ಚನ್ನಗಿರಿ: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ನೌಕರಿಯಲ್ಲಿದ್ದರೂ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಹಾಗಾಗಿ ಸರ್ಕಾರಿ ಶಾಲೆಗಳ ಅಳಿವು ಮತ್ತು ಉಳಿವು ಪಾಲಕರ ಕೈಲಿದೆ ಎಂದು ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ ತಿಳಿಸಿದರು.
ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಶುಕ್ರವಾರ ಕೆಪಿಎಸ್ ಪ್ರಾಥಮಿಕ ಶಾಲೆಗೆ 10 ಸಾವಿರ ರೂ. ವೆಚ್ಚದ ಕ್ರೀಡಾ ಸಾಮಗ್ರಿಗಳನ್ನು ದೇಣಿಗೆ ನೀಡಿ ಮಾತನಾಡಿದರು.
ಶಿಕ್ಷಣ ಇಲಾಖೆ ಪ್ರತಿಯೊಂದು ಸವಲತ್ತುಗಳನ್ನು ಒದಗಿಸುತ್ತಿದೆ. ಆದರೆ ಪಾಲಕರು ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕಲಿತರೆ ಆಂಗ್ಲಭಾಷೆ ಮಾತನಾಡಲು, ಓದಲು ಬರುವುದಿಲ್ಲ, ಜತೆಗೆ ಆಂಗ್ಲಮಾಧ್ಯಮದಲ್ಲಿ ಕಲಿತವರಿಗೆ ಸಮಾಜದಲ್ಲಿ ಸ್ಥಾನಮಾನ ಹೆಚ್ಚು ಎನ್ನುವ ಕಾರಣಕ್ಕೆ ಖಾಸಗಿ ಶಾಲೆಗೆ ದಾಖಲಿಸುತ್ತಾರೆ. ಆದರೆ ವಿದ್ಯಾರ್ಥಿ ಅನುತ್ತೀರ್ಣನಾದರೆ ಅಥವಾ ಕಡಿಮೆ ಅಂಕ ಪಡೆದರೆ ಶಾಲೆಯಿಂದ ಹೊರಗೆ ಕಳುಹಿಸುತ್ತಾರೆ. ಆದ್ದರಿಂದ ಪಾಲಕರು ನುರಿತ ಶಿಕ್ಷಕರಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಲಿಯಲು ಕಳುಹಿಸಿ ಎಂದರು.
ಸರ್ಕಾರಿ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿಗೆ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕು. ಪ್ರತಿ ವರ್ಷ 7 ನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ 5 ಸಾವಿರ ರೂ. ನೀಡುತ್ತೇನೆ. ಇದರಿಂದ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ವಲ್ಪವಾದರೂ ಸಹಕಾರ ನೀಡಿದಂತಾಗುತ್ತದೆ. ನಿಸ್ವಾರ್ಥ ಸೇವೆ ಮತ್ತು ದಾನವು ಮನುಷ್ಯನ ವ್ಯಕ್ತಿತ್ವಕ್ಕೆ ಸಾರ್ಥಕತೆ ನೀಡುತ್ತದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಡಿ.ಬಿ. ಕಿರಣ್, ಸಿಆರ್ಪಿ ಕುಸುಮಾ, ಶಂಕರ್ ಗೌಡ, ರವಿಕುಮಾರ್, ಮುಖ್ಯಶಿಕ್ಷಕ ಎಚ್.ಎನ್. ರವಿ, ಪಾಪಯ್ಯ ಇದ್ದರು.