ಅನುಭವಗಳೇ ಕಲಿಕೆಗೆ ಆಧಾರ

ಬೆಳಗಾವಿ: ಅನುಭವಗಳೇ ಕಲಿಕೆಗೆ ಆಧಾರ. ಮಾನವೀಯತೆ ಹಾಗೂ ಉತ್ತಮ ಉದ್ದೇಶಗಳೊಂದಿಗೆ ಬದುಕು ಸಾಗಬೇಕು ಎಂದು ಪತ್ರಕರ್ತ ಶಿವಾನಂದ ಚಿಕ್ಕಮಠ ಹೇಳಿದ್ದಾರೆ.

ನಗರದ ಕೆ.ಎಲ್.ಇ. ಸಂಸ್ಥೆಯ ಗಿಲಗಂಚಿ ಅರಟಾಳ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹಸಮ್ಮೇಳನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ರಚನಾತ್ಮಕ ವಿಚಾರಗಳನ್ನು ಆಚರಣೆಯಲ್ಲಿ ತರುವ ಮನಸ್ಸು ವಿದ್ಯಾರ್ಥಿಗಳಲಿ ಮೂಡಬೇಕು. ನಂಬಿಕೆ, ತಾಳ್ಮೆ ಹಾಗೂ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ದುರ್ಬಲತೆಯನ್ನೆ ಶಕ್ತಿಯನ್ನಾಗಿ ಪರಿವರ್ತನೆ ಮಾಡುವ ಛಲ ಹೊಂದಬೇಕು. ಯಾವುದೇ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದಾಗ ಸಾಧನೆ ಸವಾಲೆನಿಸುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತು ಹೇಳಿದರು.

ಉಪಪ್ರಾಚಾರ್ಯ ಸಿದ್ಧರಾಮ ಗದಗ ಮಾತನಾಡಿದರು. ಆದರ್ಶ ವಿದಾರ್ಥಿಗಳಿಗೆ ಹಾಗೂ ಶಿಕ್ಷಕ ಶಿವರಾಯ ಏಳುಕೋಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಾಚಾರ್ಯ ರವಿ ಪಾಟೀಲ, ಆಜೀವ ಸದಸ್ಯ ಮಹಾದೇವ ಬಳಿಗಾರ, ಪಾರ್ವತಿ ಚಿಮ್ಮದ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಣಿಕಂಠ ಪಾಟೀಲ, ದಾನೇಶ್ವರಿ ಗದಗ ಇದ್ದರು. ಜಿ.ರಾಮಚಂದ್ರಪ್ಪ ಸ್ವಾಗತಿಸಿದರು. ಶಿವರಾಯ ಏಳುಕೋಟಿ ಪರಿಚಯಿಸಿದರು. ಪ್ರಭು ನಿಡೋಣಿ, ಹನುಮಂತ ವೀರಗಂಟಿ ಪ್ರಶಸ್ತಿ ವಿತರಿಸಿದರು. ಅಲ್ಕಾ ಪಾಟೀಲ ನಿರೂಪಿಸಿದರು. ಎಸ್.ಎಸ್.ಹಲವಾಯಿ ವಂದಿಸಿದರು.