ಸಿನಿಮಾ

3.30 ಲಕ್ಷ ಹೆಕ್ಟೇರ್ ಬಿತ್ತನೆ ನಿರೀಕ್ಷೆ

ಹಾವೇರಿ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಇದಕ್ಕಾಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲೆಯಲ್ಲಿ ಕೃಷಿ ಬೆಳೆಗಳು ಕ್ರಮವಾಗಿ 3,30,447 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ. ಈಗಾಗಲೇ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಗುರಿಯನ್ವಯ ದಾಸ್ತಾನು ಮಾಡಲಾಗುತ್ತಿದೆ. ಹಂತ ಹಂತವಾಗಿ ಬಿತ್ತನೆ ಬೀಜಗಳನ್ನು ಬೇಡಿಕೆಯನುಸಾರ ಪೂರೈಸಲಾಗುವುದು.

ಬಿತ್ತನೆ ಬೀಜಗಳನ್ನು ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರಗಳು ಹಾಗೂ 22 ಇಲಾಖಾ ಹೆಚ್ಚುವರಿ ಕೇಂದ್ರಗಳು ಹಾಗೂ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಒಟ್ಟು 52 ಬೀಜ ಮಾರಾಟ ಕೇಂದ್ರಗಳಲ್ಲಿ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ರಸಗೊಬ್ಬರ: ಮುಂಗಾರು ಹಂಗಾಮಿಗೆ ರಸಗೊಬ್ಬರ ಹಂಚಿಕೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದ್ದು, 1,19,346 ಟನ್ ಹಂಚಿಕೆ ಮಾಡಲಾಗಿದೆ. ಆರಂಭಿಕ ದಾಸ್ತಾನು 33703.96 ಟನ್ ಸೇರಿ ಮೇ 15ರವರೆಗೆ 11,581.83 ಸರಬರಾಜು ಮಾಡಲಾಗಿದೆ ಹಾಗೂ ಈವರೆಗೆ 1,583 ಟನ್ ಹಂಚಿಕೆ ಮಾಡಲಾಗಿದೆ.

ಹಂಚಿಕೆ: ಪ್ರಸಕ್ತ 2023ರ ಮುಂಗಾರಿಗೆ ಯೂರಿಯಾ 52,595 ಟನ್, ಡಿಎಪಿ 23,706 ಟನ್, ಎಂ.ಒ.ಪಿ 2,851, ಕಾಂಪ್ಲೆಕ್ಸ್ 38,062 ಟನ್ ಹಾಗೂ ಎಸ್.ಎಸ್.ಪಿ 2150 ಟನ್ ಹಂಚಿಕೆಯಾಗಿದೆ.

ಜಿಲ್ಲೆಯಲ್ಲಿ ರೈತರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಆಧಾರ್ ಸಂಖ್ಯೆ ನೀಡಬೇಕು. ಮಾರಾಟಗಾರರು ಸಹ ರೈತರ ಆಧಾರ್ ಸಂಖ್ಯೆಯನ್ನು ಬಳಸಿ ರಸಗೊಬ್ಬರ ವಿತರಣೆ ಮಾಡಲು ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಬಿತ್ತನೆ ಗುರಿ ಹೆಕ್ಟೇರ್
ಗೋವಿನಜೋಳ 2,04,689
ಹತ್ತಿ 46,702
ಭತ್ತ 33,715
ಶೇಂಗಾ 19,519
ಸೋಯಾಬೀನ್ 14,401
ತೊಗರಿ 802
ಹೆಸರು 567
ಇತರೆ 10,052
ಒಟ್ಟು 3,30,447

ಬೀಜ ಖರೀದಿಗೆ ಕ್ಯೂ ಆರ್ ಕೋಡ್ ಕಡ್ಡಾಯ

2023ರ ಮುಂಗಾರು ಹಂಗಾಮಿನಿಂದ ಎಲ್ಲ ಕೃಷಿ ಪರಿಕರಗಳಿಗೆ ಕ್ಯೂ ಆರ್ ಕೋಡ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕ್ಯೂ ಆರ್ ಕೋಡ್ ನಮೂದಿಸಿರುವ ಬೀಜಗಳ ಪ್ಯಾಕೆಟ್‌ಗಳನ್ನು ದಾಸ್ತಾನೀಕರಿಸಲಾಗುವುದು.

ಬೀಜ ವಿತರಣೆ ವೇಳೆ ಪ್ರತಿ ಪ್ಯಾಕೆಟ್‌ಅನ್ನು ಸ್ಕಾೃನ್ ಮಾಡಿ, ಸೀಡ್ ಎಂಐಎಸ್‌ನಲ್ಲಿ ಕ್ಯೂ ಆರ್ ಕೋಡ್ ಮತ್ತು ಇತರೆ ವಿವರಗಳು ದಾಖಲಾದ ನಂತರ ಬೀಜ ವಿತರಣೆ ಮಾಡಲಾಗುವುದು.

ಮುಂಗಾರು ಹಂಗಾಮಿಗೆ ಈಗಾಗಲೇ 15,582 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆಯನ್ನು ಸಂಸ್ಥೆಗಳಿಗೆ ಸಲ್ಲಿಸಲಾಗಿದೆ. ಬೀಜ ದಾಸ್ತಾನು ಪ್ರಾರಂಭವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವಾರ್ಷಿಕ 800 ಮಿ.ಮಿ. ವಾಡಿಕೆ ಮಳೆಯಿದ್ದು, ಜನವರಿಯಿಂದ ಮೇ 15 ಅಂತ್ಯದವರೆಗೆ 119.90 ಮಿ.ಮಿ. ವಾಡಿಕೆ ಮಳೆಗೆ 45.70 ಮಿ.ಮಿ. ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉತ್ತಮವಾಗಿ ಮಳೆಯಾಗುವ ನಿರೀಕ್ಷೆಯಿದೆ. ರೈತರು ಭೂಮಿ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ
ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ

Latest Posts

ಲೈಫ್‌ಸ್ಟೈಲ್