
ಬೆಂಗಳೂರು: ನಗರದ ವಿವಿಧೆಡೆ ದುಬಾರಿ ಬೆಲೆಯ ಸೈಕಲ್‌ಗಳನ್ನು ಕಳವು ಮಾಡುತ್ತಿದ್ದವನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಜಿಗಣಿಯ ಭರಮಸಾಗರ ನಿವಾಸಿ ನಾರಾಯಣಸ್ವಾಮಿ (43) ಬಂಧಿತ. ಈತನಿಂದ 12 ಲಕ್ಷ ರೂ. ಮೌಲ್ಯದ 60 ಸೈಕಲ್ ಜಪ್ತಿ ಮಾಡಲಾಗಿದೆ. ಜೆ.ಪಿ. ನಗರ 8ನೇ ಹಂತದ ಸಾರಥಿನಗರದಲ್ಲಿ ಸೈಕಲ್ ಕಳವಾಗಿತ್ತು. ಈ ಸಂಬಂಧ ದಾಖಲಾದ ಪ್ರಕರಣದ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಿವಾಹಿತ ನಾರಾಯಣಸ್ವಾಮಿ ವೃತ್ತಿಪರ ಸೈಕಲ್ ಕಳ್ಳನಾಗಿದ್ದಾನೆ. ನಗರದ ವಿವಿಧೆಡೆ ಸುತ್ತಾಡಿ ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಸೈಕಲ್‌ಗಳನ್ನು ಕದ್ದು ಜಿಗಣಿ, ಆನೇಕಲ್ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ.
ಈ ಹಿಂದೆಯೂ ಸೈಕಲ್ ಕಳವು ಪ್ರಕರಣದಲ್ಲಿ ಹಲವು ಬಾರಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ನಾರಾಯಣಸ್ವಾಮಿ, ಜಾಮೀನು ಪಡೆದು ಬಿಡುಗಡೆಯಾದ ಮೇಲೆ ತನ್ನ ಹಳೇ ಚಾಳಿ ಮುಂದುವರಿಸಿದ್ದ. ವಿಚಾರಣೆ ವೇಳೆ ನೀಡಿದ ಹೇಳಿಕೆ ಮೇರೆಗೆ ಬುಕ್ಕಸಾಗರ ಹಳ್ಳಿಯಿಂದ 25 ಸೈಕಲ್, ಬೇಗೂರು ಕೊಪ್ಪ ರಸ್ತೆಯಲ್ಲಿ 24 ಸೈಕಲ್, ಕೊತ್ತನೂರು ಮತ್ತು ಕೋಣನಕುಂಟೆಯ ವಿವಿಧೆಡೆ 10 ಸೇರಿ ಒಟ್ಟು 60 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.