15 ಕೆಜಿ ಬಾಕ್ಸ್ 1,100 ರೂ.ಗೆ ಮಾರಾಟ, ರೈತರ ಮುಖದಲ್ಲಿ ಖುಷಿ
ಕೋಲಾರ : ಟೊಮ್ಯಾಟೊ ಬೆಲೆ ಮಾರುಕಟ್ಟೆಯಲ್ಲಿ ದಿನೇದಿನೆ ಏರತೊಡಗಿದ್ದು, 15 ಕೆ.ಜಿ. ಟೊಮ್ಯಾಟೊ ಬಾಕ್ಸ್ ಸಾವಿರ ರೂ.ಗಳ ಗಡಿ ದಾಟಿದೆ. ಕೆಜಿ ಟೊಮ್ಯಾಟೊ 75 ರೂ. ತನಕ ಮಾರಾಟವಾಗುತ್ತಿದೆ. ಕಳೆದ 3 ತಿಂಗಳಿನಿಂದ ಬೆಲೆ ಇಲ್ಲದೆ ನಷ್ಟ ಅನುಭವಿಸಿದ ರೈತರ ಮುಖದಲ್ಲಿ ದಸರಾಗೆ ಖುಷಿ ತಂದಂತಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ದೇಶದ ವಿವಿಧ ರಾಜ್ಯಗಳಿಗೆ ಮತ್ತು ರಾಷ್ಟ್ರಗಳಿಗೆ ಟೊಮ್ಯಾಟೊ ಕಳಿಸಿಕೊಡಲಾಗುತ್ತಿದ್ದು, ಆದರೆ ಈಗ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದು, ರಾಜ್ಯಕ್ಕೆ ಪೂರೈಕೆ ಮಾಡುವಷ್ಟು ಟೊಮ್ಯಾಟೊ ಮಾತ್ರ ಮಾರುಕಟ್ಟೆಗೆ ಬರುತ್ತಿರುವುದರಿಂದ ರಫ್ತಿಗೆ ಅವಕಾಶ ಇಲ್ಲದಂತಾಗಿದೆ. ಪ್ರತಿ ವರ್ಷ ಜೂನ್&ಜುಲೈನಲ್ಲಿ ಟೊಮ್ಯಾಟೊಗೆ ಉತ್ತಮ ಬೆಲೆ ಬರುತ್ತದೆಂದು ಫೆಬ್ರವರಿ&ಮಾರ್ಚ್ನಲ್ಲಿ ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡುತ್ತಿದ್ದರು. ಟೊಮ್ಯಾಟೊ ಬೆಳೆಗಾರರ ಸಂಖ್ಯೆ ಹೆಚ್ಚಾದ ಕಾರಣ ಜೂನ್&ಜುಲೈನಲ್ಲೇ ಟೊಮ್ಯಾಟೊ ಬೆಲೆ ಕುಸಿಯತೊಡಗಿತು.
ಸೆಪ್ಟೆಂಬರ್&ಅಕ್ಟೋಬರ್ನಲ್ಲಿ ಟೊಮ್ಯಾಟೊಗೆ ಉತ್ತಮ ಬೆಲೆ ಇಲ್ಲದಿರುವುದರಿಂದ ಬೆಳೆಗಾರರ ಸಂಖ್ಯೆ ಕ್ಷೀಣಿಸಿತ್ತು. ವೈರಸ್ ಕಾಟದ ನಡುವೆಯು ತೋಟಗಳನ್ನು ಜೋಪಾನ ಮಾಡಿಕೊಂಡಿರುವುದರಿಂದ ಉತ್ತಮ ಫಸಲು ಬಂದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯು ಸಿಗುವಂತಾಗಿದೆ. 15 ಕೆ.ಜಿ. ಬಾಕ್ಸ್ ಈಗ 1,100 ರೂ.ವರೆಗೆ ಮಾರಾಟವಾಗುತ್ತಿದೆ. ಸೆ.25ರಿಂದ ಹಂತ ಹಂತವಾಗಿ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಅ.1 ರಿಂದ 15 ಕೆ.ಜಿ. ಟೊಮೆಟೋ ಬಾಕ್ಸ್ 700 ರಿಂದ 800 ರೂ.ಗಳ ತನಕ ಮಾರಾಟವಾಗಿದೆ. ಕಳೆದ ಮೂರು ದಿನಗಳಿಂದ ಸಾವಿರ ರೂ.ಗಳು ದಾಟಿದ್ದು, ಸೋಮವಾರವೂ 1,100 ರೂ. ತನಕ ಮಾರಾಟವಾಗಿದೆ.
ಕಳೆದ 02 ದಿನಗಳಿಂದ 15 ಕೆ.ಜಿ. ಟೊಮೆಟೋ ಬಾಕ್ಸ್ 1300 ತನಕ ಮಾರಾಟವಾಯಿತು. ಸೋಮವಾರ 200 ರೂ.ಗಳಷ್ಟು ಕುಸಿತ ಕಂಡಿದ್ದು, 1100 ಗಳಿಗೆ ಮಾರಾಟವಾಯಿತು. ದೇಶದ ವಿವಿಧ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ಟೊಮೆಟೋ ಬೆಳೆಗಾರರು ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿರುವುದರಿಂದ 15 ದಿವಸಗಳಿಂದ ಸ್ವಲ್ಪ ಮಟ್ಟಿಗೆ ಬೆಲೆ ಬರುವಂತೆ ಆಗಿದೆ. ಈ ಬೆಲೆ ಬಹಳ ದಿವಸಗಳ ಕಾಲ ಇರುವುದಿಲ್ಲ.
-ಮುನೇಗೌಡ ಎಂಎನ್ಆರ್ ಮಂಡಿ ಮಾಲೀಕ
ಟೊಮ್ಯಾಟೊಗೆ ಕಾಡುತ್ತಿರುವ ವೈರಸ್ ಕಾಟದ ಜತೆಗೆ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಟೊಮ್ಯಾಟೊಬೆ ಬೆಲೆ ಬರುವುದಿಲ್ಲ ಎಂಬುವುದು ರೈತರ ಮಾತು. ಕಳೆದ ನಾಲ್ಕು ವರ್ಷಗಳ ಹಿಂದೆ ಈ ತಿಂಗಳಿನಲ್ಲಿ ಉತ್ತಮ ಬೆಲೆ ಬಂದಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಬೆಲೆ ಬಂದಿಲ್ಲ ಎಂದು ರೈತರು ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡತ್ತಿರಲಿಲ್ಲ.
ಕಿತ್ತಂಡೂರು ಸಂಪತ್ ಕುಮಾರ್, ಟೊಮೆಟೋ ಬೆಳೆಗಾರರು