಮೈಸೂರಿನ ಜ್ಞಾನಪ್ರಕಾಶ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ, ಡಾ.ದೇವರಾಜ ಪಾಟೀಲ, ರವೀಂದ್ರ ಕಲ್ಬುರ್ಗಿ, ಮಹೇಶ ಹೊಸಗೌಡರ, ಹೊಳಬಸು ಶೆಟ್ಟರ, ರಾಜು ಜವಳಿ, ಭೀಮಸೇನ ಚಿಮ್ಮನಕಟ್ಟಿ, ಸಂಜಯ ಬರಗುಂಡಿ, ಡಾ. ಬಸವರಾಜ ಕೋಲಾರ, ಅಡಿವೆಪ್ಪ ತಾಂಡೂರ, ಶಿವಾನಂದ ಎಣ್ಣಿ, ಈಶ್ವರಪ್ಪ ರಾಜನಾಳ ಇತರರಿದ್ದರು.