ಮಿಥ್ಯಗಳಿಗೆ ಮಹತ್ವದಿಂದ ಭವಿಷ್ಯಕ್ಕೆ ಧಕ್ಕೆ

ಚಿಕ್ಕಮಗಳೂರು: ಆಧುನಿಕ ಕಾಲದಲ್ಲಿ ಮಹಿಳೆ ಬೆಳೆಯಲು ಎಲ್ಲ ಕ್ಷೇತ್ರಗಳಲ್ಲಿ ಅವಕಾಶವಿದೆ. ಆದರೆ, ಮೀ ಟು ನಂತಹ ಅಭಿಯಾನದಲ್ಲಿ ಸತ್ಯವಲ್ಲದ ಕೆಲ ಪ್ರಕರಣಗಳಿಗೆ ಮಹತ್ವ ಕೊಟ್ಟರೆ ಮಹಿಳೆಗೆ ಹಲವು ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಡಿಮೆಯಾಗುವ ಸಾಧ್ಯತೆ ಸೃಷ್ಟಿಯಾಗುತ್ತದೆ ಎಂದು ಡಾ. ಸುಧಾ ಮೂರ್ತಿ ಹೇಳಿದರು.

ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾನುವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಹೊಸ ಕಾಲದಲ್ಲಿ ಮಹಿಳೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವ ಸಂದರ್ಭ ಜಗಳ, ಶೋಷಣೆ ನಡೆಯುತ್ತಿವೆ. ಶೋಷಣೆ ನೈಜವಾಗಿದ್ದರೆ ಭಯವಿಲ್ಲದೆ ಧ್ವನಿ ಎತ್ತಬೇಕು ಎಂದರು. ಮಿಥ್ಯಾರೋಪ ಮಾಡುತ್ತ ಹೋದರೆ ಮಹಿಳೆಗೆ ಮಹಿಳೆಯೇ ಶತ್ರುವಾಗುತ್ತಾಳೆ ಎಂದರು.

ಕೆಲವು ಕಡೆ ರಾತ್ರಿ ಪಾಳಿ ಕೆಲಸಕ್ಕೆ ನಿಯೋಜಿಸಿದರೆ ಅದನ್ನೂ ಮೀ ಟೂ ಎಂದು ಆರೋಪ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿ ನಿಭಾಯಿಸದೆ ತಮ್ಮ ಮೇಲಿನವರು ಅಥವಾ ನೆರೆಹೊರೆಯವರ ಮೇಲೆ ಸುಳ್ಳು ಆರೋಪ ಮಾಡಿದರೆ ಮಹಿಳೆಯರಿಗೆ ಇನ್ನು ಮುಂದೆ ಕೆಲಸ ಕೊಡಲು ಸಂಘ ಸಂಸ್ಥೆ, ಕಂಪನಿಗಳೂ ಹಿಂದುಮುಂದು ನೋಡುತ್ತವೆ ಎಂದರು.

ಪಲ್ಲವಿ ಸಿ.ಟಿ.ರವಿ ಮತನಾಡಿ, ಮಹಿಳೆ ಸಶಕ್ತವಾಗಿ ಬೆಳೆಯುತ್ತಿದ್ದು, ತಾನು ದುರ್ಬಲವೆಂದು ಭಾವಿಸಬಾರದು. ಎಲ್ಲವನ್ನೂ ಮೀರಿ ಬೆಳೆಯುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ನಿರ್ಧರಿಸುವ ಹಕ್ಕು ಬೇಕು: ಇತ್ತೀಚೆಗೆ ಮಹಿಳೆಯರಿಗೆ ಶೇ.50ರಷ್ಟು ಪ್ರಾತಿನಿಧ್ಯ ದೊರೆಯುತ್ತಿದೆಯಾದರೂ ನಿರ್ಧಾರದ ಹಕ್ಕುಗಳು ಸಿಗುತ್ತಿಲ್ಲ. ಪಾರ್ಟಿ ಪಂಗಡಗಳಿಂದ ಮಹಿಳೆಯರು ಆಶಯಗಳು ದುರ್ಬಲಗೊಳಿಸಲಾಗುತ್ತಿದೆ. ಇದನ್ನು ಅರಿತು ಮಹಿಳೆಯರು ತಮ್ಮ ಸಮಸ್ಯೆ ಬಂದಾಗ ಒಂದಾಗಿ ಪರಿಹರಿಸಿಕೊಳ್ಳಲು ಧ್ವನಿ ಎತ್ತಬೇಕು ಎಂದು ಮಾಜಿ ಸಚಿವ ಮೋಟಮ್ಮ ಹೇಳಿದರು.

ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕೃತಿ ಕಲಿಸಿದಾಗ ಮಾತ್ರ ಮನೆ, ಸಮಾಜದಲ್ಲಿ ಉತ್ತಮ ಯುವಜನ ಸೃಷ್ಟಿಯಾಗುತ್ತಾರೆ. ಇಲ್ಲದಿದ್ದರೆ ದುರ್ಬಲ ಮನಸ್ಸಿನ ಯುವ ಸಮೂಹದಿಂದ ಆತಂಕಗಳು ಉಂಟಾಗುತ್ತವೆ ಎಂದರು.